ಕುಂದಾಪುರ: ಮಹಿಳೆಯೋರ್ವಳಿಗೆ ತನ್ನ ಮೈದುನ ಹಾಗೂ ಆತನ ಹೆಂಡತಿ ಸೇರಿ ಹೊಡೆದ ಪರಿಣಾಮ ಗಂಭಿರ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಸಾವನಪ್ಪಿದ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪದ ಕಳುವಿನ ಬಾಗಿಲು ಬಳಿ ವರದಿಯಾಗಿದೆ.
ಮೃತಳನ್ನು ಗಂಗೊಳ್ಳಿ ಉಪ್ಪಿನಕುದ್ರು ನಿವಾಸಿ ವಿಜಯ ಖಾರ್ವಿ ಅವರ ಪತ್ನಿ ಜ್ಯೋತಿ ಖಾರ್ವಿ (26) ಎಂದು ಗುರುತಿಸಲಾಗಿದೆ.
ಪೋಲಿಸ್ ಮೂಲಗಳ ಪ್ರಕಾರ ಭಾನುವಾರ ಮಧ್ಯಾಹ್ನ ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಜ್ಯೋತಿ ಖಾರ್ವಿ ಹಾಗೂ ಆಕೆಯ ಮೈದುನ ಗುರು ರಾಘವೇಂದ್ರ ಖಾರ್ವಿ ಹಾಗೂ ಆತನ ಪತ್ನಿ ದಿವ್ಯಾಳ ಜೊತೆ ಜಗಳ ನಡೆದಿದ್ದು, ಜಗಳ ಹೊಡೆದಾಟಕ್ಕೆ ತಿರುಗಿ ಗುರುರಾಘವೇಂದ್ರ ಹಾಗೂ ದಿವ್ಯಾ ಸೇರಿ ಜ್ಯೋತಿಗೆ ಹೊಟ್ಟೆಯ ಭಾಗಕ್ಕೆ ಹೊಡೆದಿದ್ದು, ಇದರಿಂದ ತೀವ್ರ ಅಸ್ವಸ್ಥರಾದ ಜ್ಯೋತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಜ್ಯೋತಿ ಸಾವನಪ್ಪಿದ್ದಾರೆ ಎನ್ನಲಾಗಿದೆ.
ಗುರು ರಾಘವೇಂದ್ರ ಖಾರ್ವಿ ಹಾಗೂ ಆತನ ಪತ್ನಿ ದಿವ್ಯಾಳನ್ನು ಪೋಲಿಸರು ಬಂಧಿಸಿದ್ದು, ತನಿಖೆ ನಡೆಯುತ್ತಿದೆ. ವಿಜಯ ಖಾರ್ವಿ ಮೀನುಗಾರಿಕೆ ತೆರಳಿದ್ದು, ಘಟನೆಯ ಸಂದರ್ಭ ಮನೆಯಲ್ಲಿ ಇದ್ದಿರಲಿಲ್ಲ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.