ಕುಂದಾಪುರ: ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕರೆತರಲು ತೆರಳಿದ ಹೆಡ್ ಕಾನ್ಸ್ ಟೇಬಲ್ ಅವರಿಗೆ ಹಲ್ಲೆ ನಡೆಸಿ ಜೀವ ಬೇದರಿಕೆ ಹಾಕಿದ ಘಟನೆ ಕೋಟ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಕೋಟ ಪೋಲಿಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಅಶೋಕ್ ಹೆಚ್ ಎಸ್ ಅವರು ಕಾನ್ಸ್ ಟೇಬಲ್ ಮಂಜಪ್ಪ ಅವರೊಂದಿಗೆ ಸೇರಿಕೊಂಡು ಪ್ರಕರಣದ ಆರೋಪಿ ರಮೇಶ ಎಂಬುವನ ಪತ್ತೆ ಬಗ್ಗೆ ವಿಶೇಷ ಕರ್ತವ್ಯದ ಮೇಲೆ ತೆರಳಿ ಆರೋಪಿಯು ಹುಣ್ಸೆಮಕ್ಕಿ ಎಸ್.ಡಿ.ಸಿ.ಸಿ ಬ್ಯಾಂಕ್ ಬಳಿ ಇರುವುದಾಗಿ ದೊರೆತ ವರ್ತಮಾನದಂತೆ ಅಲ್ಲಿಗೆ ತೆರೆಳಿ 10:30 ಗಂಟೆಗೆ ಆರೋಪಿ ರಮೇಶನಿಗೆ ಆತನ ಮೇಲೆ ಇದ್ದ ಪ್ರಕರಣದ ಬಗ್ಗೆ ತಿಳಿಸಿ ವಶಕ್ಕೆ ಪಡೆದು ಕೆ.ಎ 20 ಸಿ 3375ನೇ ನಂಬ್ರದ ಆಟೋ ರಿಕ್ಷಾದಲ್ಲಿ ಕುಳ್ಳಿರಿಸಿ ಕೊಂಡು ದಬ್ಬೆಕಟ್ಟೆ ಕಡೆಯಿಂದ ಕೆದೂರು ಕಡೆಗೆ ಬರುವಾಗ ಆಪಾದಿತ ರಮೇಶ ಆಟೋ ಚಾಲಕ ರಾಘವೇಂದ್ರ ನನ್ನು ಏಕಾಏಕಿ ಒಂದೇ ಸಲ ದೂಡಿ ಹಾಕಿ ಆಟೋರಿಕ್ಷಾ ಪಲ್ಟಿ ಮಾಡಲು ಹೋದಾಗ ಅಶೋಕ್ ಮತ್ತು ಮಂಜಪ್ಪ ಅವರು ಆತನನ್ನು ಹಿಡಿದು ಕೊಂಡಾಗ ಸಮವಸ್ತ್ರ ಹರಿದು ಹಾಕಿದ್ದು ಬಳಿಕ ಆತನನ್ನು ಹಿಡಿದು ಕೊಂಡು ಕೆದೂರು ಬಳಿ ಬರುವಾಗ ಆಪಾದಿತ ಮಾವ ದಾರಿಯಲ್ಲಿ ಸಿಕ್ಕಿದ್ದು ಅಲ್ಲಿ ಪುನಃ ಅಶೋಕ್ ಮತ್ತು ಮಂಜಪ್ಪ ಅವರ ಮೇಲೆ ಹಲ್ಲೆ ಮಾಡಿ ರಿಕ್ಷಾ ಚಾಲಕನನ್ನು ದೂಡಿ ಹಾಕಿದ್ದು ಆ ಸಮಯ ಆಪಾದಿತನ ಮಾವ ಅಲ್ಲಿಯೇ ಹತ್ತಿರದಲ್ಲಿರುವ ಆತನ ಮನೆಯಿಂದ ಆಪಾದಿತನ ತಂಗಿ ಮಮತಾ, ಭಾವ ಮಂಜುನಾಥ , ತಮ್ಮ ಗಣೇಶ, ಶ್ರೀನಿವಾಸ ರವರನ್ನು ಕರೆದುಕೊಂಡು ಬಂದಿದ್ದು ಎಲ್ಲರು ಸೇರಿ ಮನೆಯಿಂದ ತಂದಿದ್ದ ದೊಣ್ಣೆಯಿಂದ ಸಮವಸ್ತ್ರದಲ್ಲಿದ್ದ ಪೋಲಿಸ್ ಸಿಬಂದಿಯ ಕೈ,ಕುತ್ತಿಗೆಗೆ ಹಾಗೂ ಸಿಬ್ಬಂದಿ ಮಂಜಪ್ಪ ಅವರಿಗೂ ಸಹಾ ಮರದ ದೊಣ್ಣೆಯಿಂದ ಹೊಡೆದು ಕಾಲಿನಿಂದ ತುಳಿದು ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ವೇಳೆ ಪೋಲಿಸರಿಗೆ ಹಲ್ಲೆ ಮಾಡುವುದನ್ನು ನೋಡಿ ಜಪ್ತಿಯ ರಾಘವೇಂದ್ರ ಮತ್ತು ಅಣ್ಣಿ ಭಂಡಾರಿ ಹಾಗೂ ರಿಕ್ಷಾ ಚಾಲಕ ರಾಘು ಗಲಾಟೆ ತಪ್ಪಿಸಲು ಬಂದಿದ್ದು ಆ ಸಮಯದಲ್ಲಿ ಆಪಾದಿತರು ರಾಘವೇಂದ್ರ ರವರಿಗೂ ಸಹ ಹಲ್ಲೆ ಮಾಡಿರುತ್ತಾರೆ ಎಂದು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.