ಕುಂದಾಪುರ: ಗಾಳಿ-ಮಳೆಯ ಆರ್ಭಟ: ಸಾಲ್ಬುಡ ನಿವಾಸಿಗಳಿಗೆ ಸಂಕಟ
ಈ ಮಳೆಗಾದಲ್ಲಿ ಇದು ನಾಲ್ಕನೇ ಬಾರಿಗೆ ನೆರೆ.
ನೂರಾರು ಎಕರೆ ಕೃಷಿಭೂಮಿಯಲ್ಲಿ ಫಸಲು ಬಿಟ್ಟ ಭತ್ತದ ಸಸಿಗಳು ಸರ್ವನಾಶ.
ಸೌಪರ್ಣಿಕಾ ನದಿಯ ಆರ್ಭಟಕ್ಕೆ ಕೊಚ್ಚಿ ಹೋಗುತ್ತಿದೆ ನದಿ ದಂಡೆ.
ಕುಂದಾಪುರ: ಭಾನುವಾರ ಸಂಜೆ ಸುರಿದ ಭಾರೀ ಗಾಳಿ-ಮಳೆಗೆ ಬೈಂದೂರು ತಾಲೂಕಿನ ನಾವುಂದ ಗ್ರಾ.ಪಂ ವ್ಯಾಪ್ತಿಯ ಸಾಲ್ಬುಡದಲ್ಲಿನ ಮನೆ, ಕೃಷಿಭೂಮಿ ಹಾಗೂ ತೋಟಗಳಿಗೆ ನೆರೆ ನೀರು ನುಗ್ಗಿ ಜನಜೀವನ ಸ್ಥಬ್ದಗೊಂಡಿದೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಭಾನುವಾರ ಸಂಜೆ ಮತ್ತೆ ಬಿರುಸು ಪಡೆದುಕೊಂಡಿದ್ದು, ಗಾಳಿ-ಮಳೆಯ ಅಬ್ಬರಕ್ಕೆ ಭಾನುವಾರ ರಾತ್ರಿ 10 ಗಂಟೆಯ ಸುಮಾರಿಗೆ ಸಾಲ್ಬುಡದ ಸೌಪರ್ಣಿಕ ನದಿತೀರದಲ್ಲಿನ ಮನೆಗಳಿಗೆ, ದನದಕೊಟ್ಟಿಗೆ, ನಾಗ ದೇವಸ್ಥಾನವೂ ಸೇರಿದಂತೆ ನೂರಾರು ಎಕರೆ ಕೃಷಿಭೂಮಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಮಲೆನಾಡು, ಕೊಲ್ಲೂರು ಮತ್ತಿತರ ಭಾಗದಲ್ಲಿ ಸೋಮವಾರ ಮಳೆ ಕಡಿಮೆಯಿದ್ದರೂ, ರವಿವಾರ ಸಂಜೆಯಿಂದ ಆರಂಭಗೊಂಡು ರಾತ್ರಿಯಿಡೀ ಮಳೆ ಸುರಿದ ಪರಿಣಾಮ ಸೌಪರ್ಣಿಕ ನದಿ ತೀರದ ನಾವುಂದ ಭಾಗದ ಸಾಲ್ಬುಡಾ, ಸಸಿಹಿತ್ಲು, ಬಾಂಗಿನ್ಮನೆ, ಕಂಡಿಕೇರಿ, ಚೋದ್ರಂಗಡಿ, ದೇವಾಡಿಗರಕೇರಿ, ಮೂಡಾಮನೆ, ಚಟ್ನಿಹಿತ್ಲು ಪ್ರದೇಶದಲ್ಲಿ ಭಾರೀ ನೆರೆ ಸೃಷ್ಟಿಯಾಗಿದೆ.
ನಾವುಂದ-ಸಾಲ್ಬುಡ ಸಂರ್ಪ ರಸ್ತೆ ಜಲಾವೃತ:
ಸಾಲ್ಬುಡದಿಂದ ನಾವುಂದ ಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಸಾಲ್ಬುಡ ನಿವಾಸಿಗಳು ನಾವುಂದ ಪೇಟೆಗೆ ಬರಲು ಇದೀಗ ದೋಣಿಯನ್ನೇ ಆಶ್ರಯಿಸಿದ್ದಾರೆ. ಈ ಪ್ರದೇಶದಲ್ಲಿ ಐವತ್ತರಿಂದ ಅವರತ್ತರಷ್ಟು ಮನೆಗಳಿದ್ದು, ಇವರೆಲ್ಲರೂ ಕೆಲಸ ಇನ್ನಿತರ ಕಾರ್ಯಗಳಿಗಾಗಿ ನಾವುಂದದ ಮೂಲಕ ಕುಂದಾಪುರಕ್ಕೆ ಸಾಗಬೇಕು. ನಾವುಂದ ಗ್ರಾ.ಪಂ ವತಿಯಿಂದ ಈಗಾಗಲೇ ಸಾರ್ವಜನಿಕರ ಓಡಾಟಕ್ಕೆ ಒಂದು ದೋಣಿಯನ್ನು ಕೊಟ್ಟಿದ್ದು, ಆಚಿಂದೀಚೆಗೆ ಜನರನ್ನು ಕರೆತರಲು ಸಾಕಷ್ಟು ಸಮಯಾವಕಾಶಗಳು ಬೇಕಾಗಿರುವುದರಿಂದ ಇನ್ನೊಂದು ದೋಣಿ ನೀಡುವ ಜನಪ್ರತಿನಿಧಿಗಳ ಭರವಸೆ ಭರವಸೆಯಾಗಿಯೇ ಉಳಿದಿವೆ.
ಭತ್ತದ ಕೃಷಿ ಸರ್ವನಾಶ:
ಈ ವರ್ಷದ ಮಳೆಗಾಲ ಆರಂಭದಿಂದ ಇಲ್ಲಿಯ ತನಕವೂ ಈ ಭಾಗಕ್ಕೆ ನಾಲ್ಕೈದು ಬಾರಿ ನೆರೆ ನೀರು ನುಗ್ಗಿದೆ. ಒಮ್ಮೆ ನೆರೆ ಬಂದರೆ ಹತ್ತು ದಿನಗಳ ತನಕವೂ ನೀರು ಇಳಿಮುಖವಾಗುವುದಿಲ್ಲ. ನೀರು ನಿಂತ ಪರಿಣಾಮ ಫಸಲು ಬಿಟ್ಟ ಭತ್ತದ ತೆನೆಗಳು ಕೊಳೆತು ನೂರಾರು ಎಕರೆ ಕೃಷಿಗದ್ದೆಗಳು ಸಂಪೂರ್ಣ ನಾಶವಾಗಿದ್ದು, ರೈತರು ಕಂಗಲಾಗಿದ್ದಾರೆ.
ಬದು ನಿರ್ಮಾಣ ಕಾಮಗಾರಿ ವಿಸ್ತರಿಸಿ:
ನಾವುಂದ ಗ್ರಾಮದ ಸಾಲ್ಬುಡ ಸಮೀಪದ ಹೊಳೆಬದಿ ಕಂಡಿಕೇರಿ, ಚಟ್ನಿಹಿತ್ಲು ವಠಾರದ ಸೌಪರ್ಣಿಕ ನದಿತೀರದ ನಾಲ್ಕೈದು ಮನೆಗಳು ನದಿ ಕೊರೆತದಿಂದಾಗಿ ಅಪಾಯದಂಚಿನಲ್ಲಿದೆ. ಸ್ಥಳೀಯ ನಿವಾಸಿಗಳ ಮನವಿ ಮೇರೆಗೆ ಇದೇ ಪ್ರದೇಶದಲ್ಲಿ ಕಳೆದ ಬಾರಿ 150 ಮೀ. ನದಿ ದಂಡೆ ನಿರ್ಮಾಣ ಮಾಡಲಾಗಿದೆ. ಆದರೆ ಅದನ್ನು ಇನ್ನು ಸ್ವಲ್ಪ ದೂರದವರೆಗೆ ವಿಸ್ತರಿಸಿದ್ದರೆ ಈ ಮನೆಗಳಿಗೂ ಆತಂಕ ಇರುತ್ತಿರಲಿಲ್ಲ. ಹಿಂದೆ ಬದು ನಿರ್ಮಾಣ ಕಾಮಗಾರಿ ಮಾಡಿದ್ದರಿಂದಾಗಿ ಮುಂದಿನ ಭಾಗಗಳಲ್ಲಿ ನೀರಿನ ಒತ್ತಡ ಜಾಸ್ತಿಯಾಗಿ ನದಿ ದಂಡೆ ಕುಸಿಯಲಾರಂಭಿಸಿದೆ. ಈಗಾಗಲೇ ಸೌಪರ್ಣಿಕ ನದಿಗೆ ನಿರ್ಮಿಸಲಾಗಿರುವ ನದಿ ಬದುವನ್ನು ಇನ್ನಷ್ಟು ದೂರಗಳವರೆಗೆ ವಿಸ್ತರಿಸಿದರೆ ಈ ಭಾಗದ ನಿವಾಸಿಗಳು ಮಳೆಗಾಲದಲ್ಲಿ ಯಾವುದೇ ಆತಂಕಗಳಿಲ್ಲದೇ ಜೀವನ ಸಾಗಿಸಬಹುದಾಗಿದೆ.