Home Mangalorean News Kannada News ಕುಡಿಯುವ ನೀರು ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ದಿನಕರ ಬಾಬು

ಕುಡಿಯುವ ನೀರು ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ದಿನಕರ ಬಾಬು

Spread the love

ಕುಡಿಯುವ ನೀರು ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ದಿನಕರ ಬಾಬು

ಉಡುಪಿ: ಜಿಲ್ಲಾ ಪಂಚಾಯತ್ ವತಿಯಿಂದ ಕೈಗೊಂಡಿರುವ ಎಲ್ಲಾ ಕುಡಿಯುವ ನೀರು ಕಾಮಗಾರಿಗಳನ್ನು ಮಾರ್ಚ್ ಅಂತ್ಯದ ಒಳಗೆ ಪೂರ್ಣಗೊಳಿಸಿ, ಯಾವುದೇ ಕಾಮಗಾರಿಗಳನ್ನು ಬಾಕಿ ಇಡಬೇಡಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸೂಚಿಸಿದ್ದಾರೆ.

ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ)ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೈಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ಮಾರ್ಚ್ ಅಂತ್ಯದ ವೇಳೆಗೆ ಯಾವುದೇ ಬಾಕಿ ಇಲ್ಲದಂತೆ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಅಗತ್ಯ ನೀರು ಒದಗಿಸಲು ಕ್ರಮ ಕೈಗೊಳ್ಳಿ, ಸಣ್ಣ ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟುಗಳಿಗೆ ಹಾಕಿರುವ ಹಲಗೆಯಲ್ಲಿ ಕೆಲವು ಕಡೆಗಳಲ್ಲಿ ನೀರು ಸೋರಿಕೆಯಾಗುತ್ತಿದೆ ಇದನ್ನು ಸರಿಪಡಿಸಿ, ಕಾರ್ಕಳದ ಕಾಡುಹೊಳೆ – ಕಡ್ತಲದಲ್ಲಿ ನಿರ್ಮಿಸಿರುವ ಕಿಂಡಿ ಅಣೆಕಟ್ಟುವಿನಲ್ಲಿ ನೀರು ಸೋರಿಕೆಯಾಗುತ್ತಿದ್ದು, ಕೂಡಲೇ ಸರಿಪಡಿಸಿ ಮತ್ತು ಉದ್ಯಾವರದಲ್ಲಿ ಕಿಂಡಿ ಅಣೆಕಟ್ಟೆಗೆ ಕೂಡಲೇ ಹಲಗೆ ಹಾಕುವಂತೆ ಅಧ್ಯಕ್ಷರು ಸೂಚಿಸಿದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ತೆರಿಗೆ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಎಲ್ಲಾ ಪಂಚಾಯತ್ಗಳು ಪರಿಷ್ಕøತ ದರದಲ್ಲಿ ತೆರಿಗೆ ವಸೂಲು ಮಾಡಿ, ಮಾರ್ಚ್ ಒಳಗೆ ಸಂಪೂರ್ಣ ಗುರಿ ಸಾಧಿಸುವಂತೆ ಸೂಚಿಸಿದ ಅಧ್ಯಕ್ಷರು ಈ ಬಗ್ಗೆ ಎಲ್ಲಾ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರು.

ಮರಳಿನ ಕೊರತೆಯಿಂದ ವಸತಿ ನಿರ್ಮಾಣ ಚಟುವಟಿಕೆ ಕುಂಠಿತವಾಗಿದ್ದು, ಈ ಬಗ್ಗೆ ಮರಳು ಲಭ್ಯತೆಯ ಕುರಿತಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುವಂತೆ ಅಧ್ಯಕ್ಷರು ಸೂಚಿಸಿದರು, ಈ ಕುರಿತು ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ, ಜಿಲ್ಲೆಯಲ್ಲಿ ನಾನ್ ಸಿಆರ್ಝೆಡ್ ವ್ಯಾಪ್ತಿಯಲ್ಲಿನ 21 ಬ್ಲಾಕ್ಗಳನ್ನು ಲೋಕೋಪಯೋಗಿ, ನಿರ್ಮಿತಿ, ಕೆ.ಆರ್.ಐ.ಡಿ.ಎಲ್., ಪಿ.ಆರ್.ಇ.ಡಿ, ಗ್ರಾಮ ಪಂಚಾಯತ್ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಮರಳುಗಾರಿಕೆ ಮಾಡಲು ಅನುಮತಿ ನೀಡಲಾಗಿದೆ. ಸಿಆರ್ಝಡ್ ವ್ಯಾಪ್ತಿಯಲ್ಲಿ 7 ಮರಳು ದಿಬ್ಬಗಳಿಗೆ ಕೆ.ಸಿ.ಝಡ್.ಎಂ.ಎ ನಿಂದ ಅನುಮೋದನೆ ದೊರೆತಿದ್ದು, ಇದರಲ್ಲಿ 7,96,522 ಮೆ.ಟನ್ ಮರಳು ತೆರವುಗೊಳಿಸಲು ಅನುಮೋದನೆ ದೊರೆತಿದೆ, ಜಿಲ್ಲಾ 7 ಸದಸ್ಯರ ಸಮಿತಿ ಸಭೆಯನ್ನು ಕರೆದು ಶೀಘ್ರದಲ್ಲಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು. ಪ್ರತಿಕ್ರಿಯಿಸಿ ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಮರಳು ವಿತರಿಸುವಂತೆ ದಿನಕರ ಬಾಬು ಸೂಚಿಸಿದರು.

ಗ್ರಾಮ ಪಂಚಾಯತ್ಗಳ ತೆರಿಗೆ ವಸೂಲಾತಿ ಪ್ರಮಾಣ ಕಡಿಮೆ ಇದ್ದು, ವಸೂಲಾದ ತೆರಿಗೆಯನ್ನು ಅದೇ ದಿನ ಜಮೆ ಮಾಡುವಂತೆ ತಿಳಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್, ತೆರಿಗೆ ವಸೂಲಾತಿಯಲ್ಲಿ ಸಂಪೂರ್ಣ ಗುರಿ ಸಾಧಿಸುವಂತೆ ತಿಳಿಸಿದರು.

ಗ್ರಾಮ ಪಂಚಾಯತ್ ಕಟ್ಟಡ ಬಾಡಿಗೆ ವಸೂಲಾತಿ ಪ್ರಮಾಣ ಕಡಿಮೆ ಇದ್ದು, ಮಾರ್ಚ್ ಅಂತ್ಯದೊಳಗೆ ಸಂಪೂರ್ಣ ತೆರಿಗೆ ವಸೂಲಾತಿ ಮಾಡುವಂತೆ ಸಿಇಓ ತಿಳಿಸಿದರು.

ಎಸ್ಸಿಪಿ /ಟಿಎಸ್ಪಿ ಯೋಜನೆಗಳಲ್ಲಿ ಪ್ರಗತಿ ಕುಂಠಿತವಾದರೆ ಸಂಬಂದಪಟ್ಟ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಓ ತಿಳಿಸಿದರು.

ಮಂಗನ ಕಾಯಿಲೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರಾಮರಾವ್ ಮಾತನಾಡಿ, ಜಿಲ್ಲೆಯಲ್ಲಿ ಮಂಗನ ಖಾಯಿಲೆ ನಿಯಂತ್ರಣದಲ್ಲಿದೆ, ಈ ಬಗ್ಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಮಂಗನ ಕಾಯಿಲೆ ಪಾಸಿಟಿವ್ ಎಂಬ ವರದಿ ಬಂದ ಕಡೆಗಳಲ್ಲಿ ಮೆಥಲಿನ್ ಸಿಂಪಡಿಸಿ, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ, ಮುಂಜಾಗೃತಾ ಕ್ರಮವಾಗಿ ಮಂಗಗಳು ಹೆಚ್ಚು ಇರುವ ಕಡೆಗಳಲ್ಲಿ ಪ್ರವಾಸಿಗರು ಹೋಗದಂತೆ ಬ್ಯಾನರ್ಗಳನ್ನು ಹಾಕಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ, ಮುಂದಿನ ದಿನಗಳಲ್ಲಿ ನಿರ್ಮಿಸಲಾಗರುವ ಶೌಚಾಲಯಗಳಲ್ಲಿ ಟ್ವಿನ್ ಪಿಟ್ ಟಾಯ್ಲೆಟ್ ನಿರ್ಮಿಸಬೇಕಿದ್ದು, ಈ ಕುರಿತಂತೆ ಎಲ್ಲಾ ಪಂಚಾಯತ್ ಮತ್ತು ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹೇಳಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶೀಲಾ ಕೆ ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಎಸ್ ಕೋಟ್ಯಾನ್ ಉಪಸ್ಥಿತರಿದ್ದರು.


Spread the love

Exit mobile version