Home Mangalorean News Kannada News ಕುವೈತ್ ಕನ್ನಡ ಕೂಟ ರಾಜ್ಯೋತ್ಸವ

ಕುವೈತ್ ಕನ್ನಡ ಕೂಟ ರಾಜ್ಯೋತ್ಸವ

Spread the love

ಕುವೈತ್ ಕನ್ನಡ ಕೂಟ ರಾಜ್ಯೋತ್ಸವ

ಕುವೈತ್ : ಕುವೈತ್ ಕನ್ನಡ ಕೂಟ ಕುವೈತಿನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸಂಘಗಳಲ್ಲಿ ಹಳೆಯ ಮತ್ತು ಪ್ರಬುದ್ಧ ಸಂಘಗಳಲ್ಲಿ ಗಣನೆಗೆ ಬರುತ್ತದೆ. ಕೆಲವೇ ಕುಟುಂಬಗಳು ಹಬ್ಬ ಹರಿದಿನಗಳಲ್ಲಿ ಒಟ್ಟಾಗಿ ಸೇರಿ ಸಂಭ್ರಮಿಸುತ್ತಿದ್ದ ಪುಟ್ಟ ಸಮಾವೇಶವಾಗಿ ಉದಯಿಸಿದ ಕುವೈತ್ ಕನ್ನಡ ಕೂಟ ಇಂದು 2೦೦ ಕ್ಕೂ ಹೆಚ್ಚು ಸದಸ್ಯ ಕುಟುಂಬಗಳ ಬಲವುಳ್ಳ 33 ವರ್ಷ ಹಳೆಯ ಮಹತ್ತರ ಸಂಘಟನೆಯಾಗಿ ಬೆಳೆದಿದೆ. ತನ್ನ ಸದಸ್ಯರ, ಕುಟುಂಬಗಳ ಮಕ್ಕಳ ಸಕಲ ಕಲೆಗಳ ಅನಾವರಣ ವೇದಿಕೆಯನ್ನು ಒದಗಿಸುವ, ಕನ್ನಡ ನಾಡಿನ ಸಂಸ್ಕೃತಿ ಸೃಜನ ಸಿರಿಯನ್ನು ಕುವೈತಿನಲ್ಲಿರುವ ಅನಿವಾಸಿ ಭಾರತೀಯರಿಗೆ ಪರಿಚಯಿಸುವ ಗುರುತರ ಧ್ಯೇಯಗಳನ್ನು ನಿರ್ವಹಿಸುತ್ತಿದೆ. ತನ್ಮೂಲಕ ಕನ್ನಡ ನಾಡಿನಲ್ಲಿ ಸಮಾಜಪರ ಕಾಳಜಿಯ ದತ್ತಿ ದೇಣಿಗೆಗಳನ್ನೂ ನೀಡುವುದರೊಂದಿಗೆ ನಾಡಿನ ಬೆಳವಣಿಗೆಗೂ ತನ್ನ ಅಳಿಲು ಕಾಣಿಕೆ ನೀಡುತ್ತಾ ಬಂದಿದೆ. ತನ್ನದೇ ನೀತಿ-ನಿಯಮಗಳ ಪರಿಮಿತಿಯಲ್ಲಿ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಾ ಬಂದಿದೆ. ಪ್ರತಿ ವರ್ಷ “ದಾಸೋತ್ಸವ” ಎಂಬ ಭಕ್ತಿ ಆರಾಧನೆಯ ಕಾರ್ಯಕ್ರಮದೊಂದಿಗೆ ಚಟುವಟಿಕೆಗಳ ಸರಣಿಯನ್ನು ಪ್ರಾರಂಭಿಸುತ್ತದೆ. ರಾಜ್ಯೋತ್ಸವ ಕಾರ್ಯಕ್ರಮ ಕೂಟದ ಪ್ರಮುಖ ಕಾರ್ಯಕ್ರಮ. ಆಟೋಟಗಳ ಸ್ಪರ್ಧೆಗಳು, ಹೊರಾಂಗಣ ಮತ್ತು ಒಳಾಂಗಣ ಕ್ರೀಡಾ ಆಯೋಜನೆಗಳ ಮೂಲಕ ಕೂಟವು ಸದಸ್ಯರ ದೇಹಾರೋಗ್ಯ ಮತ್ತು ಸಹಬಾಳ್ವೆಯ ಉಲ್ಲಾಸಮಯ ವಾತವರಣಕ್ಕೆ ನಾಂದಿಹಾಡಿದರೆ, ತನ್ನದೇ ರೀತಿಯ ಸೃಜನ ಸಾಮರ್ಥ್ಯದ ಅನಾವರಣಕ್ಕೆಂದೇ ಹೊರತರುವ “ಮರಳ ಮಲ್ಲಿಗೆ” ಸಂಚಿಕೆಯ “ಮರಳ ಮಲ್ಲಿಗೆ” ದಿನಾಚರಣೆ ಕೂಟದ ಚಟಿವಟಿಕೆಗಳ ವೈವಿಧ್ಯಕ್ಕೆ ಸಾಕ್ಷಿ. ವರ್ಷದ ಕೊನೆಯ ಕಾರ್ಯಕ್ರಮದಲ್ಲಿ ಹೊಸವರ್ಷ, ಕ್ರಿಸ್ಮಸ್ ಮತ್ತು ಸಂಕ್ರಾಂತಿಗಳ ಸಮ್ಮಿಶ್ರ ಕಾರ್ಯಕ್ರಮಗಳ ಆಯೋಜನೆಯ ಜೊತೆಗೆ ಸರ್ವ ಸಮ್ಮತಿಯಿಂದ ಆಯ್ಕೆಯಾಗುವ ಹೊಸ ಕಾರ್ಯಕಾರಿ ಸಮಿತಿ ಕೂಟದ ಸಾಮರಸ್ಯಕ್ಕೆ ಹಿಡಿದ ಕೈಗನ್ನಡಿ.

          ವರ್ಷ ೨೦೧೭ ರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಶ್ರೀ ಅರುಣ್ ಕುಮಾರ್ ಬಾಪು, ಉಪಾಧ್ಯಕ್ಷರಾಗಿ ಡಾ. ಆಜಾದ್ ಇಸ್ಮಾಯಿಲ್ ಸಾಹೇಬ್, ಕಾರ್ಯದರ್ಶಿಗಳಾಗಿ ಶ್ರೀ ಜಿತೇಂದ್ರ ರಾವ್ ಮತ್ತು ಖಜಾಂಚಿಗಳಾಗಿ ಶ್ರೀ ಮಹೇಶ್ ಶೀರಾಮಗೊಂಡ್ ಅಯ್ಕೆಯಾಗಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ನಮ್ಮ ಹೆಮ್ಮೆಯ ರಾಜ್ಯೋತ್ಸವವನ್ನು ನವಂಬರ್ ೧೭ ರಂದು Kuwait College of Science and Technology ಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ನಾಡಿನ ಹೆಸರಾಂತ ಪರಿಸರವಿಜ್ಞಾನಿ, ವನ್ಯಜೀವಿ ಸಂರಕ್ಷಕ, ರಾಷ್ಟ್ರೀಯ ಹುಲಿ ಪರಿಯೋಜನೆಯ ಮಹತ್ತರ ಸಾಧನೆಗಳ ಕರ್ತೃ ಡಾ. ಉಲ್ಲಾಸ್ ಕಾರಂತರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಲ್ಲದೇ ಕರ್ನಾಟಕದ ಉಡುಪಿಯ ”ನೃತ್ಯನಿಕೇತನ ಕೊಡವೂರು” ಕಲಾ ಸಂಸ್ಥೆಯ ಶಾಸ್ತ್ರೀಯ ಗಾಯನದ ವಿದ್ವಾನ್ ಶ್ರೀ ಸುಧೀರ್ ರಾವ್ ಕೊಡವೂರು ಮತ್ತು ಶ್ರೀಮತಿ ಮಾನಸಿ ಸುಧೀರ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇವರು ತಾವೇ ಪರಿಕಲ್ಪಿಸಿ ನಿರ್ದೇಶಿಸಲಿರುವ “ಮಳೆಬಂತು ಮಳೆ” ಎಂಬ ನೃತ್ಯ ರೂಪಕವನ್ನು ಕೂಟದ ಮಕ್ಕಳಿಗೆ ಮತ್ತು ಸದಸ್ಯರಿಗೆ ತರಬೇತಿ ನೀಡಿ ಅಣಿಗೊಳಿಸುವ ಮೂಲಕ ಪ್ರಸ್ತುತಪಡಿಸಲಿದ್ದಾರೆ. ಕರ್ನಾಟಕದ “ಕರುನಾಡ ಕಣ್ಮಣಿಗಳು” ಎಂಬ ಕಾರ್ಯಕ್ರಮ ಘೋಷವಾಕ್ಯದೊಂದಿಗೆ ಈ ವರ್ಷದ ರಾಜ್ಯೋತ್ಸವ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ. ಕರ್ನಾಟಕದ ಇತ್ತೀಚಿನ ಸಾಧಕರ, ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ದೇಶದ ಮತ್ತು ನಾಡಿನ ಅನಿವಾಸಿ ಜನತೆಗೆ ಮಾಡಿಸುವುದು ಈ ವಿಶೇಷ ಕಾರ್ಯಕ್ರಮದ ಉದ್ದೇಶವಾಗಿದೆ.

          ಕಾರ್ಯಕ್ರಮದ ಮೊದಲ ಹಂತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕನ್ನಡನಾಡಿನ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿವ “ಕರುನಾಡ ಕಣ್ಮಣಿಗಳು” ಎಂಬ ಕಾರ್ಯಕ್ರಮದ ನೃತ್ಯ, ರೂಪಕ, ವ್ಯಕ್ತಿ ಪರಿಚಯ ಮುಂತದುವುಗಳನ್ನು ದರ್ಶಿಸುವ ಪ್ರಯತ್ನವನ್ನು ಕನ್ನಡ ಕೂಟದ ಮಕ್ಕಳು ಮತ್ತು ಹಿರಿಯರು ಮಾಡಲಿದ್ದಾರೆ. ಎರಡನೇ ಹಂತದಲ್ಲಿ ಮುಖ್ಯ ಅತಿಥಿಗಳಿಗೆ ಸನ್ಮಾನ ಆಗಮಿತ ಅತಿಥಿಗಳಿಗೆ ಗೌರವಾರ್ಪಣೆ, ಕಾರ್ಯಕ್ರಮಕ್ಕೆ ಸಹಾಯ ಹಸ್ತ ನೀಡಿದ ಎಲ್ಲಾ ಸಹೃದಯಿ ಸಂಸ್ಥೆ/ವ್ಯಕ್ತಿಗಳಿಗೆ ಕೃತಜ್ಞತಾಪೂರ್ವಕ ನೆನಪಿನ ಕಾಣಿಕೆಯ ಅರ್ಪಣೆ ನಡೆಯುತ್ತವೆ. ಮೂರನೇ ಹಂತದಲ್ಲಿ ಶ್ರೀಮತಿ ಮಾನಸಿಯವರು ಪ್ರಸ್ತುತ ಪಡಿಸುವ ಕಾರ್ಯಕ್ರಮಗಳು, ಇರುತ್ತವೆ.


Spread the love

Exit mobile version