ಕುಮಾರ ಪರ್ವತಕ್ಕೆ ಚಾರಣಕ್ಕೆ ಆಗಮಿಸಿ ಕಾಣೆಯಾಗಿದ್ದ ಟೆಕ್ಕಿ ಪತ್ತೆ
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರ ಪರ್ವತಕ್ಕೆ ಚಾರಣಕ್ಕೆ ಆಗಮಿಸಿದ್ದ ಬೆಂಗಳೂರಿನ 12 ಮಂದಿ ಯುವಕರ ತಂಡದಿಂದ ನಾಪತ್ತೆಯಾಗಿದ್ದ ಬೆಂಗಳೂರು ನಿವಾಸಿ ಸಂತೋಷ್ (25)ಪತ್ತೆಯಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ 12.30ರ ವೇಳೆಗೆ ಅವರೇ ಆದಿ ಸುಬ್ರಹ್ಮಣ್ಯದ ಬಳಿಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ತಲುಪಿದ್ದಾರೆ. ಕುಮಾರ ಪರ್ವತದ ಬಳಿಯ ಗುಡ್ಡದಿಂದ ಕುಕ್ಕೆ ದೇವಾಲಯಕ್ಕೆ ತೀರ್ಥದ ಉದ್ದೇಶದಿಂದ ಪೈಪ್ ಲೈನ್ ಅಳವಡಿಸಲಾಗಿತ್ತು . ಈ ಪೈಪನ್ನು ದಾರಿ ಸೂಚಕವಾಗಿ ಬಳಸಿ ಮತ್ತೆ ಸುಬ್ರಹ್ಮಣ್ಯ ತಲುಪಿದೆ ಎಂದು ನಾಪತ್ತೆಯಾಗಿದ್ದ ಸಂತೋಷ್ ತಿಳಿಸಿದ್ದಾರೆ.
ಸಂತೋಷ್ ಬೆಂಗಳೂರು ಗಾಯತ್ರಿ ನಗರದ ನಿವಾಸಿ ಅಂಜನಮೂರ್ತಿ ಎಂಬುವರ ಪುತ್ರ. ಅವರ ಸಹಿತ 12 ಮಂದಿ ಶನಿವಾರ ಬೆಳಗ್ಗೆ 7 ಗಂಟೆಗೆ ಸುಬ್ರಹ್ಮಣ್ಯಕ್ಕೆ ಬಂದು ದೇವರಗದ್ದೆ ಕಡೆಯಿಂದ ಪರ್ವತಾರೋಹಣ ಆರಂಭಿಸಿದ್ದರು. ಅಂದು ರಾತ್ರಿ ಗಿರಿಗದ್ದೆಯಲ್ಲೇ ಉಳಿದು ಭಾನುವಾರ ಮಧ್ಯಾಹ್ನ 11 ಗಂಟೆ ಸುಮಾರಿಗೆ ಶೇಷ ಪರ್ವತ ಎಂಬಲ್ಲಿಗೆ ತಲುಪಿ ಅಲ್ಲಿಂದ ಮತ್ತೆ ಗಿರಿಗದ್ದೆಗೆ ಬಂದಿಳಿದಿದ್ದಾರೆ. ನಂತರ ಊಟ ಮುಗಿಸಿ ಸುಬ್ರಹ್ಮಣ್ಯ ಕಡೆ ಸಾಯಂಕಾಲ ಪ್ರಯಾಣ ಬೆಳೆಸಿದ್ದಾರೆ. 12 ಜನರ ತಂಡ ಎರಡು ಭಾಗವಾಗಿ ತೆರಳಿದ್ದು, 6 ಜನರ ಒಂದು ತಂಡ ಮೊದಲು ತಲುಪಿದೆ. ಸ್ವಲ್ಪ ಹೊತ್ತಿನ ನಂತರ ಗಿರಿಗದ್ದೆ ಮನೆಯಿಂದ ಉಳಿದ ಆರು ಜನರ ತಂಡ ಸುಬ್ರಹ್ಮಣ್ಯ ಕಡೆಗೆ ಬರುವ ವೇಳೆ ಜೋರಾಗಿ ಮಳೆ ಸುರಿಯಲಾರಂಭಿಸಿದೆ. ಆ ವೇಳೆ ಸಂತೋಷ್ ತನ್ನ ಜಾಕೆಟ್‌ನ್ನು ತೆಗೆದು ರೈನ್‌ಕೋಟ್ ಹಾಕಿದ್ದಾರೆ. ಅಲ್ಲಿಯವರೆಗೆ ಸ್ನೇಹಿತರ ಜತೆಗಿದ್ದ ಸಂತೋಷ್ ರೈನ್‌ಕೋಟ್ ಧರಿಸಿ ಬರುತ್ತಿದ್ದ ಸ್ವಲ್ಪ ಹೊತ್ತಿನಲ್ಲೇ ಕಣ್ಮರೆಯಾಗಿದ್ದರು. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿತ್ತು.