ಕುಂದಾಪುರ: ಬಾವಿಗೆ ಬಿದ್ದು ವ್ಯಕ್ತಿ ಸಾವು: ರಕ್ಷಿಸಲು ಹೋದ ಸಹೋದರ ಪಾರು

Spread the love

ಕುಂದಾಪುರ: ಬಾವಿಗೆ ಬಿದ್ದು ವ್ಯಕ್ತಿ ಸಾವು: ರಕ್ಷಿಸಲು ಹೋದ ಸಹೋದರ ಪಾರು

ಕುಂದಾಪುರ: ಮನೆ ಸಮೀಪದ ಬಾವಿಗೆ ಆಯ ತಪ್ಪಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದ ಗುಡ್ಡಮ್ಮಾಡಿಯಲ್ಲಿ ನಡೆದಿದೆ.

ಗುಡ್ಡಮ್ಮಾಡಿ ನಿವಾಸಿ ವಾಲ್ಟರ್ ಡಿ ಅಲ್ಮೇಡಾ(52) ಮೃತ ದುರ್ದೈವಿ. ಸಹೋದರನ ಕಾಪಾಡಲು ಬಾವಿಗೆ ಇಳಿದ ಅಲ್ಬನ್ ಅಲ್ಮೆಡಾ ಅಸ್ವಸ್ಥಗೊಂಡು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ವಿವರ:
ಕಳೆದ ಕೆಲ ತಿಂಗಳ ಹಿಂದೆ ತೋಡಿರುವ 20 ಅಡಿ ಆಳದ 5 ಅಡಿ ಅಗಲವಿರುವ ಬಾವಿಗೆ ಇಂದು ಬೆಳಿಗ್ಗೆ ವಾಲ್ಟರ್ ಅಲ್ಮೇಡಾ ಆಯತಪ್ಪಿ ಬಿದ್ದಿದ್ದರು. ಇಕ್ಕಟ್ಟಾದ ಬಾವಿ ಆದ್ದರಿಂದ ಆಮ್ಲಜನಕದ ಕೊರತೆಯಿಂದಾಗಿ ಮೇಲಕ್ಕೆ ಬರಲಸಾಧ್ಯವಾದ್ದರಿಂದ ಬಾವಿಗೆ ಬಿದ್ದ ಸಹೋದರನನ್ನು ಕಾಪಾಡಲು ಇಳಿದ ಅಲ್ಬನ್ ಕೂಡ ಅಸ್ವಸ್ಥಗೊಂಡು ಬಾವಿಯಲ್ಲೇ‌ ಸಿಲುಕಿಕೊಂಡಿದ್ದರು. ತಕ್ಷಣವೇ ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಇಬ್ಬರನ್ನು ಮೇಲಕ್ಕೆತ್ತಿದ್ದಾರೆ. ಅಷ್ಟರಲ್ಲಾಗಲೇ ವಾಲ್ಟರ್ ಮೃತಪಟ್ಟಿದ್ದು ಅಂಬುಲೆನ್ಸ್ ಮೂಲಕ ಅಲ್ಬನ್ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಸಹೋದರರಿಬ್ಬರು ಶ್ರಮಜೀವಿಗಳಾಗಿದ್ದು ಸಿಂದಗಿಯಲ್ಲಿರುವ ಹೋಟೆಲ್ ಒಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು ಲಾಕ್ ಡೌನ್ ಹಿನ್ನೆಲೆ ಊರಿಗೆ ಬಂದಿದ್ದರು. ಮೃತ ವಾಲ್ಟರ್ ಡಿ ಅಲ್ಮೇಡಾ ಅವರಿಗೆ ಪತ್ನಿ, ಹಾಗೂ ಓರ್ವ ಪುತ್ರಿ ಇದ್ದಾರೆ.

ಸ್ಥಳಕ್ಕೆ ಗಂಗೊಳ್ಳಿ ಠಾಣಾಧಿಕಾರಿ ಭೀಮಾಶಂಕರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಸಹ ಠಾಣಾಧಿಕಾರಿ ಕೊರಗ ನಾಗ ಮೊಗೇರ, ಪ್ರಮುಖ ಅಗ್ನಿಶಾಮಕ ಪ್ರದೀಪ್ ನಾಯ್ಕ, ಬಿ. ಸುಂದರ, ಫೈರ್ ಮನ್ ಗಳಾದ ಪಿ. ಗೋಪಾಲ, ಮಹೇಶ್ ಶೆಟ್ಟಿ, ಪದ್ಮನಾಭ ಕಾಂಚನ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love