ಕುಂದಾಪುರ: ಬೆಳ್ಳಂಬೆಳಗ್ಗೆ ಲಾಂಗ್ ಹಿಡಿದು ಕಾರು ಚೇಸ್: ದುಷ್ಕರ್ಮಿಗಳ ಹೈಡ್ರಾಮಕ್ಕೆ ಬೆಚ್ಚಿಬಿದ್ದ ಜನತೆ
ಕುಂದಾಪುರ: ಕ್ಷುಲ್ಲಕ ಕಾರಣವೊಂದಕ್ಕೆ ಇತ್ತಂಡಗಳ ನಡುವೆ ನಡೆದ ಗಲಾಟೆಯ ಬಳಿಕ ಎರಡು ತಂಡಗಳು ಪ್ರತ್ಯೇಕ ಎರಡು ಕಾರುಗಳಲ್ಲಿ ಒಂದನ್ನೊಂದು ಕಾರು ಹಿಂಬಾಲಿಸಿಕೊಂಡು ಚೇಸ್ ಮಾಡಿದ ಪರಿಣಾಮ ಒಂದು ತಂಡ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾದ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾವುಂದ ಕಡೆಯಿಂದ ಎರಡು ಕಾರುಗಳಲ್ಲಿ ಬಂದ ಎರಡು ತಂಡಗಳ ಪೈಕಿ ತಲ್ಲೂರು- ನೇರಳಕಟ್ಟೆ ಮಾರ್ಗಮದ್ಯೆ ಹಟ್ಟಿಯಂಗಡಿ ಗ್ರಾಮಪಂಚಾಯತ್ ಎದುರು ಗುಡ್ಡೆಯಂಗಡಿ ಬಳಿ ಒಂದು ಕಾರು ಪಲ್ಟಿಯಾಗಿದ್ದು ಅದರಲ್ಲಿ ಸಿಕ್ಕ ಲಾಂಗು ಕೆಲ ಹೊತ್ತು ಸೃಷ್ಠಿಸಿದೆ.
ಎರಡು ದಿನಗಳ ಹಿಂದೆ ನಾವುಂದ ಭಾಗದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಗಲಾಟೆ ನಡೆದಿದ್ದು ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿತ್ತು. ಇದೇ ಗಲಾಟೆ ಮುಂದುವರಿದ ಭಾಗವಾಗಿ ಇಂದು ಬೆಳಿಗ್ಗೆ ಅದೇ ಎರಡು ತಂಡಗಳು ಪ್ರತ್ಯೇಕ ಎರಡು ಕಾರುಗಳಲ್ಲಿ ಒಂದನ್ನೊಂದು ಕಾರು ಹಿಂಬಾಲಿಸಿಕೊಂಡು ಹೆದ್ದಾರಿಯಲ್ಲೇ ಬಂದಿದೆ. ಬಳಿಕ ಎರಡು ಕಾರುಗಳು ಚೇಸ್ ಮಾಡುತ್ತಾ ಹಟ್ಟಿಯಂಗಡಿ ಗ್ರಾಮಪಂಚಾಯತ್ ಎದುರು ಗುಡ್ಡೆಯಂಗಡಿ ಎಂಬಲ್ಲಿ ಕೆಂಪು ಬಣ್ಣದ ಬಲೆನೋ ಕಾರು ಚರಂಡಿಗೆ ಹಾರಿದ್ದು ಆ ಕಾರಿನಲ್ಲಿದ್ದ ಐದಾರು ಮಂದಿ ಪರಾರಿಯಾಗಿದ್ದರು.
ಬಳಿಕ ಅದೇ ದಾರಿ ಬರುತ್ತಿದ್ದ ಕುಂದಾಪುರ ಸಂಚಾರಿ ಠಾಣೆಯ ಎಎಸ್ಐ ಸುಧಾ ಪ್ರಭು ಸ್ಥಳೀಯ ಯುವಕರ ನೆರವಿನಿಂದ ದುಷ್ಕರ್ಮಿಗಳ ಬೆಂಬತ್ತಿ ಹೋದರಾದರೂ ಅವರೆಲ್ಲರೂ ತಪ್ಪಿಸಿಕೊಂಡಿದ್ದಾರೆ. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಕುಂದಾಪುರ ನಗರ ಠಾಣಾ ಪಿಎಸ್ಐ, ಕುಂದಾಪುರ ಗ್ರಾಮಾಂತರ ಹಾಗೂ ಸಂಚಾರಿ ಠಾಣೆಯ ಸಿಬ್ಬಂದಿಗಳು ಇನ್ನೊಂದು ಕಾರಿನಲ್ಲಿದ್ದವರನ್ನು ವಿಚಾರಣೆ ನಡೆಸಿದ್ದಾರೆ. ಅಷ್ಟೊತ್ತಿಗಾಗಲೇ ಪೊಲೀಸರ ಮತ್ತೊಂದು ತಂಡ ಚರಂಡಿಗೆ ಹಾರಿದ ಕಾರಿನಲ್ಲಿದ್ದು ಪರಾರಿಯಾದ ಇಬ್ಬರನ್ನು ಕರೆತಂದಿದ್ದಾರೆ.
ಕಾರಿನಲ್ಲಿ ತಲವಾರು ಪತ್ತೆಯಾದ ಕಾರಣ ಪೊಲೀಸರಿಗೆ ಈ ಪ್ರಕರಣವು ತಲೆನೋವಾಗಿದ್ದು ಈ ಹಿಂದಿನ ಪ್ರಕರಣ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೊಳಪಡುವುದರಿಂದ ಎಲ್ಲರನ್ನೂ ಗಂಗೊಳ್ಳಿ ಪೊಲೀಸರು ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.