Home Mangalorean News Kannada News ಕುಂದಾಪುರ: ಹೆದ್ದಾರಿಯಲ್ಲಿ ನೀರು ನಿಂತು ಟ್ರಾಫಿಕ್ ಜಾಮ್ : ಸಚಿವರ ಕಾರು ತಡೆದು ಆಕ್ರೋಶ

ಕುಂದಾಪುರ: ಹೆದ್ದಾರಿಯಲ್ಲಿ ನೀರು ನಿಂತು ಟ್ರಾಫಿಕ್ ಜಾಮ್ : ಸಚಿವರ ಕಾರು ತಡೆದು ಆಕ್ರೋಶ

Spread the love

ಕುಂದಾಪುರ: ಹೆದ್ದಾರಿಯಲ್ಲಿ ನೀರು ನಿಂತು ಟ್ರಾಫಿಕ್ ಜಾಮ್ : ಸಚಿವರ ಕಾರು ತಡೆದು ಆಕ್ರೋಶ

ಕುಂದಾಪುರ: ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈಜುಕೊಳದಂತಾಗಿರುವ ಹೆದ್ದಾರಿ ಅವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಸಚಿವರ ಕಾರು ತಡೆದು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ಕುಂದಾಪುರದ ಬಸ್ರೂರು ಮೂರುಕೈ ಜಂಕ್ಷನ್ ಸಮೀಪ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66 ರ ಬಸ್ರೂರು ಮೂರು ಕೈನಿಂದ ಟಿಟಿ ರಸ್ತೆ ಕಡೆಗೆ ಸಂಚರಿಸುವ ವಿನಾಯಕ -ಕೋಡಿ ಜಂಕ್ಷನ್ವರೆಗೆ ಮಳೆ ನೀರು ರಸ್ತೆಯಲ್ಲಿಯೇ ನಿಂತು ಕೆರೆಯಂತಾಗಿದ್ದು, ಕೃತಕ ನೆರೆ ಸೃಷ್ಟಿಯಾಗಿದೆ. ಹೆದ್ದಾರಿ ಹೋರಾಟ ಸಮಿತಿ, ರಿಕ್ಷಾ ಚಾಲಕರು, ಸ್ಥಳೀಯ ಅಂಗಡಿ ಮಾಲಕರು ಹೆದ್ದಾರಿಯ ಅವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಚಿವರ ಕಾರು ಅಡ್ಡಗಟ್ಟಿದ್ದಾರೆ.

ಕುಂದಾಪುರದಲ್ಲಿ ಕಾರ್ಯಕ್ರಮ ಮುಗಿಸಿ ಉಡುಪಿ ಕಡೆಗೆ ತೆರಳುತ್ತಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರು ಬಸ್ರೂರು ಮೂರು ಕೈ ಸಮೀಪ ಬಂದಾಗ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಹಾಗೂ ಸ್ಥಳೀಯರು ತಡೆದು, ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಒತ್ತಾಯಿಸಿದರು. ಈ ವೇಳೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಸಚಿವರ ಮಧ್ಯೆ ವಾಗ್ವಾದ ಕೂಡ ನಡೆಯಿತು.

ಬಳಿಕ ಡಿಸಿಗೆ ಕರೆ ಮಾಡಿ ಮಾತನಾಡಿದ ಸಚಿವರು ಈ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಸೂಚಿಸಿದರು. ಡಿಸಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಂಬಂಧಪಟ್ಟವರಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ತಿಳಿಸಿದ್ದೇನೆ ಎಂದರು.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೆದ್ದಾರಿಯಲ್ಲಿ ನೀರು ನಿಂತು ಹೊಂಡ – ಗುಂಡಿಗಳು ನಿರ್ಮಾಣಗೊಂಡಿವೆ. ಇದರಿಂದ ಶನಿವಾರ ಬೆಳಗ್ಗಿನಿಂದ ಇಲ್ಲಿನ ಸರ್ವಿಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಸ್, ಇತರೆ ವಾಹನಗಳಲ್ಲಿ ಕೆಲಸಕ್ಕೆ ಹೋಗುವವರು ಇದರಿಂದ ಸಂಕಷ್ಟ ಅನುಭವಿಸುವಂತಾಯಿತು.

ಈ ಸಂದರ್ಭದಲ್ಲಿ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಶಶಿಧರ ಹೆಮ್ಮಾಡಿ, ಗಣೇಶ್ ಮೆಂಡನ್, ರಿಕ್ಷಾ ಚಾಲಕ ಸತೀಶ್ ಪ್ರಭು, ಸ್ಥಳೀಯ ರಿಕ್ಷಾ ಚಾಲಕರು, ಅಂಗಡಿ ಮಾಲಿಕರು, ಸಾರ್ವಜನಿಕರು ಉಪಸ್ಥಿತರಿದ್ದರು.


Spread the love

Exit mobile version