ಮಂಗಳೂರು: ಮಂಗಳೂರಿನಲ್ಲಿ ಕುಡಿಯುವ ನೀರಿಗೆ ತೀವ್ರ ಆಹಾಕಾರ ಉಂಟಾಗಿದ್ದು, ತುರ್ತು ಸ್ಥಿತಿ ಘೋಷಿಸುವ ಸಂದರ್ಭ ಬಂದಿದೆ. ಎಂಆರ್‍ಪಿಎಲ್, ಸೆಝ್ ಸೇರಿದಂತೆ ಬೃಹತ್ ಉದ್ದಿಮೆಗಳಿಗೆ ನೇತ್ರಾವತಿ ನೀರಿನ ಪೂರೈಕೆ ಸ್ಥಗಿತಗೊಳಿಸಬೇಕು. ಆ ಉದ್ದಿಮೆಗಳ ನೀರನ್ನು ವಶಪಡಿಸಿ ಜನತೆಗೆ ನಿಯಮಿತವಾಗಿ ವಿತರಿಸಬೇಕು ಎಂದು ಡಿವೈಎಫ್‍ಐ ದ.ಕ. ಜಿಲ್ಲಾ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಮಳೆಗಾಲ ಆರಂಭಕ್ಕೆ ಇನ್ನೂ ಐವತ್ತು ದಿನಕ್ಕೆ ಮುಂಚಿತವಾಗಿ ನೀರಿಗೆ ತತ್ವಾರ ಬಂದಿರುವುದು ಇತ್ತೀಚಿನ ದಶಕಗಳಲ್ಲಿ ಇದೇ ಮೊದಲು. ನಗರದ ತೆರೆದ ಬಾವಿಗಳು, ಕೊಳವೆ ಬಾವಿಗಳು ಒಣಗಿದ್ದು ಸಾರ್ವಜನಿಕರು ನಗರಪಾಲಿಕೆಯ ನೀರನ್ನೇ ಅವಲಂಭಿಸುವಂತಾಗಿದೆ. ತುಂಬೆ ಡ್ಯಾಮ್‍ನಲ್ಲಿ ನೀರಿನ ಕೊರತೆ ಉಂಟಾಗಿರುವುದರಿಂದ ಕುಡಿಯುವ ನೀರಿಗೂ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಈ ಗಂಭೀರ ಸಂದರ್ಭವನ್ನು ನಿಭಾಯಿಸಲು ಜಿಲ್ಲಾಡಳಿತ ಎಂಆರ್‍ಪಿಎಲ್, ಸೆಝ್ ಸೇರಿದಂತೆ ಘನ ಕೈಗಾರಿಕೆಗಳಿಗೆ ಪೂರೈಕೆಯಾಗುವ ನೀರನ್ನು ವಶಪಡಿಸಿಕೊಂಡು ಸಾರ್ವಜನಿಕರಿಗೆ ವಿತರಿಸಬೇಕು. ಹಾಗೆಯೇ ಹೊಸ ಮಠ ಪವರ್ ಪ್ರಾಜೆಕ್ಟ್ ಹಿಡಿದಿಟ್ಟಿರುವ ನೀರಿನ ಸಂಗ್ರಹವನ್ನೂ ಪಡೆದು ಸಾರ್ವಜನಿಕ ವಿತರಣೆಗೆ ಮೀಸಲಿಡಬೇಕು ಎಂದು ಡಿವೈಎಫ್‍ಐ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.