Home Mangalorean News Kannada News ಕುವೈತ್ ಕನ್ನಡ ಕೂಟದ ದಾಸೋತ್ಸವ – ‘ಭಾವ ತರಂಗ’

ಕುವೈತ್ ಕನ್ನಡ ಕೂಟದ ದಾಸೋತ್ಸವ – ‘ಭಾವ ತರಂಗ’

Spread the love

ಕುವೈತ್ ಕನ್ನಡ ಕೂಟದ ದಾಸೋತ್ಸವ – ‘ಭಾವ ತರಂಗ’

 

ಕುವೈತ್:ಇಲ್ಲಿನ ಇಂಡಿಯನ್ ಕಮ್ಯುನಿಟಿ ಸೀನಿಯರ್ ಸ್ಕೂಲ್ ನ ಸಭಾಂಗಣ ಕುವೈತ್ ಕನ್ನಡ ಕೂಟದ ವರ್ಷದ ಮೊದಲ ಕಾರ್ಯಕ್ರಮ ದಾಸೋತ್ಸವ ಕ್ಕೆ ಸಾಕ್ಷಿಯಾಯಿತು. “ಭಾವ ತರಂಗ” ಎಂಬ ಭಕ್ತಿಭಾವ ಪೂರಿತ ಸಂತ, ದಾಸ, ಸತ್ಸಂಗ ಮಹಾತ್ಮರ ಜೀವನ ಮತ್ತು ಧ್ಯೇಯಗಳನ್ನು ಬಿಂಬಿಸುವ ಮತ್ತು ಕನ್ನಡ ನಾಡು ಮತ್ತು ದೇಶದ ಪರಂಪರೆ ಸಂಸ್ಕೃತಿಗಳ ಅನಾವರಣದ “ಭಾವ ತರಂಗ” ಸಂಗೀತಮಯ ಕಾರ್ಯಕ್ರಮದ ಉತ್ತಮ ದಿಶಾನಿರ್ದೇಶನ ಮತ್ತು ಸಂಚಾಲನೆಯನ್ನು ಕೂಟದ ಸಾಂಸ್ಕೃತಿಕ ಸಮಿತಿ ಶ್ರೀಮತಿ ಸೌರಭ ವಿಕ್ರಮ್ ನೇತೃತ್ವದಲ್ಲಿ ನಡೆಸಿಕೊಟ್ಟಿತು. ಕೂಟದ ಮಕ್ಕಳು ವಿಘ್ನವಿನಾಶಕನನ್ನು ಸ್ತುತಿಸಿ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು.

ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಬಸವರಾಜು, ಉಪಾಧ್ಯಕ್ಷರಾದ ಶ್ರೀ ತಾರೇಂದ್ರ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕಿರಣ್ ಹುಲಿಕಲ್ ಮತ್ತು ಖಜಾಂಚಿಗಳಾದ ಶ್ರೀ ಅನಂತಶಯನ ದಂಬಳ್ ರವರು ಮಂಗಳ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷರಾದ ಶ್ರೀ ಪ್ರಭಾಕರ್ ರವರು ದಾಸೋತ್ಸವ ಸಂಪ್ರದಾಯದ ಮಹತ್ವವನ್ನು ಸಾರುತ್ತಾ, ಕಾರ್ಯಕ್ರಮದ ಕಿರುಪರಿಚಯವನ್ನಿತ್ತು, ನೆರೆದ ಸಭಿಕರನ್ನು ನಲ್ಮೆಯಿಂದ ಸ್ವಾಗತಿಸಿದರು. ನಂತರ ಕೂಟದ ಮಕ್ಕಳ ಪ್ರತಿಭಾ ಅನಾವರಣಕ್ಕೆ ವೇದಿಕೆ ಸಾಕ್ಷಿಯಾಯಿತು. ದಾರ್ಶನೀಕರು, ಸಂತರು, ದಾಸರು, ವಚನಕಾರರ ಜೀವನ ಮತ್ತು ಧ್ಯೇಯಗಳನ್ನು ಬಿಂಬಿಸುವ ದೇಶದ ಪುರಾಣ ಕಥೆಗಳ ಆಧಾರಿತ ಸ್ಪರ್ಧೆಗಳಲ್ಲಿ ವಿವಿಧ ವಿಭಾಗಗಳಲ್ಲಿ ಮಕ್ಕಳು ಪಾಲ್ಗೊಂಡರು. ನಿಜಕ್ಕೂ ಪುಟಾಣಿಗಳ ಪ್ರತಿಭಾ ಪ್ರದರ್ಶನ ಸಭಿಕರ ಬೆರಗು ವಿಸ್ಮಯಗಳಿಗೆ ಕಾರಣವಾಯಿತು. ತದನಂತರ ದಾಸೋತ್ಸವದ ವಿಶೇಷವಾದ ಮತ್ತು ಎಲ್ಲರ ಮನಸೂರೆಗೊಂಡ “ಕಾಲಚಕ್ರ” ಎಂಬ ನಾಲ್ಕೂ ಯುಗಗಳ ಸಾರವನ್ನರುಹುವ ನೃತ್ಯ-ನಾಟಕವನ್ನು ಕೂಟದ ಮಕ್ಕಳು ನಯನ ಮನೋಹರವೆನ್ನುವಂತೆ ಪ್ರದರ್ಶಿಸಿ ಕೂಟದ ಸದಸ್ಯರ ಮತ್ತು ನೆರೆದ ಸಭಿಕರ ತುಂಬುಕರತಾಡನದ ಪ್ರೋತ್ಸಾಹಕ್ಕೆ ಪಾತ್ರರಾದರು.

ತನ್ನ ಮೊದಲ ಕಾರ್ಯಕ್ರಮದ ನಿತ್ಯದ ಅಂಗಗಳಾದ ಪೂರ್ವ ಕಾರ್ಯಕಾರಿ ಸಮಿತಿಯನ್ನು ಸ್ಮರಣಿಕೆಯನ್ನು ನೀಡಿ ಸನ್ಮಾನಿಸುವ ಕಾರ್ಯಕ್ರಮವನ್ನು ಕಾರ್ಯಕಾರಿ ಸಮಿತಿ ನಡೆಸಿಕೊಟ್ಟಿತು. ತದನಂತರ ೨೦೧೭ ನೇ ಸಾಲಿನ ಪರೀಕ್ಷೆಗಳಲ್ಲಿ ಯಶಸ್ಸು ಕಂಡ ೧೦ ನೇ ಮತ್ತು ೧೨ ನೇ ತರಗತಿ ಮಕ್ಕಳಿಗೆ ಸ್ಮರಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮ ಸರಣಿಯಲ್ಲಿ ನಿತ್ಯದಂತೆ ಕೂಟದ ಸೃಜನ ಪ್ರತಿಭಾ ಅನಾವರಣದ ಪತ್ರಿಕೆ “ಮರಳ ಮಲ್ಲಿಗೆ”ಯ ದಾಸೋತ್ಸವ ಸಂಚಿಕೆಯನ್ನು ಬಿಡುಗಡೆಯನ್ನು ಕಾರ್ಯಕಾರಿ ಸಮಿತಿಯು ನಡೆಸಿಕೊಟ್ಟಿತು. ಈ ಮೊದಲು ಸಮಿತಿಯ ಸಂಚಾಲಕಿ ಶ್ರೀಮತಿ ವೀಣಾಗಿರಿಧರ್ ರವರು ಸಂಚಿಕೆಯ ವಿಶೇಷಗಳ ಪರಿಚಯ ಮಾಡಿಕೊಟ್ಟರು. ಕೂಟದ ಮಕ್ಕಳು ಮನಮೋಹಕ ನೃತ್ಯದೊಂದಿಗೆ ನಡೆಸಿಕೊಟ್ಟ ಶ್ರೀ ಸುರೇಶ್ ಸಾಲಿಯಾನ್ ರ ಅಚ್ಚುಕಟ್ಟಾದ ನಿರ್ದೇಶನದ “ನಗರಭಜನೆ” ಎಲ್ಲರ ಮನಸೂರೆಗೊಂಡಿತು.

ಕಾರ್ಯಕ್ರಮದ ಅಂತಿಮಘಟ್ಟದಲ್ಲಿ ಭಕ್ತಿ-ಭಾವದ ಭಜನೆ ಗಾಯನ ಸರಣಿಗೆ ಶುಭಾರಂಭವನ್ನು ಕೂಟದ ಗಾಯಕಿ ಶ್ರೀಮತಿ ಮಾಧವಿ ಕುಲಕರ್ಣಿಯವರು ಮಾಡಿದ ನಂತರ ಕುವೈತ್ ನ ವಿವಿಧ ನೆಲೆಗಳಲ್ಲಿನ ಕೂಟದ ಮಹಿಳಾ ತಂಡಗಳು ಭಾವತರಂಗದ ಭಜನಾ ಗಾಯನ ನಡೆಸಿಕೊಟ್ಟರು. ಪುರುಷ ಭಜನಾಮಂಡಳಿ ತದನಂತರ ಹಲವು ಭಜನೆಗಳನ್ನು ಹಾಡಿ ಸಭೆಯಲ್ಲಿ ಭಕ್ತಿಭಾವದ ತರಂಗಗಳನ್ನೇ ಸೃಷ್ಟಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ಕಾರಣ ಕರ್ತರಾದ ಅದರಲ್ಲೂ ಪ್ರಾಯೋಜನೆಯನ್ನು ಕರುಣಿಸಿದ ದಾನಿಗಳಿಗೆ ಧನ್ಯವಾದ ಸಮರ್ಪಣೆ ಮಾಡುತ್ತಾ ಕೂಟದ ಕಾರ್ಯದರ್ಶಿ ಶ್ರೀ ಕಿರಣ್ ಹುಲಿಕಲ್ ರವರು ಕೂಟದ ಎಲ್ಲಾ ಸಮಿತಿಗಳ ಕಾರ್ಯಚಾತುರ್ಯವನ್ನು ಶ್ಲಾಘಿಸಿ ಅಭಿವಂದಿಸಿದರು. ಎಲ್ಲರನ್ನೂ ನಮಿಸುತ್ತಾ ವಂದನಾರ್ಪಣೆಯನ್ನು ಮಾಡಿದರು. ಸಾತ್ವಿಕ ಭೋಜನವನ್ನು ಸವಿಯುದರೊಂದಿಗೆ ಭಾವಪೂರ್ಣ ಭಾವತರಂಗ ಕಾರ್ಯಕ್ರಮ ಅಂತಿಮ ತೆರೆಕಂಡಿತು.


Spread the love

Exit mobile version