ಕುಂದಾಪುರ ತಾಲೂಕು ಆಸ್ಪತ್ರೆಯನ್ನು ಮರಳಿ ಸಾರ್ವಜನಿಕರ ಸೇವೆಗೆ ಮೀಸಲಿಡಿ: ತಾ.ಪಂ ಸದಸ್ಯರ ಆಗ್ರಹ
ಕುಂದಾಪುರ: ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ್ದರಿಂದ ಜನಸಾಮಾನ್ಯರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಸೂಕ್ತ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಕೋಟ ಹಾಗೂ ಅಜ್ಜರಕಾಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ತ್ರಾಸದಾಯಕವಾಗುತ್ತಿದೆÉ. ತಾಲೂಕು ಆಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಮೀಸಲಿಡಬೇಕು ಎಂದು ತಾ.ಪಂ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ಕುಂದಾಪುರ ತಾಲೂಕು ಪಂಚಾಯಿತಿ ಡಾ. ವಿ ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ಕರಣ್ ಪೂಜಾರಿ, ಕೋವಿಡ್ ಆಸ್ಪತ್ರೆಯನ್ನು ಸಮೀಪದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಮಾಡಬಹುದು. ಜನರ ಸಂಕಷ್ಟವನ್ನು ಅರಿತು ಕೋವಿಡ್ ಆಸ್ಪತ್ರೆಯನ್ನು ಸಮೀಪದ ವಿದ್ಯಾರ್ಥಿ ನಿಲಯಕ್ಕೆ ಸ್ಥಳಾಂತರಿಸಬಹುದು. ತಾಲೂಕು ಆಸ್ಪತ್ರೆ ಹಿಂದಿನಂತೆ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಮಾಡಿ ಕಳುಹಿಸಲಾಗುವುದು ಎಂದು ಅಧ್ಯಕ್ಷ ರಾಮ್ಕಿಶನ್ ಹೆಗ್ಡೆ ಹೇಳಿದರು.
ಸದಸ್ಯರ ಮಾತಿಗೆ ಉತ್ತರಿಸಿದ ತಾಲೂಕು ಆರೋಗ್ಯಾಧೀಕಾರಿ ಕಚೇರಿಯ ಡಾ. ಉಮೇಶ್, ಹಿಂದೆ ತಾಲೂಕು ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ನೂತನ ಕಟ್ಟಡದಕ್ಕೆ ಕೋವಿಡ್ ಆಸ್ಪತ್ರೆಯನ್ನು ವರ್ಗಾಯಿಸಲಾಗಿದೆ. ಹಳೆ ಕಟ್ಟಡದಲ್ಲಿ ಹೊರ ರೋಗಿಗಳ ವಿಭಾಗವನ್ನು ಆರಂಭಿಸಲಾಗಿದೆ. ಹೊರರೋಗಿಗಳ ವಿಭಾಗ ಹಾಗೂ ಕೋವಿಡ್ ಆಸ್ಪತ್ರೆ ನಡುವೆ ಸಾಕಷ್ಟು ಅಂತರ ಇದೆ. ಹೊರ ರೋಗಿ ವಿಭಾಗದವರೂ ಕೋವಿಡ್ ಆಸ್ಪತ್ರೆ ಸಂಪರ್ಕಕ್ಕೆ ಬರೋದಿಲ್ಲ. ಇನ್ನು ದಾಖಲಾದ ಕೊರೋನಾ ಸೋಂಕಿತರನ್ನು ಹೊರಗೆ ಬಿಡುವುದಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವಷ್ಟೇ ಆಂಬುಲೆನ್ಸ್ ಮೂಲಕ ಅವರ ಮನೆಗೆ ಬಿಡಲಾಗುತ್ತದೆ. ಇನ್ನು ಕೋವಿಡ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸ್ಥಳಾಂತರಿಸಬೇಕು ಎನ್ನುವ ಸದಸ್ಯರ ಒಕ್ಕೊರಲ ಆಗ್ರವನ್ನು ತಾಲೂಕು ವೈದ್ಯಾಧಿಕಾರಿಯವರಿಗೆ ತಲುಪಿಸುತ್ತೇನೆ ಎಂದರು.
ಕ್ವಾರಂಟೈನ್ನಲ್ಲಿದ್ದವರ ಸಮಸ್ಯೆಗೆ ಸರ್ಕಾರವೇ ಸ್ಪಂದಿಸಬೇಕು:
ಕೊರೋನಾ ಪಾಸಿಟಿವ್ ಬಂದವರ ಮನೆ, ವಠಾರ ಎಲ್ಲಾ ಸೀಲ್ಡೌನ್ ಮಾಡಲಾಗುತ್ತದೆ. ಸೀಲ್ಡೌನ್Áದ ಮನೆಯ ಕುಟುಂಬಸ್ಥರಿಗೆ ಯಾರ ಸಂಪರ್ಕವೂ ಇರುವುದಿಲ್ಲ, ದಿನಬಳಕೆಯ ವಸ್ತು ಸಿಗದೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸೀಲ್ಡೌನ್ ಸರ್ಕಾರವೇ ಮಾಡುವುದರಿಂದ ಸಮಸ್ಯೆಗೂ ಸರ್ಕಾರವೇ ಸ್ಪಂದಿಸಬೇಕು. ಸೀಲ್ಡೌನ್ ಮಾಡಿದ ನಂತರ ಯಾವುದೇ ಇಲಾಖೆ ಅಥವಾ ಅಧಿಕಾರಿಗಳು ಕ್ವಾರಂಟೈನ್ನಲ್ಲಿದ್ದವರ ಕಷ್ಟ ಕೇಳಲು ಬರುವುದಿಲ್ಲ. ಸೀಲ್ಡೌನ್ ಪ್ರದೇಶದ ವಾಸಿಗಳಿಗೆ ಸೌಲಭ್ಯ ಒದಗಿಸಬೇಕು ಎಂದು ಸದಸ್ಯೆ ಜ್ಯೋತಿ ಪುತ್ರನ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಪಡಿತರ ಚೀಟಿ ಇಲ್ಲದವರು ಆಧಾರ ಕಾರ್ಡ್ ತೋರಿಸಿದರೆ, ಅವರಿಗೆ ಪಡಿತರ ನೀಡುವ ವ್ಯವಸ್ಥೆ ಇದೆ. ಸರ್ಕಾರ ಉಚಿತ ಅಕ್ಕಿ ನೀಡುತ್ತಿದ್ದು, ಪಡಿತರ ಇಲ್ಲದವರಿಗೆ ಕಾರ್ಮಿಕ ಕೋಟಾದಡಿಯಲ್ಲಿ ಉಚಿತ ಅಕ್ಕಿ ನೀಡಲಾಗುತ್ತದೆ ಎಂದರು.
ಉಪಾಧ್ಯಕ್ಷ ರಾಮ್ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಪೈ, ಇಒ ಕೇಶವ ಶೆಟ್ಟಿಗಾರ್, ಕುಂದಾಪುರ ತಹಸೀಲ್ದಾರ್ ಆನಂದಪ್ಪ ನಾಯ್ಕ್ ಇದ್ದರು.
ಕೊರೋನಾ ಯೋಧರಿಗೆ ಚಪ್ಪಾಳೆ ಮೂಲಕ ಅಭಿನಂದನೆ:
ಸಭೆ ಆರಂಭವಾಗುತ್ತಿದ್ದಂತೆಯೇ ಸದಸ್ಯ ಉಮೇಶ್ ಶೆಟ್ಟಿ ವಿಷಯ ಪ್ರಸ್ತಾಪಿಸಿ ಕೊರೋನಾ ವಿರುದ್ದ ಹೋರಾಡಲು ಅನೇಕ ಸರ್ಕಾರಿ ಅಧೀಕಾರಿಗಳು, ಸಿಬ್ಬಂದಿಗಳು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಹವಾನಿಯಂತ್ರಿತ ಕಚೇರಿಯಲ್ಲಿ ಕುರ್ಚಿ ಮೇಲೆ ಕೂತು ಕೆಲಸ ಮಾಡುವ ಅಧಿಕಾರಿಗಳು ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಕೊರೋನಾ ಈ ಮಟ್ಟಿಗೆ ನಿಯಂತ್ರಣದಲ್ಲಿರಲು ಅವರೆಲ್ಲರ ಹೋರಾಟದಿಂದಾಗಿ. ಹೀಗಾಗಿ ಈ ಸಭೆಯಲ್ಲಿ ಅವರೆಲ್ಲರಿಗೂ ಅಭಿನಂದನೆ ಸಲ್ಲಿಸಬೇಕು ಎಂದರು. ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಕೊರೋನಾ ಯೋಧರಿಗೆ ಅಭಿನಂದನೆ ಸಲ್ಲಿಸಲಾಯಿತು.