‘ಕುಡಿಯುವ ನೀರಿನ ಹೊಸ ಯೋಜನೆಗಳಿಗೆ ಒಪ್ಪಿಗೆಯಿಲ್ಲ’: ಜಿಲ್ಲಾ ಪಂಚಾಯಿತಿ
ಉಡುಪಿ: ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಕ್ರಿಯಾಯೋಜನೆ ರೂಪಿಸುವ ವೇಳೆ ಜಿಲ್ಲಾ ಪಂಚಾಯತ್ ಸದಸ್ಯರ ಗಮನಕ್ಕೆ ತಾರದೆ ಯೋಜನೆ ರೂಪಿಸಿದ್ದು, ನೂತನ ಕಾಮಗಾರಿಗಳಿಗೆ ತಮ್ಮ ಒಪ್ಪಿಗೆ ಇರುವುದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಸಭೆಗೆ ತಿಳಿಸಿದರು.
ಇಂದು ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಕುಡಿಯುವ ನೀರಿನ ಕುರಿತ ವಿಶೇಷ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಸದಸ್ಯರು ಹಾಗೂ ಸ್ಥಾಯಿ ಸಮಿತಿ ಸದಸ್ಯರು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸುವಾಗ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಧಿಕಾರಿಗಳು ರೂಪಿಸಿದ್ದಾರೆ. ಸ್ಪಿಲ್ ಓವರ್ ಹೆಸರಿನಲ್ಲಿ ಮಾಡಿರುವ ಕಾಮಗಾರಿಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಯೋಜನೆಗಳು ಹಾಗೂ ಅನುದಾನ, ಅನುಮೋದನೆಗಳು ಗೊಂದಲದ ಗೂಡಾಗಿದ್ದು, ಅಧಿಕಾರಿಗಳು ಜಿಲ್ಲಾ ಪಂಚಾಯತ್ ವ್ಯವಸ್ಥೆಯನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ವಿಶೇಷ ಸಭೆಯಲ್ಲಿ ವ್ಯಕ್ತವಾಯಿತು. ಹಾಗಾಗಿ ಹೊಸ ಕುಡಿಯುವ ನೀರಿನ ಕಾಮಗಾರಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದರಲ್ಲದೆ ನಿರ್ಣಯವನ್ನು ದಾಖಲಿಸಿದರು.
ಇದಲ್ಲದೆ ಕಡೆಕಾರ್, ಪಡುಕೆರೆ, ಅಲೆವೂರುಗಳಲ್ಲಿ ಕಾಮಗಾರಿ ನಿರ್ವಹಿಸಿದೆ ಬಿಲ್ ಮಾಡಲಾಗಿದೆ ಎಂದು ಖುದ್ದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರೇ ಆರೋಪಿಸಿದರು. ಅಲೆವೂರಿನಲ್ಲಿ ಬಾವಿ ಇಲ್ಲದೆ ಬಿಲ್ ತಯಾರಿಸಲಾಗಿದೆ ಎಂದೂ ಅವರು ನುಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು, ಕುಡಿಯುವ ನೀರು ಯೋಜನೆ ರೂಪಿಸುವ ಕುರಿತು ಹಾಗೂ ಇದಕ್ಕೆ ದೊರೆಯುವ ಅನುಮೋದನೆ, ತಾಂತ್ರಿಕ ನಿಯಮಗಳ ಬಗ್ಗೆ ಸಭೆಗೆ ವಿವರಿಸಿದರು.
ಕುಡಿಯುವ ನೀರಿನ ಸಭೆಯಲ್ಲಿ ಅಕ್ರಮ ಮರಳುಗಾರಿಕೆಯ ಕುರಿತೂ ಚರ್ಚೆ ನಡೆದು ಅಂತಿಮವಾಗಿ ಈ ಸಂಬಂಧ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ಸಭೆ ನಿರ್ಧರಿಸಿತು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ, ಸ್ಥಾಯಿಸಮಿತಿ ಸದಸ್ಯರಾದ ಬಾಬು ಶೆಟ್ಟಿ, ಉದಯ ಕೋಟ್ಯಾನ್, ಶಶಿಕಾಂತ್ ಪಡುಬಿದ್ರೆ, ಮುಖ್ಯ ಕಾರ್ಯದರ್ಶಿ, ಮುಖ್ಯ ಯೋಜನಾಧಿಕಾರಿಗಳು ಸಭೆಯಲ್ಲಿದ್ದರು.