ಕುಂದಾಪುರ : ಬಾವಿಗೆ ಬಿದ್ದ ಕಪ್ಪು ಚಿರತೆ ರಕ್ಷಣೆ
ಕುಂದಾಪುರ : ಇಲ್ಲಿಗೆ ಸಮೀಪದ ಶಿರೂರು ಹೆಮ್ಮಣಿಕೆ ಎಂಬಲ್ಲಿ ಕೃಷಿಕರ ತೋಟದ ಬಾವಿಗೆ ಬಿದ್ದ, ಉದ್ದನೆಯ ಕಪ್ಪು ಚಿರತೆಯೊಂದನ್ನು ರಕ್ಷಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೆಮ್ಮಣಿಕೆಯ ಕೃಷಿಕ ಕೃಷ್ಣ ನಾಯ್ಕ ಎನ್ನುವವರ ಮನೆ ಸಮೀಪದ ತೋಟದಲ್ಲಿನ ಆವರಣವಿಲ್ಲದ ಬಾವಿಗೆ ಶುಕ್ರವಾರ ರಾತ್ರಿ ಚಿರತೆ ಬಿದ್ದಿರುವ ಬಗ್ಗೆ ಶಂಕೆ ಇದೆ. ಶನಿವಾರ ಮಧ್ಯಾಹ್ನ 3 ಗಂಟೆಯ ವೇಳೆ ಬಾವಿಯಲ್ಲಿ ಶಬ್ದ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯ ಯುವಕನೊಬ್ಬ ಬಾವಿಯಲ್ಲಿ ಇಣುಕಿ ನೋಡಿದಾಗ ಚಿರತೆ ಇರುವಿಕೆ ಗಮನಕ್ಕೆ ಬಂದಿದೆ.
ಸ್ಥಳೀಯ ಪ್ರಮುಖರಾದ ಶೇಖರ ಶೆಟ್ಟಿ ಹಳ್ನಾಡು ಎನ್ನುವವರಿಗೆ ಈ ಕುರಿತು ತಿಳಿಸಿದಾಗ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಾವಿಯಿಂದ ಮೇಲಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮೇಲಕ್ಕೆ ಬಂದ ಚಿರತೆ ಸಮೀಪದ ರಬ್ಬರ್ ಪ್ಲಾಂಟೇಶನ್ ಒಳಗೆ ಓಡಿ ಹೋಗಿದೆ.
ಇಲ್ಲಿ ಕಾಣಿಸಿಕೊಂಡಿರುವ, ಅಂದಾಜು 4 ಅಡಿ ಉದ್ದ ಹಾಗೂ 2 ಅಡಿ ಎತ್ತರವಿರುವ ಕಪ್ಪು ಚಿರತೆ ( ಬ್ಲಾಕ್ ಪೈಂತರ್ ) ತೀರಾ ಅಪರೂಪದ್ದಾಗಿದ್ದು, ಕಳೆದ ಕೆಲ ದಿನಗಳಿಂದ ಈ ಪರಿಸರದಲ್ಲಿ ತಿರುಗಾಡುತ್ತಿದ್ದು, ಸುರೇಂದ್ರ ನಾಯ್ಕ್ ಎನ್ನುವವರ ಸಣ್ಣ ಕರುವನ್ನು ಹೊತ್ತೊಯ್ದಿದೆ ಎಂದು ಮೂಲಗಳು ತಿಳಿಸಿವೆ.