ಕುಂದಾಪುರ: ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಅನಿರ್ಧಿಷ್ಟಾವಧಿ ಧರಣಿ

Spread the love

ಕುಂದಾಪುರ: ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಅನಿರ್ಧಿಷ್ಟಾವಧಿ ಧರಣಿ

ಕುಂದಾಪುರ: ಕೆಲಸ ಮಾಡಲು ಪೂರಕವಾಗಿ ಬೇಕಾಗಿರುವ ತಂತ್ರಾಂಶಗಳನ್ನು ಒದಗಿಸದೇ, ಯೋಜನೆಗಳ ಬಗ್ಗೆ ತರಬೇತಿ ನೀಡದೇ ವಿವಿಧ ಇಲಾಖೆಗಳು ಹೊಸ-ಹೊಸ ಆದೇಶಗಳನ್ನು ನೀಡಿ ಗ್ರಾಮಲೆಕ್ಕಾಧಿಕಾರಿಗಳಿಂದ ಕೆಲಸಗಳನ್ನು ನಿರೀಕ್ಷಿಸುತ್ತಿರುವುದು ತಪ್ಪು. ಖಾಲಿ ಇರುವ ಹುದ್ದೆಗಳನ್ನು ಮೊದಲು ಭರ್ತಿ ಮಾಡಿ ಆ ಬಳಿಕ ಹೊಸ ಯೋಜನೆಗಳನ್ನು ಹೊರತಂದರೆ ಗ್ರಾಮಲೆಕ್ಕಾಧಿಕಾರಿಗಳು ಅದಕ್ಕೆ ಬದ್ದರಾಗಿ ಕೆಲಸ ಮಾಡುತ್ತಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ದಿನಾಕರ ಶೆಟ್ಟಿ ಹೇಳಿದರು.

ಗುರುವಾರ ಇಲ್ಲಿನ ಮಿನಿವಿಧಾನ ಸೌಧದ ಎದುರು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ (ರಿ) ಕುಂದಾಪುರ ತಾಲೂಕು ಘಟಕದ ವತಿಯಿಂದ ನಡೆಯುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.

ಒಬ್ಬ ಗ್ರಾಮಲೆಕ್ಕಾಧಿಕಾರಿಯನ್ನು ಎರಡರಿಂದ ಮೂರು ಗ್ರಾಮಗಳಿಗೆ ನಿಯೋಜನೆ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಮಧ್ಯದಲ್ಲೇ ಬೇರೆ ಬೇರೆ ಇಲಾಖೆಗಳ ಹೊಸ-ಹೊಸ ಪ್ರಯೋಗದಿಂದ ಗ್ರಾಮಲೆಕ್ಕಾಧಿಕಾರಿಗಳು ಒತ್ತಡದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಬಂದೊದಗಿದೆ. ಸರ್ಕಾರದ ಧ್ಯೇಯಧೋರಣೆಗಳನ್ನು ನಾವು ಒಪ್ಪುತ್ತೇವೆ. ಆದರೆ ಅದಕ್ಕೆ ಪೂರಕವಾದ ಹುದ್ದೆಗಳನ್ನು ತುಂಬಬೇಕು ಎನ್ನುವುದು ನಮ್ಮ ಆಗ್ರಹ. ಸರ್ಕಾರಿ ಆದೇಶಗಳನ್ನು ನೌಕರರಾಗಿ ನಾವು ಧಿಕ್ಕರಿಸುವುದಿಲ್ಲ. ಕೆಲಸಕ್ಕೆ ಪೂರಕವಾಗಿ ಬೇಕಾಗಿರುವ ಲ್ಯಾಪ್ಟಾಪ್, ಮೊಬೈಲ್ ಸೇರಿದಂತೆ ಇನ್ನಿತರ ತಾಂತ್ರಿಕ ಉಪಕರಣಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.

ಪ್ರತೀ ವಿಚಾರದಲ್ಲಿಯೂ ಕೆಳಮಟ್ಟದ ಅಧಿಕಾರಿಗಳನ್ನು ಗುರಿಯಾಗಿಸಿ ಆಧಾರ ರಹಿತವಾಗಿ ನೋಟೀಸ್ ನೀಡಿ ವರ್ಗಾವಣೆ ಮಾಡುವ ಪ್ರಕ್ರಿಯೆಗಳು ನಡೆಯುತ್ತಿವೆ. ಆಧಾರ್ ಲಿಂಕ್ ಜೋಡಣೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ವಿದೇಶದಲ್ಲಿ ನೆಲೆಸಿರುವವರ ಒಟಿಪಿ ಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲವಾದ್ದರಿಂದ ಆಧಾರ್ ಲಿಂಕ್ ಜೋಡಣೆ ಪ್ರಕ್ರಿಯೆಗಳು ನಿಧಾನವಾಗಿ ಆಗುತ್ತಿವೆ. ಇದೇ ಕಾರಣಗಳನ್ನಿಟ್ಟುಕೊಂಡು ಗ್ರಾಮಲೆಕ್ಕಾಧಿಕಾರಿಗಳನ್ನು ಗುರಿಯಾಗಿಸಿಕೊಂಡು ತಾಂತ್ರಿಕ ಸಮಸ್ಯೆಗಳನ್ನು ಅರಿಯದೇ ಅವರನ್ನು ಕೆಲಸದಿಂದ ಅಮಾನತುಗೊಳಿಸುವುದು ಸರಿಯಾದ ಕ್ರಮವಲ್ಲ. ಇಪ್ಪತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೆ ಮುಂಭಡ್ತಿಯೂ ಸಿಗುತ್ತಿಲ್ಲ. ಅನೇಕ ಭಾಗಗಳಲ್ಲಿ ಗ್ರಾಮಲೆಕ್ಕಾಧಿಕಾರಿಗಳಿಗೆ ಕಟ್ಟಡದ ಕೊರತೆ ಇದ್ದು, ಮೂಲಭೂತ ಸೌಕರ್ಯಗಳಿಲ್ಲದ ಬ್ರಿಟಿಷರ ಕಾಲದ ಕಟ್ಟಡಗಳಲ್ಲಿ ದಾಖಲೆಗಳನ್ನಿಟ್ಟು ಬರಲು ಧೈರ್ಯ ಬರುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ರಾಜ್ಯ ಮಟ್ಟದ ಹೋರಾಟಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಬಲ ಇದೆ ಎಂದರು.

ಮುಷ್ಕರದಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಸಮಿತಿ ಅಧ್ಯಕ್ಷ ಶಿವರಾಯ್ ಎಸ್, ಉಪಾಧ್ಯಕ್ಷ ಆನಂದ್ ಕುಮಾರ್, ಕಾರ್ಯದರ್ಶಿ ವಿಘ್ನೇಶ್ ಉಪಾಧ್ಯಾಯ, ಪ್ರಮುಖರಾದ ಕಾಂತರಾಜು, ಅವಿನಾಶ್ ಗುರುಕೃಪಾ ಮೊದಲಾದವರು ಇದ್ದರು.


Spread the love
Subscribe
Notify of

0 Comments
Inline Feedbacks
View all comments