ಕುಮಾರ ಸ್ವಾಮಿ ಮಗನ ಮದುವೆಗೆ ಎಷ್ಟು ಜನ ಬಂದಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ – ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ಮಗನ ಮದುವೆಗೆ ಎಷ್ಟು ಜನ ಬಂದಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಆದರೆ ಯಾರಾದರೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಸ್ಥಳೀಯ ಪೊಲೀಸರು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ ಎಂದು ದಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದ್ದು, ಯಾರಾದರೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಸ್ಥಳೀಯ ಪೊಲೀಸರು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ. ಇದರಲ್ಲಿ ಯಾವುದೇ ವ್ಯಕ್ತಿಗತ ವಿಚಾರಗಳು ಬರುವುದಿಲ್ಲ. ಕೇವಲ ಎಂಟು-ಹತ್ತು ಜನ ಭಾಗವಹಿಸಿ ಮದುವೆ ನಡೆದರೆ ಯಾರೂ ಆಕ್ಷೇಪಿಸುವುದಿಲ್ಲ. ಕುಮಾರಸ್ವಾಮಿ ಮಗನ ಮದುವೆಗೆ ಎಷ್ಟು ಜನ ಬಂದಿದ್ದಾರೆ ನನಗೆ ಗೊತ್ತಿಲ್ಲ ಆ ಬಗ್ಗೆ ತಿಳಿದುಕೊಂಡು ನಂತರ ಉತ್ತರಿಸುವೆ ಎಂದು ಪ್ರತಿಕ್ರಿಯಿಸಿದರು.
ಪ್ರಜಾಪ್ರಭುತ್ವದಲ್ಲಿ ಬಡವ- ಶ್ರೀಮಂತನಿಗೆ, ಅಧಿಕಾರ ಇದ್ದವರಿಗೆ ಇಲ್ಲದವರಿಗೆ ಒಂದೇ ಕಾನೂನು ಇದ್ದು ಆ ಕಾನೂನು ಪಾಲನೆ ಆಗಿದ್ಯಾ ಇಲ್ವಾ ಅನ್ನೋದು ಚರ್ಚಿಸಬೇಕಾದ ವಿಷಯ ಎಂದು ಅವರು ತಿಳಿಸಿದ್ದಾರೆ.