ಕುಡಿದು ಕಾರು ಚಲಾಯಿಸಿ ರಿಕ್ಷಾಕ್ಕೆ ಡಿಕ್ಕಿ, ಒರ್ವ ಸಾವು ಮೂವರಿಗೆ ಗಾಯ
ಮಂಗಳೂರು: ಕುಡಿದ ಮತ್ತಿನಲ್ಲಿ ಕಾರನ್ನು ಚಲಾಯಿಸಿಕೊಂಡು ಬಂದು ಪಾರ್ಕಿಂಗ್ ಮಾಡಿದ ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟು, ಇತರ ಮೂವರ ಗಾಯಗೊಂಡ ಘಟನೆ ಜ್ಯೋತಿ ರಿಕ್ಷಾ ನಿಲ್ದಾಣದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮೃತರನ್ನು ಮಡಿಕೇರಿ ನಿವಾಸಿ ಪ್ರವೀಣ್ (25) ಎಂದು ಗುರುತಿಸಲಾಗಿದ್ದು, ಪ್ರಸ್ತುತ ಕುಂಟಿಕಾನದಲ್ಲಿ ವಾಸ್ತವ್ಯವದ್ದರು. ಗಾಯಾಳುಗಳನ್ನು ಅಶೋಕ್ ಮತ್ತು ಜಗದೀಶ್ ಎಂದು ಗುರುತಿಸಲಾಗಿದ್ದು ಇನ್ನೋರ್ವ ಗಾಯಾಳುವಿನ ಗುರುತು ಪತ್ತೆಯಾಗಿಲ್ಲ.
ಭಾನುವಾರ ರಾತ್ರಿ ಸುಮಾರು 10.45 ರ ಸುಮಾರಿಗೆ ಪ್ರವೀಣ್ ತನ್ನ ರಿಕ್ಷಾವನ್ನು ಜ್ಯೋತಿ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡಿದ್ದು, ಕಾರೊಂದು ವೇಗವಾಗಿ ಬಂದು ರಿಕ್ಷಾಕ್ಕೆ ಡಿಕ್ಕಿಹೊಡೆದ ಪರಿಣಾಮ ಮೂರು ಮಂದಿ ರಿಕ್ಷಾ ಚಾಲಕರು ಹಾಗೂ ಇನ್ನೋರ್ವ ಪಾದಚಾರಿ ಗಾಯಗೊಂಡರು ಎನ್ನಲಾಗಿದೆ.
ತೀವ್ರವಾಗಿ ಗಾಯಗೊಂಡ ಪ್ರವೀಣ್ ಹಾಗೂ ಅಶೋಕ್ ಅವರನ್ನು ಹತ್ತಿರದ ಕೆಎಮ್ ಸಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಇನ್ನಿಬ್ಬರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಪ್ರವೀಣ್ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಾರಿನ ಚಾಲಕ ಅನೀಶ್ ಜಾನ್ ಎಂಬವರನ್ನು ಪೋಲಿಸರು ವಶಕ್ಕೆ ಪಡೆದಿದ್ದು, ಕಾರಿನಲ್ಲಿ ಬಿಯರ್ ಬಾಟಲಿಗಳು ಪತ್ತೆಯಾಗಿವೆ. ವಿಪರೀತ ಮದ್ಯಪಾನ ಸೇವನೆಯೇ ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.