ಕುಂದಾಪುರ-ಗಂಗೊಳ್ಳಿ ಸಂಪರ್ಕ ಸೇತುವೆ ನಿರ್ಮಾಣ: ಸ್ಥಳ ಪರಿಶೀಲನೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ

Spread the love

ಕುಂದಾಪುರ-ಗಂಗೊಳ್ಳಿ ಸಂಪರ್ಕ ಸೇತುವೆ ನಿರ್ಮಾಣ: ಸ್ಥಳ ಪರಿಶೀಲನೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ

ಕುಂದಾಪುರ: ನಗರದ ಕಳಿವಿನ ಬಾಗಿಲಿನಿಂದ ಗಂಗೊಳ್ಳಿಗೆ ಸಂಪರ್ಕ ಕಲ್ಪಿಸುವ ಗಂಗಾವಳಿ ನದಿಗೆ ಸೇತುವೆ ನಿರ್ಮಾಣ ಮಾಡುವಂತೆ ಕೆಲವು ವರ್ಷಗಳಿಂದ ಬೇಡಿಕೆಯಿದ್ದು ಇದನ್ನು ಆದ್ಯತೆಯ ನೆಲೆಯಲ್ಲಿ ಪರಿಗಣಿಸುವಂತೆ ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹಾಗೂ ಕುಂದಾಪುರದ ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಒತ್ತಾಯಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದಕ್ಕಾಗಿ ಶನಿವಾರ ಸಂಜೆ ಇಲ್ಲಿಗೆ ಆಗಮಿಸಿದ ಅವರು, ಕಾಂಗ್ರೆಸ್ ಪಕ್ಷದ ಮುಖಂಡರ ಕೋರಿಕೆ ಮೇರೆಗೆ ಕುಂದಾಪುರ-ಗಂಗೊಳ್ಳಿ ಸಂಪರ್ಕ ಸೇತುವೆ ನಿರ್ಮಾಣ ಮಾಡಬಹುದಾದ ಜಾಗದ ಪರಿಶೀಲನೆ ನಡೆಸಿ ಇಲಾಖಾ ಅಧಿಕಾರಿಗಳೊಂದಿಗೆ ಸೇತುವೆ ನಿರ್ಮಾಣ ಸಾಧ್ಯತೆ ಕುರಿತು ಚರ್ಚೆ ನಡೆಸಿದರು.

ಜಿಲ್ಲೆಯ ಪ್ರಮುಖ ಉಪವಿಭಾಗ ಕೇಂದ್ರವಾಗಿರುವ ಕುಂದಾಪುರ ನಗರಕ್ಕೆ ದಿನಂಪ್ರತಿ ಸಾಕಷ್ಟು ಗಣ್ಯರು ಆಗಮಿಸುತ್ತಿದ್ದು ಅವರ ಆತಿಥ್ಯ ಹಾಗೂ ವಾಸ್ತವ್ಯಕ್ಕೆ ಪ್ರಸ್ತುತ ಇರುವ ಲೋಕೋಪಯೋಗಿ ಪ್ರವಾಸಿ ಮಂದಿರ ಬೇಡಿಕೆಯಷ್ಟು ಅವಕಾಶವನ್ನು ಒದಗಿಸಲು ಸಾಧ್ಯವಾಗದೆ ಇರುವುದರಿಂದ ಬಹುಮಹಡಿಗಳ ಸುಸಜ್ಜಿತ ವ್ಯವಸ್ಥೆಯ ಪ್ರವಾಸಿ ಮಂದಿರವನ್ನು ಆದ್ಯತೆಯ ನೆಲೆಯಲ್ಲಿ ಕಲ್ಪಿಸಿಕೊಡುವಂತೆ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ ಹಾಗೂ ಕೆ. ಗೋಪಾಲ ಪೂಜಾರಿ ಸಚಿವರನ್ನು ಮನವಿ ಮಾಡಿಕೊಂಡರು.

ಕುಂದಾಪುರ ಫೆರ್ರಿ ರಸ್ತೆ ಹಾಗೂ ಗಂಗೊಳ್ಳಿ ಬಂದರು ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಸಚಿವರು ಅಧಿಕಾರಿಗಳಿಂದ ವಿಸ್ತೃತ ಮಾಹಿತಿ ಪಡೆದುಕೊಂಡು ಎರಡು ಬೇಡಿಕೆಗಳನ್ನು ವಿಶೇಷ ನೆಲೆಯಲ್ಲಿ ಪರಿಗಣಿಸುವುದಾಗಿ ತಿಳಿಸಿದರು.

ಈ ವೇಳೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪುರಸಭೆ ಸದಸ್ಯ ಚಂದ್ರಶೇಖರ ಖಾರ್ವಿ, ಕಾಂಗ್ರೆಸ್ ಮುಖಂಡರಾದ ಪ್ರಸನ್ನ ಕುಮಾರ್ ಶೆಟ್ಟಿ, ಇಚ್ಚಿತಾರ್ಥ ಶೆಟ್ಟಿ, ರೋಶನ್ ಶೆಟ್ಟಿ ಇದ್ದರು.


Spread the love