ಕುಂದಾಪುರ : ಸಾರಿಗೆ ಸಂಚಾರ ಮತ್ತಷ್ಟು ಬಿಗಿ: ಪೊಲೀಸರ ಹೊಸಕ್ರಮಕ್ಕೆ ಸಾರ್ವಜನಿಕರು ಕೆಂಡಾಮಂಡಲ
ಕುಂದಾಪುರ: ಲಾಕ್ಡೌನ್ಗೆ ಸಾರ್ವಜನಿಕರು ಹೊಂದಿಕೊಳ್ಳುತ್ತಿರುವ ಹೊತ್ತಲ್ಲೇ ಮಂಗಳವಾರ ಬೆಳಿಗ್ಗೆಯಿಂದ ಏಕಾಏಕಿ ನಗರದಲ್ಲಿ ಸಾರಿಗೆ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಿದ ಪೊಲೀಸರ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಾದ ಚಿಕ್ಕನ್ಸಾಲ್, ಚರ್ಚ್ ರಸ್ತೆ ಹಾಗೂ ಶಾಸ್ತ್ರೀ ವೃತ್ತವನ್ನು ಹೊರತುಪಡಿಸಿ ಉಳಿದೆಲ್ಲಾ ಒಳ ರಸ್ತೆಗಳಿಗೆ ನಾಕಾಬಂಧಿ ವಿಧಿಸಿ ರಸ್ತೆಯನ್ನು ಸೋಮವಾರ ರಾತ್ರಿಯಿಂದಲೇ ಬಂದ್ ಮಾಡಲಾಗಿತ್ತು. ಚೆಕ್ಪಾಯಿಂಟ್ ಹಾಕಿರುವ ಮೂರು ರಸ್ತೆಗಳ ಪ್ರವೇಶದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಮಂಗಳವಾರ ಬೆಳಿಗ್ಗೆಯಿಂದ ಪ್ರತಿಯೊಂದು ವಾಹನಗಳ ತಪಾಸಣೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದರು. ಈ ವೇಳೆಯಲ್ಲಿ ರಸ್ತೆಯೂದ್ದಕ್ಕೂ ವಾಹನಗಳ ಸಾಲು ಕಂಡು ಬಂದಿದೆ.
ಎಟಿಎಂ, ಮೆಡಿಕಲ್ ಹಾಗೂ ದಿನಸಿ ವಸ್ತುಗಳ ಖರೀದಿಗಾಗಿ ಒಂದಕ್ಕಿಂತ ಹೆಚ್ಚು ಮಂದಿ ಬಂದಿದ್ದರೆ ಅಂತವರನ್ನೆಲ್ಲಾ ತಡೆದ ಪೊಲೀಸ್ ಸಿಬ್ಬಂದಿಗಳು ಅವರನ್ನೆಲ್ಲಾ ಮನೆಗೆ ವಾಪಾಸ್ ಕಳುಹಿಸಿದರು. ಜಿಲ್ಲಾಡಳಿತ ಅಗತ್ಯ ವಸ್ತುಗಳ ಖರೀದಿಗಾಗಿ ನಿಗದಿಪಡಿಸಿರುವ ಅವಧಿಯಲ್ಲಿ ದಿನಸಿ ಹಾಗೂ ತರಕಾರಿ ಖರೀದಿಗಾಗಿ ಬೈಕ್ನಲ್ಲಿ ಬಂದ ಕೆಲ ಜನರನ್ನು ತಡೆದು ವಾಪಾಸ್ ಕಳುಹಿಸಿದ ಪ್ರಸಂಗವೂ ನಡೆಯಿತು. ಇನ್ನು ಆಸ್ಪತ್ರೆಗಳಿಗೂ ಒಬ್ಬೊಬ್ಬರೆ ಬರಬೇಕು ಎಂದು ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯೋರ್ವರು ಆಕ್ರೋಶಭರಿತವಾಗಿ ಹೇಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.
ಪೊಲೀಸ್ ಚೆಕ್ಪಾಯಿಂಟ್ ಇರುವ ಶಾಸ್ತ್ರೀವೃತ್ತದಲ್ಲಿ ಪಿಎಸ್ಐ ಹರೀಶ್ ಆರ್ ನಾಯಕ್ ನೇತೃತ್ವದ ಪೊಲೀಸರ ತಂಡ ವಾಹನ ತಪಾಸಣೆಯಲ್ಲಿ ತೊಡಗಿಕೊಂಡಿದ್ದ ವೇಳೆಯಲ್ಲಿ ಕೆಲಕಾಲ ವಾಹನ ದಟ್ಟಣೆ ಉಂಟಾಯಿತು. ಈಗಾಗಲೇ ನಗರದ ಎರಡು ರಸ್ತೆಗಳಲ್ಲಿ ಒಚಿದು ರಸ್ತೆಯಲ್ಲಿ ಮಾತ್ರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದು, ಒಂದೇ ರಸ್ತೆಯಲ್ಲಿ ತಪಾಸಣೆ ಮಾಡಿದ್ದರಿಂದ ಹೋಗುವ ಮತ್ತು ಬರುವ ವಾಹನಗಳ ದಟ್ಟಣೆಯಿಚಿದಾಗಿ ಟ್ರಾಫಿಕ್ ಜಾಮ್ ಉಚಿಟಾಯಿತು. ತಪಾಸಣೆ ಮಾಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಿದ ಬಳಿಕ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶವಾಯಿತು.
ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 1-2 ದಿನಗಳ ಕಾಲ ಈ ವ್ಯವಸ್ಥೆಯನ್ನು ಗಮನಿಸಿ, ಸಿಬ್ಬಂದಿಗಳಿಂದ ಅಭಿಪ್ರಾಯ ಪಡೆದುಕೊಂಡ ಬಳಿಕ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದಾದರೆ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್ ಹೇಳಿದ್ದಾರೆ