ಕುಂದಾಪುರ: ವೈಭವದ ಕೊಡಿ ಹಬ್ಬ ಸಂಪನ್ನ

Spread the love

ಕುಂದಾಪುರ: ವೈಭವದ ಕೊಡಿ ಹಬ್ಬ ಸಂಪನ್ನ
 
ಕುಂದಾಪುರ: ಕರ್ನಾಟಕ ಕರಾವಳಿಯ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಇಲ್ಲಿನ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿ ಹಬ್ಬವು ವಿಜೃಂಭಣೆಯಿಂದ ಜರುಗಿತು. ಸೋಮವಾರ ನಡೆದ ವೈಭವದ ಬ್ರಹ್ಮ ರಥೋತ್ಸವಕ್ಕೆ ಊರ ಹಾಗೂ ಪರವೂರಿನಿಂದ ಬಂದ ಸಹಸ್ರಾರು ಮಂದಿ ಸಾಕ್ಷಿಯಾದರು.

ಈ ಬಾರಿಯ ಕೊಡಿ ಹಬ್ಬಕ್ಕಾಗಿ ಸೋಮವಾರ ನಸುಕಿನಿಂದಲೆ ಧಾರ್ಮಿಕ ಆಚರಣೆಯಲ್ಲಿ ಭಾಗಿಯಾಗಿದ್ದ ಭಕ್ತರು ಮಧ್ಯಾಹ್ನ 11:31 ಕ್ಕೆ ನಡೆದ ವೈಭವದ ರಥೋತ್ಸವದ ಆರೋಹಣವನ್ನು ನೋಡಿ ಕಣ್ಮನ ತುಂಬಿಕೊಂಡರು. ನಸುಕಿನಲ್ಲಿ ಇತಿಹಾಸ ಪ್ರಸಿದ್ದ ಕೋಟಿ ತೀರ್ಥ ಸರೋವರದಲ್ಲಿ ಶುಚಿಭೂತರಾಗಿ ದೇವಸ್ಥಾನಕ್ಕೆ ಬಂದ ಭಕ್ತರು, ಸರೋವರದ ಸುತ್ತ ಅಪೇಕ್ಷಿತರು ಹಾಸಿದ ಬಿಳಿ ಬಟ್ಟೆಯ ಮೇಲೆ ಮುಡಿ ಅಕ್ಕಿ ಚಲ್ಲುವ ಪಾರಂಪರಿಕ ಸುತ್ತಕ್ಕಿ ಸೇವೆಯಲ್ಲಿ ಪಾಲ್ಗೊಂಡ ಬಳಿಕ ದೇವರ ದರ್ಶನ ಪಡೆದು ಸಂಪ್ರದಾಯಬದ್ದ ಪೂಜೆ ಸಲ್ಲಿಸಿದರು.

ದೇವಸ್ಥಾನದಿಂದ ವೈಭವದ ಮೆರವಣಿಗೆಯಲ್ಲಿ ಬಂದ ಬಿದಿರಿನ ಕೊಡಿ, ತಾಂಡವೇಶ್ವರ ದೇವರು, ತ್ರಿಶೂಲ, ಗೋಳೆ ದೇವರು ಹಾಗೂ ಕೋಟಿಲಿಂಗೇಶ್ವರ ಉತ್ಸವ ಮೂರ್ತಿಗಳನ್ನು ಜಯಕಾರಗಳೊಂದಿಗೆ ಸ್ವಾಗತಿಸಲಾಯಿತು. ಬಿದಿರಿನ ಕೊಡಿಯನ್ನು ಮೊದಲು ರಥದ ಮೇಲಕ್ಕೆ ಕೊಂಡೊಯ್ಯುವ ಮೂಲಕ ರಥಾರೋಹಣಕ್ಕೆ ಚಾಲನೆ ನೀಡಲಾಯಿತು. ನಂತರ ತಾಂಡವೇಶ್ವರ ದೇವರು, ತ್ರಿಶೂಲ ಹಾಗೂ ಗೋಳೆ ದೇವರು ರಥದ ಮೇಲಕ್ಕೆ ಏರಿಸಲಾಯಿತು.

ಚಂಡೆಗಳ ತಾಳಕ್ಕೆ ತಾಂಡವ ನರ್ತನ
ದೇವರ ಮೂರ್ತಿಗಳು ರಥವನ್ನು ಏರಿದ ಬಳಿಕ ನಂದಳಿಕೆಯ ಪಿ. ರವಿರಾಜ್ ಭಟ್ ಅವರು ಕೋಟಿಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ತಲೆ ಮೇಲಿರಿಸಿ ಚಂಡೆಗಳ ತಾಳಕ್ಕೆ ತಾಂಡವ ನರ್ತನ ಮಾಡಿದರು. ನಂತರ ನೆರೆದ ಭಕ್ತರು ಹರಹರ ಮಹಾದೇವ ಎನ್ನುವ ಜಯಘೋಷ ಮಾಡುತ್ತಿದ್ದಂತೆ ನರ್ತನದ ಮೂಲಕ ದೇವರೊಂದಿಗೆ ರಥದ ಮೇಲೇರಿದರು. ಉತ್ಸವ ಮೂರ್ತಿಯ ರಥಾರೋಹಣವಾದ ಬಳಿಕ ಮಂಗಳಾರತಿ, ಹಣ್ಣುಕಾಯಿ ಹಾಗೂ ರಥಕ್ಕೆ ಕಾಯಿ ಒಡೆಯುವ ಸೇವೆಗಳನ್ನು ಸಲ್ಲಿಸಲಾಯಿತು. ಬಳಿಕ ರಥ ಬೀದಿಯಲ್ಲಿ ರಥವನ್ನು ಎಳೆಯುವ ಮೂಲಕ ರಥೋತ್ಸವ ನಡೆಯಿತು. ದೇವಸ್ಥಾನ ತಂತ್ರಿ ಪ್ರಸನ್ನ ಕುಮಾರ ಐತಾಳ್ ನೇತ್ರತ್ವದಲ್ಲಿ ಧಾರ್ಮಿಕ ವಿಧಿ ನೆರವೇರಿಸಲಾಯಿತು.

ಕುಡಿ ಚಿಗುರುವ ಕೊಡಿ ಹಬ್ಬ:
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಪ್ತಕ್ಷೇತ್ರಗಳಲ್ಲಿ ಒಂದಾಗಿರುವ ಇತಿಹಾಸ ಪ್ರಸಿದ್ಧ ಕುಂದಾಪುರ ತಾಲೂಕಿನ ಕೋಟೇಶ್ವರದ ಮಹತೋಬಾರ ಕೋಟಿಲಿಂಗೇಶ್ವರ ದೇವಸ್ಥಾನ ಹಲವಾರು ಶತಮಾನಗಳಷ್ಟು ಪುರಾತನವಾದ ದೇವಳಗಳಲ್ಲಿ ಒಂದಾಗಿದೆ. ಇಲ್ಲಿ ನಡೆಯುವ ಕೊಡಿ ಹಬ್ಬದ ಉತ್ಸವದ ಹಿಂದೆ ಪರಂಪರಾನುಗತ ನಂಬಿಕೆ ಇದೆ. ವ್ಯವಹಾರಸ್ಥರಿಗೆ ಹೊಸಲೆಕ್ಕಚಾರ ಪ್ರಾರಂಭವಾಗಿ ಅಭಿವೃದ್ಧಿಯ ಕುಡಿಯೊಡೆಯುತ್ತದೆ, ಅವಿವಾಹಿತರಿಗೆ ಬಾಳಜೋಡಿ ಸಿಗುತ್ತದೆ, ನವ ವಿವಾಹಿತರಿಗೆ ಕರುಳ ಕುಡಿ ಚಿಗುರಿ ಸಂತಸ ಚಿಮ್ಮುತ್ತದೆ, ಕೃಷಿಕರಿಗೆ ಫಸಲು ತುಂಬಿ ಸಮೃದ್ಧಿಯ ಕುಡಿ ಮೊಳೆಯುತ್ತದೆ ಎಂಬ ನಂಬಿಕೆಯೇ ಜಿಲ್ಲೆಯ ಈ ಅತಿದೊಡ್ಡ ರಥೋತ್ಸವಕ್ಕೆ `ಕೊಡಿಹಬ್ಬ’ ಎಂದು ಹೆಸರು ಬರಲು ಕಾರಣವಾಯಿತು. ಒಟ್ಟಿನಲ್ಲಿ ಎಲ್ಲೆಡೆ ಸಂತಸ, ಸಮೃದ್ಧಿಯ ಕುಡಿಯೊಡೆಯುವಿಕೆಯ ನಂಬಿಕೆ ಇದೆ.

ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಕಾಮತ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಪ್ರಭಾಕರ ಶೆಟ್ಟಿ, ಸಮಿತಿ ಸದಸ್ಯರಾದ ಸುರೇಶ್ ಶೇರೆಗಾರ್ ಬೀಜಾಡಿ, ಚಂದ್ರಿಕಾ ಧನ್ಯ ಕೋಟೇಶ್ವರ, ಶಾರದಾ ಮೂಡುಗೋಪಾಡಿ, ಮಂಜುನಾಥ ಆಚಾರ್ಯ, ಭಾರತಿ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ, ಕೋಟೇಶ್ವರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣ ಗೊಲ್ಲ, ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ, ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಉದ್ಯಮಿಗಳಾದ ಗೋಪಾಡಿ ಶ್ರೀನಿವಾಸ ರಾವ್, ಮಾರ್ಕೋಡು ಸುಧೀರ್ ಕುಮಾರ ಶೆಟ್ಟಿ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಆಸ್ತಿಕ ಸಮಾಜದ ಅಧ್ಯಕ್ಷ ಕೆ.ರವೀಂದ್ರ ಐತಾಳ್, ಕಾರ್ಯದರ್ಶಿ ಕೆ.ವಿನೋದ್ ಮರ್ತಪ್ಪ ಶೇಟ್, ಜತೆ ಕಾರ್ಯದರ್ಶಿ ದಿನೇಶ್ ಸುವರ್ಣ ಚಾತ್ರಬೆಟ್ಟು ಇದ್ದರು.

ಬಂದೋಬಸ್ತ್ :
ಕುಂದಾಪುರ ಉಪ ವಿಭಾಗದ ಡಿವೈಎಸ್‍ಪಿ ಕೆ.ಯು.ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಪೆÇಲೀಸ್ ನಿರೀಕ್ಷಕ ನಂದಕುಮಾರ, ಎಸ್.ಐ ಗಳಾದ ನಾಸೀರ್ ಹುಸೇನ್, ಪ್ರಸಾದ್ ಕೆ, ಸಂಗೀತಾ, ಪವನ್ ನಾಯಕ್, ನೂತನ್, ಸುಧಾ ರಾಣಿ, ಸುಬ್ಬಣ್ಣ, ಸುದರ್ಶನ್ ಅವರ ನೇತ್ರತ್ವದಲ್ಲಿ ಬಿಗು ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಮಂಗಳವಾರ ಓಕುಳಿ ಸೇವೆ :
ಮಂಗಳವಾರ ಚೂರ್ಣೋತ್ಸವ, ಅವಭೃತ ಸ್ನಾನ, ರಾತ್ರಿ ಮಾರ್ಕೊಡು, ಮಲ್ಯಾಡಿ, ಮಾಲಾಡಿ ಹಾಗೂ ತೆಕ್ಕಟ್ಟೆ ಭಾಗದ ಬಂಟ ಸಮುದಾಯದವರಿಂದ ಓಕುಳಿ ಸೇವೆ ನಡೆಯಲಿದೆ.


Spread the love