ಕುಮಾರಸ್ವಾಮಿ ರೆಸಾರ್ಟ್ ವಾಸ್ತವ್ಯ – ವರದಿಗಾರಿಕೆ ತೆರಳಿದ ಮಾಧ್ಯಮದವರ ಮೇಲೆ ದಬ್ಬಾಳಿಕೆ ತೋರಿದ ಪೊಲೀಸರು!

Spread the love

ಕುಮಾರಸ್ವಾಮಿ ರೆಸಾರ್ಟ್ ವಾಸ್ತವ್ಯ – ವರದಿಗಾರಿಕೆ ತೆರಳಿದ ಮಾಧ್ಯಮದವರ ಮೇಲೆ ದಬ್ಬಾಳಿಕೆ ತೋರಿದ ಪೊಲೀಸರು!

ಉಡುಪಿ: ಪ್ರಕೃತಿ ಚಿಕಿತ್ಸೆ ಪಡೆಯುವ ಸಲುವಾಗಿ ಉಡುಪಿ ಸಮೀಪದ ಕಾಪುವಿನ ಸಾಯಿ ರಾಧಾ ರೆಸಾರ್ಟ್ ಗೆ ರಾಜ್ಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ರವಿವಾರ ತಡರಾತ್ರಿ ಆಗಮಿಸಿದ್ದ ಈ ವೇಳೆ ವರದಿಗಾರಿಕೆಗೆ ತೆರಳಿದ ಮಾಧ್ಯಮ ಪ್ರತಿನಿಧಿಗಳ ಮೇಲೆ ಪೋಲಿಸರು ದಬ್ಬಾಳಿಕೆ ನಡೆಸಿದ ಘಟನೆ ವರದಿಯಾಗಿದೆ.

ರವಿವಾರ ರಾತ್ರಿ ಬೆಂಗಳೂರಿನಿಂದ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಅಲ್ಲಿಂದ ರಸ್ತೆ ಮೂಲಕ ಉಡುಪಿಗೆ ಆಗಮಿಸಿದ್ದಾರೆ. ಬಳಿಕ ಕಾಪುವಿನ ಮೂಳೂರಿನಲ್ಲಿರುವ ಸಾಯಿರಾಧಾ ಹೆಲ್ತ್ ರೆಸಾರ್ಟ್ಗೆ ತೆರಳಿ ವಾಸ್ತವ್ಯ ಹೂಡಿದ್ದಾರೆ. ಅವರಿಬ್ಬರು ಇಲ್ಲಿ ನಾಲ್ಕೈದು ದಿನ ತಂಗಿ ಆಯುರ್ವೇದ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

ಈ ವೇಳೆ ಮುಖ್ಯಮಂತ್ರಿಗಳು ರೆಸಾರ್ಟ್ ಆಸುಪಾಸಿನಲ್ಲಿ ಯಾರೂ ಕೂಡ ಸಂಚರಿಸದಂತೆ ಎಚ್ಚರ ವಹಿಸುವಂತೆ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದ್ದು ಅದರಂತೆ ಖಾಸಗಿ ರಸ್ತೆಯಲ್ಲಿ ನಿಂತು ವರದಿಗಾರಿಕೆ ಮಾಡಲು ಬಂದ ಮಾಧ್ಯಮ ಪ್ರತಿನಿಧಿಗಳಿಗೂ ಕೂಡ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮತ್ತು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಶಾಂತಾರಾಮ್ ಎನ್ನುವವರು ಮಾಧ್ಯಮದವರನ್ನು ತಳ್ಳಿ ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.

ಪೊಲೀಸರ ಈ ನಡೆ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ರೆಸಾರ್ಟ್ ಸುತ್ತಮುತ್ತ ಯಾರೂ ಕೂಡ ಬಾರದಂತೆ ಮುಖ್ಯಮಂತ್ರಿಗಳು ಪೊಲೀಸರಿಗೆ ಸೂಚಿಸಿರುವುದರಿಂದ ಸ್ಥಳೀಯ ಜನರಿಗೂ ಕೂಡ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ.

ಒಂದು ಕಡೆಯಲ್ಲಿ ರಾಜ್ಯ ರಾಜ್ಯ ಹಿಂದೆಂದೂ ಕಾಣದಂತಹ ಬರಕ್ಕೆ ತುತ್ತಾಗಿದೆ. ಬಿಸಿಗಾಳಿಗೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ತುತ್ತಾಗಿವೆ. ರಾಜ್ಯದ ಉಡುಪಿ ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕುಡಿಯಲು ಸಹ ನೀರಿಲ್ಲದೆ ಜನ ಜಾನುವಾರುಗಳು ಸಾವಿಗಿಡಾಗುತ್ತಿರುವ ಕುರಿತು ಸುದ್ದಿಯಾಗುತ್ತಲೇ ಇದೆ. ಆದರೆ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರದ ಮುಖ್ಯಮಂತ್ರಿಗಳು ಮತ್ತು ಸಚಿವರು ಮಾತ್ರ ಚುನಾವಣೆ ಮುಗಿಸಿ ಇದೀಗ ರಿಲ್ಯಾಕ್ಸ್ ಮೂಡ್ಗೆ ಜಾರಿರುವುದು ಮಾತ್ರ ವಿಪರ್ಯಾಸ.


Spread the love