ಕುಂದಾಪುರ: ಕ್ವಾರಂಟೈನ್ ನಿರ್ವಹಣೆಯ ಹೋಟೆಲ್ ಮಾಲಕರಿಗೆ ನಡೆದ ಕೊರೊನಾ ಜಾಗೃತಿ

Spread the love

ಕುಂದಾಪುರ: ಕ್ವಾರಂಟೈನ್ ನಿರ್ವಹಣೆಯ ಹೋಟೆಲ್ ಮಾಲಕರಿಗೆ ನಡೆದ ಕೊರೊನಾ ಜಾಗೃತಿ

ಕುಂದಾಪುರ: ಕ್ವಾರಂಟೈನ್ ಗಾಗಿ ಹೋಟೇಲ್ನಲ್ಲಿ ಉಳಿದುಕೊಂಡಿರುವವರ ಬಗ್ಗೆ ಅತ್ಯಂತ ಎಚ್ಚರಿಕೆಯ ಕ್ರಮಗಳನ್ನು ಹೋಟೇಲ್ನವರು ತೆಗೆದುಕೊಳ್ಳಬೇಕು. ಒಮ್ಮೆ ಉಪಯೋಗಿಸಿ ಎಸೆದ ವಸ್ತುಗಳನ್ನು ಪ್ರತ್ಯೇಕವಾಗಿ ತೆಗೆದಿರಿಸಿ, ವೈಜ್ಞಾನಿಕ ಕ್ರಮದಲ್ಲಿ ಅದರ ವಿಲೆವಾರಿ ಮಾಡಬೇಕು ಎಂದು ಆರೋಗ್ಯ ಇಲಾಖೆ ಜಿಲ್ಲಾ ಸಲಹೆಗಾರ ಗುರುರಾಜ್ ಹೇಳಿದ್ದಾರೆ.

ಕ್ವಾರಂಟೈನ್ನಲ್ಲಿ ಇರಬೇಕಾದವರನ್ನು ಇರಿಸಿಕೊಂಡು ಸೇವೆ ನೀಡಲು ಒಪ್ಪಿದ ಹೋಟೆಲ್ ಮಾಲಕರು ಸಿಬಂದಿಯ ಕುರಿತು ಜಾಗರೂಕರಾಗಿರಬೇಕು. ಜತೆಗೆ ಕ್ವಾರಂಟೈನ್ನಲ್ಲಿರುವವರ ಕಾಳಜಿ, ತ್ಯಾಜ್ಯ ವಿಲೇ, ಸಂಪರ್ಕ ಇತ್ಯಾದಿಗಳ ಕುರಿತು ಸ್ಪಷ್ಟ ಮಾಹಿತಿ ಪಡೆದಿರಬೇಕು ಎಂದು

ಇಲ್ಲಿನ ತಾಲ್ಲೂಕು ಪಂಚಾಯಿತಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ಕ್ವಾರಂಟೈನ್ನಿರ್ವಹಣೆಯ ಹೋಟೆಲ್ ಮಾಲಕರಿಗೆ ನಡೆದ ಕೊರೊನಾ ಜಾಗೃತೆಯ ಕುರಿತು ಮಾಹಿತಿ ಹಾಗೂ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಹೋಟೇಲ್ಗಳಲ್ಲಿ ಒಟ್ಟಾದ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸಿದ ಬಳಿಕ, ಆಸ್ಪತ್ರೆಗಳ ತ್ಯಾಜ್ಯ ಕೊಂಡೊಯ್ಯುವ ಸಂಸ್ಥೆಯ ಮೂಲಕ ಅದರ ವಿಲೇವಾರಿ ಮಾಡಬೇಕು. ಹೋಟೇಲ್ನ ಸಿಬ್ಬಂದಿಗಳ ಕುರಿತು ಜಾಗೃತೆ ವಹಿಸಬೇಕು. ಕ್ವಾರಂಟೈನಲ್ಲಿ ಇರುವವರ ಸಂಪರ್ಕ ಮಾಡುವವರು, ಆಹಾರ ನೀಡುವವರು, ಸ್ವಚ್ಛತಾ ಸಿಬ್ಬಂದಿಗಳು ಸೇರಿದಂತೆ ಹೋಟೇಲ್ನ ಎಲ್ಲರೂ, ಕಡ್ಡಾಯವಾಗಿ ಪ್ರತಿಯೊಂದು ಸುರಕ್ಷಾ ವಿಧಾನ ಅಳವಡಿಸಿಕೊಳ್ಳಲೇಬೇಕು. ಹೋಟೇಲ್ನಲ್ಲಿ ಕೆಲಸ ಮುಗಿಸಿ ಮನೆಗೆ ಹೋದ ಬಳಿಕ, ತಾವು ಧರಿಸಿದ ಬಟ್ಟೆಗಳನ್ನು ಪ್ರತ್ಯೇಕವಾಗಿ ಇಟ್ಟು, ಸ್ನಾನ ಮಾಡಿ ಶುಚಿಕೊಂಡ ಬಳಿಕ ಇತರ ವ್ಯಕ್ತಿಗಳ ಸಂಪರ್ಕ ಮಾಡಬೇಕು. ಕ್ವಾರಂಟೈನ್ಲ್ಲಿ ಇರುವವರ ಕಾಳಜಿ, ಅವಶ್ಯಕತೆ, ತ್ಯಾಜ್ಯ ವಿಲೆವಾರಿ ಹಾಗೂ ದಿನಚರಿಯ ಬಗ್ಗೆ ಮಾಹಿತಿಗಳನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಆರೋಗ್ಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯಾಡಳಿತ ಸಂಸ್ಥೆಗಳನ್ನು ಸಂಪರ್ಕಿಸವಂತೆ ಅವರು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ಮಾಹಿತಿ ಹಂಚಿಕೊಂಡ ಕುಂದಾಪುರ ಪುರಸಭೆಯ ಪರಿಸರ ಇಂಜಿನಿಯರ್ರಾಘವೇಂದ್ರ, ಕ್ವಾರಂಟೈನ್ಗಾಗಿ ಹೋಟೇಲ್ನಲ್ಲಿ ಇರುವವರಿಗೆ ಅವರ ಮನೆಯವರು ಊಟ ಅಥವಾ ಉಪಹಾರ ನೀಡುವುದಾದರೆ ಕೇವಲ ಪಾರ್ಸೆಲ್ನೀಡುವುದಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕು. ಸೋಂಕು ಹರಡಲು ಇರುವ ಕಾರಣ ಹಾಗೂ ಅದರ ಕುರಿತಾದ ಮುನ್ನೆಚ್ಚರಿಕೆಗಳ ಕುರಿತು ಸ್ವಚ್ಛತಾ ಸೇವಕರಿಗೆ ಹಾಗೂ ಸಿಬ್ಬಂದಿಗಳಿಗೆ ತಿಳಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬಿಸುವ ಅಗತ್ಯವಿದೆ. ಕ್ವಾರಂಟೈನ್ಅವಧಿಯಲ್ಲಿ ಇರುವ ಜಾಗವನ್ನು ಬಿಟ್ಟು ಹೊರಗಡೆಯಲ್ಲಿ ತಿರುಗಾಡುವುದು ಸೇರಿ, ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಲ್ಲಿ ಅವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದು ತಿಳಿಸಿದರು.

ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೇಶವ್ಶೆಟ್ಟಿಗಾರ್, ಡಾ.ಲತಾ ಹಾಗೂ ಡಾ.ವಿದ್ಯಾ ಇದ್ದರು.


Spread the love