ಕುಂದಾಪ್ರ ಕನ್ನಡ ದಿನಾಚರಣೆ ನಮ್ಮ ಭಾಷೆಗೆ ಕೊಡುವ ಬೆಲೆ ಹಾಗೂ ಗೌರವ – ಮನು ಹಂದಾಡಿ
ಕೋಟ: ಕುಂದಾಪ್ರ ಕನ್ನಡ ದಿನಾಚರಣೆ ಎನ್ನುವಂತದ್ದು ನಮ್ಮ ಭಾಷೆಗೆ ನಾವು ಕೊಡುವ ಬೆಲೆ ಹಾಗೂ ಗೌರವ ಎಂದು ಕುಂದಾಪ್ರ ಕನ್ನಡದ ವಾಗ್ಮಿ ಮನು ಹಂದಾಡಿ ತಿಳಿಸಿದರು.
ಅವರು ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಆಶ್ರಯದಲ್ಲಿ, ಕಂಬಳ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಾರ್ಕೂರು ಶಾಂತರಾಮ ಶೆಟ್ಟಿಯವರ ನೇತೃತ್ವದಲ್ಲಿ ಆ.೪ರಂದು ಯಡ್ತಾಡಿಯ ಸಿನಿಮಾ ನಟ ದಿ.ಸುನೀಲ್ ಅವರ ಮನೆಯಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಪೂರ್ವಜರು ದೈಹಿಕವಾಗಿ ಸಾಕಷ್ಟು ಪರಿಶ್ರಮಿಗಳಾಗಿದ್ದರು ಹಾಗೂ ಆ ಕಾಲದಲ್ಲಿ ತಿಣ್ಣುವ ಆಹಾರ ಪದಾರ್ಥಗಳಿಂದ ಯಾವುದೇ ಕಾಯಿಲೆಗಳು ಬರುತ್ತಿರಲಿಲ್ಲ. ನಾವು ಹಿಂದಿನ ಕಾಲದ ಆಹಾರಪದ್ಧತಿಯನ್ನು ಮತ್ತು ನಮ್ಮ ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ನಮ್ಮ ದೈವ-ದೇವರು, ಇವುಗಳನ್ನು ಯಾವಗಲೂ ಮರೆಯಬಾರದು ಎಂದರು.
ಭಾಷೆಯ ಬಗ್ಗೆ ಪ್ರೀತಿ ಬೇಕು:-
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಯೆರ್ಥ ಕೊಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಭಾಷೆಯ ಬಗ್ಗೆ ಪ್ರೀತಿ ಬೇಕು. ಭಾಷೆಯ ಬಗೆಗಿನ ಪ್ರೀತಿಯನ್ನು ತೋರ್ಪಡಿಸಲು, ಅನ್ಯ ಭಾಗದವರನ್ನು ನಮ್ಮತ್ತ ಸೆಳೆಯಲು ಕುಂದಾಪ್ರ ಕನ್ನಡ ದಿನಾಚರಣೆಯಂತಹ ಕಾರ್ಯಕ್ರಮ ಬೇಕು ಎಂದರು.
ಯಡ್ತಾಡಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಕಂಬಳ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಾರ್ಕೂರು ಶಾಂತರಾಮ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್, ಜನಸೇವಾ ಟ್ರಸ್ಟ್ನ ಅಧ್ಯಕ್ಷ ವಸಂತ ಗಿಳಿಯಾರ್ ಹಾಗೂ ಜನಸೇವಾ ಟ್ರಸ್ಟ್ನ ಸದಸ್ಯರು ಇದ್ದರು.
ಪತ್ರಕರ್ತ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ಗಮನಸೆಳೆದ ಯೆರ್ಥ:-
ಕೃಷಿ ಪ್ರಧಾನವಾದ ಕುಂದಾಪ್ರ ಭಾಗದಲ್ಲಿ ಕೃಷಿ ಚಟುವಟಿಕೆ ಮುಗಿದ ಅನಂತರ ಗದ್ದೆಯಲ್ಲಿ ಉಳುಮೆ ಮಾಡಿ ದುಡಿದು ಸುಸ್ತಾದ ಕೋಣಗಳಿಗೆ ಉದ್ದು, ತೆಂಗಿನೆಣ್ಣೆ, ಹುರುಳಿ ಮೊದಲಾದ ವಿಶೇಷ ಖಾದ್ಯಗಳನ್ನು ನೀಡಿ ಉಪಚಾರ ಮಾಡಲಾಗುತ್ತಿತ್ತು. ಅದೇ ಮಾದರಿಯಲ್ಲಿ ಸ್ಥಳದಲ್ಲಿ ಯೆರ್ಥ ನೀಡುವ ಪ್ರಾತ್ಯಕ್ಷಿಕೆಯ ಮೂಲಕ ಕುಂದಾಪ್ರ ಕನ್ನಡ ದಿನಾಚರಣೆಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.