ಕುಂದಾಪುರ: ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭ, ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಪಿಜಿ ಸೆಂಟರ್ ಸ್ಥಾಪನೆ ಸರ್ಕಾರದ ಮುಂದಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕವಾಗಿ ಮುಂದುವರಿದೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ರಾಷ್ಟ್ರ, ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸ್ಥಾನವಹಿಸುವತ್ತ ಕೊಂಡೊಯ್ಯಲಾಗುತ್ತದೆ ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಬಸ್ರೂರಿನಲ್ಲಿ ಮಂಗಳವಾರ ಪೂಜ್ಯ ಫಿಲಿಪ್ ನೇರಿಯವರ 500ನೇ ವರ್ಷದ ಶತಾಬ್ಧಿಯ ಸವಿನೆನಪಿಗಾಗಿ ಸೈಂಟ್ ಪಿಲಿಪ್ ನೇರಿ ಸೆಂಟ್ರಲ್ ಸ್ಕೂಲ್ (ಸಿಬಿಎಸ್ಇ)ನ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಕ್ಯಾಲೆಂಡರನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಸಮಾಜದಲ್ಲಿದ್ದ ಅಜ್ಞಾನ, ಮೂಢನಂಬಿಕೆಗಳ ಜೊತೆಗೆ ಶಿಕ್ಷಣ ಕ್ಷೇತ್ರದ ಸವಾಲು ಮಹತ್ತರವಾಗಿತ್ತು. ಹಂತ ಹಂತವಾಗಿ ಶೀಕ್ಷಣಕ್ಕೆ ಒತ್ತು ನೀಡುತ್ತಾ ಬಂದು ಕ್ರೈಸ್ತ ಸಮಾಜ ಬಾಂಧವರು ಕೆಥೋಲಿಕ್ ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಸರ್ಕಾರದ ಅನುದಾನಗಳಿಗೆ ಕಾಯದೇ ತೀರಿ ಹೋದ ಪತ್ನಿಯ ಸ್ಮರಣಾರ್ಥ ಬಸ್ರೂರಿನಲ್ಲಿ ಸೈಂಟ್ ಪಿಲಿಪ್ ನೇರೀ ಸೆಂಟ್ರಲ್ ಶಾಲೆ ನಿರ್ಮಿಸುವ ಮೂಲಕ ಮಹಾ ದಾನಿಗಳಾದ ಫಿಲಿಪ್ ಡಿ’ಕೋಸ್ಟಾ ಮತ್ತು ಕುಟುಂಬ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲೆ ನೆರವಾಗಿರುವುದು ಶ್ಲಾಘನೀಯ ಎಂದವರು, ಸತ್ತವರ ಹೆಸರಿನಲ್ಲಿ ಸಾಮಾಜಿಕ ಕೆಲಸ ಮಾಡಿದರೆ ಸ್ವರ್ಗದಲ್ಲಿ ಠೇವಣಿ ಸಿಗುತ್ತದೆ ಎಂದರು.
ನಮ್ಮ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಪ್ರದಾಯಗಳನ್ನೂ ಕಲಿಸುವುದರಿಂದಲೇ ಇಂದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪ್ರತಿಭೆಗಳಿಗೆ ಅಪೂರ್ವ ಗೌರವವಿದೆ. ನಮ್ಮ ಮಕ್ಕಳು ಪ್ರತಿಭಾನ್ವಿತರಾಗಲು ಪೋಷಕರ ಜೊತೆಗೆ ಇಲಾಖಾ ಅಧಿಕಾರಿಗಳು, ಶಿಕ್ಷಕ ವರ್ಗ, ಶಾಲಾ ಆಡಳಿತ ಮಂಡಳಿ ಬಹಳಷ್ಟು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಶಾಲೆಯನ್ನು ಲೋಕಾರ್ಪಣೆಗೊಳಿಸಿದ ಮಾತನಾಡಿದ ದಾನಿ ಫಿಲಿಪ್ ಡಿಕೋಸ್ಟಾ, ಬಹುತೇಕ ಎಲ್ಲಾ ಕಡೆಯಲ್ಲಿಯೂ ಕ್ರೈಸ್ತ ಸಮಾಜ ಬಾಂಧವರು ಶೈಕ್ಷಣಿಕವಾಗಿಯೂ, ಆರ್ಥಿಕವಾಗಿಯೂ ಬಹಳಷ್ಟು ಭದ್ರತೆಯಿದ್ದವರು. ಆದರೆ ಬಸ್ರೂರಿನಲ್ಲಿ ಸುಸಜ್ಜಿತ ಶಾಲೆ ಇಲ್ಲದ ಕಾರಣ ಅಲ್ಲಿಯ ಪರಿಸರ ಶೈಕ್ಷಣಿಕವಾಗಿ ಹಿನ್ನಡೆ ಸಾಧಿಸುತ್ತಿರುವುದನ್ನು 1984ರಲ್ಲಿಯೇ ಗಮನಿಸಿದ್ದೆ. ಅಂದಿನ ಕನಸು ನನಸಾಗಲು ಹಲವರ ಜೊತೆಗೆ ಚರ್ಚೆ ಮಾಡಿದ್ದೆ. ಆದರೆ ಅದು ಪ್ರಯೋಜನವಾಗಿಲ್ಲ. ಆದರೆ ಇಂದು ನನಗೆ ಸ್ವಂತ ಆರ್ಥಿಕ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಅದನ್ನು ದೇವರಿಗೇ ಶಾಲೆಯ ರೂಪದಲ್ಲಿ ಅರ್ಪಿಸಿದ್ದೇನೆ ಎಂದರು.
ಸಂತ ಪಿಲಿಪ್ ನೇರಿ ಚರ್ಚಿನ ಧರ್ಮಗುರು, ಶಾಲಾ ಸಂಚಾಲಕ ರೆ.ಫಾ.ವಿಶಾಲ್ ಲೋಬೋ ಮಾತನಾಡಿ, ನೂತನ ಶಾಲೆಯಲ್ಲಿ ಆರಂಭದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಾದ ಎಲ್ಕೆಜಿ ಹಾಗೂ ಯುಕೆಜಿಗಳಿಂದ ಆರಂಭವಾಗಲಿದ್ದು, ಹಂತ ಹಂತವಾಗಿ ವರ್ಷದಿಂದ ವರ್ಷಕ್ಕೆ ಭಡ್ತಿ ಪಡೆದುಕೊಳ್ಳಲಿದೆ. ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳ ಸಮಗ್ರ ಏಳಿಗೆಗೆ ದುಡಿಯುವ ನುರಿತ ಶಿಕ್ಷಕ ವೃಂದ, ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಒತ್ತು, ಉತ್ತಮ ಕ್ರೀಡಾಂಗಣ, ಕ್ರೀಡಾ ಪರಿಕರಗಳು, ಸಾಂಸ್ಕøತಿಕ ಪ್ರಭೆ ವಿಕಾಸಕ್ಕೆ ಆದ್ಯತೆ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಪುರಸ್ಕಾರ ಹೀಗೇ ವಿದ್ಯಾರ್ಥಿ ಸ್ನೇಹಿಯಾಗಿ ಹಲವಾರು ಗುರಿಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೈ|ರೆ|ಡಾ. ಜೆರಾಲ್ಡ್ ಐಸಾಕ್ ಲೋಬೋ ದೀಪ ಬೆಳಗಿಸಿ ಆಶೀರ್ವಚನ ನೀಡಿ, ನೂತನ ಶಾಲೆಯು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅನುಕೂಲವಾಗಲಿ. ಪ್ರತೀ ಯಶಸ್ವೀ ವಿದ್ಯಾರ್ಥಿಗಳಿಗೆ ಈ ಶಾಲೆ ಸ್ಮಾರಕವಾಗಲಿ. ತಾವು ಕಲಿತ ಸದ್ಗುಣಗಳು ಈ ಶಾಲೆಯ ಮೂಲಕ ಜಗದ್ವಿಖ್ಯಾತವಾಗಲಿ ಎಂದರು.
ಉಡುಪಿ ಧರ್ಮಪ್ರಾಂತ್ಯದ ವಿದ್ಯಾಮಂಡಳಿ ಕಾರ್ಯದರ್ಶಿ ವಂ| ಲಾರೆನ್ಸ್ ಸಿ ಡಿ’ಸೋಜಾ ಶಾಲಾ ಲಾಂಛನ ಬಿಡುಗಡೆಗೊಳಿಸಿದರು. ಕುಂದಾಪುರ ವಲಯ ಪ್ರಧಾನ ಧರ್ಮಗುರು ಅನಿಲ್ ಡಿ ಸೋಜಾ ಶಾಲಾ ವಾಹನ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ದಾನಿ ಫಿಲಿಪ್ ಡಿಕೋಸ್ಟಾ, ಇಂಜಿನಿಯರ್ ಸಂದೀಪ್ ಡಿ’ಅಲ್ಮೇಡಾ, ಗುತ್ತಿಗೆದಾರ ಆಲ್ಫ್ರೆಡ್ ಕೋತ್, ಧರ್ಮಗುರು ಹಾಗೂ ಶಾಲಾ ಸಂಚಾಲಕ ವಿಶಾಲ್ ಲೋಬೋ ಅವರನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ ವಹಿಸಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಮಹಾಮಾತೆ ಭಗಿನಿ ಮಾರಿಯೆಟ್ ಉಡುಪಿ ಧರ್ಮ ಪ್ರಾಂತ್ಯದ ಛಾನ್ಸಲರ್ ವಲೇರಿಯನ್ ಮೆಂಡೋನ್ಸಾ, ಬೆಥನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿ| ಕ್ರಿಸ್ಟೆಲ್ಲಾ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ್ ಟಿ. ಮೆಂಡನ್, ಕುಂದಾಪುರ ವಲಯದ ಪ್ರಭಾರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಭಾಸ್ಕರ ಬಿಲ್ಲವ ಉಪಸ್ಥಿತರಿದ್ದರು.