ಕೂಳೂರು ರಸ್ತೆ ಹೋರಾಟಗಾರರ ಮೇಲಿನ ಕಾವೂರು ಪೊಲೀಸರ ಎಫ್ಐಆರ್ ಗೆ ಹೈಕೋರ್ಟ್ ತಡೆ

Spread the love

ಕೂಳೂರು ರಸ್ತೆ ಹೋರಾಟಗಾರರ ಮೇಲಿನ ಕಾವೂರು ಪೊಲೀಸರ ಎಫ್ಐಆರ್ ಗೆ ಹೈಕೋರ್ಟ್ ತಡೆ

ಕೂಳೂರು: ರಸ್ತೆ ರಿಪೇರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಟೋಲ್ ವಿರೋಧಿ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ಮತ್ತಿತರರ ಮೇಲೆ ಕಾವೂರು ಪೊಲೀಸರು ದಾಖಲಿಸಿದ್ದ ಎಫ್ಐಆರ್ ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಕೂಳೂರು ರಸ್ತೆ ರಿಪೇರಿಗೆ ಆಗ್ರಹಿಸಿ ಟೋಲ್ ವಿರೋಧಿ ಹೋರಾಟ ಸಮಿತಿಯು 2024 ನವೆಂಬರ್ 26 ರಂದು ಪ್ರತಿಭಟನೆ ನಡೆಸಿತ್ತು‌. ಈ ಸಂಬಂಧ ಕಾವೂರು ಪೊಲೀಸರು ಮುನೀರ್ ಕಾಟಿಪಳ್ಳ, ಬಿ ಕೆ ಇಮ್ತಿಯಾಜ್, ಸುನೀಲ್ ಕುಮಾರ್ ಬಜಾಲ್, ಮಂಜುಳಾ ನಾಯಕ್, ಶ್ರೀನಾಥ್ ಕುಲಾಲ್, ರಾಘವೇಂದ್ರ, ಯಾದವ ಶೆಟ್ಟಿ, ದಯಾನಂದ ಶೆಟ್ಟಿ ವಿರುದ್ದ ಎಫ್ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ನ್ಯಾಯಾಲಯವು ಹೋರಾಟಗಾರರ ವಿರುದ್ದ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.

ಹೋರಾಟಗಾರರ ಮೇಲಿನ ಈ ಎಫ್ಐಆರ್ ರದ್ದುಗೊಳಿವಂತೆ ಕರ್ನಾಟಕ ಹೈಕೋರ್ಟ್ ನಲ್ಲಿ ಹೋರಾಟಗಾರರ ಪರವಾಗಿ ಹಿರಿಯ ನ್ಯಾಯವಾದಿ ಎಸ್ ಬಾಲನ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಜಸ್ಟಿಸ್ ಹೇಮಂತ್ ಚಂದನ್ ಗೌಡರ್ ಅವರು ಎಫ್ಐಆರ್ ಗೆ ತಡೆಯಾಜ್ಞೆ ನೀಡಿದ್ದಾರೆ.

ಬಿಎನ್ಎಸ್ ಸೆಕ್ಷನ್ 189, 190 ಅಡಿಯಲ್ಲಿ ಹೇಗೆ ವಿಚಾರಣೆ ಮಾಡಲು ಸಾದ್ಯ ? ಬಿಎನ್ಎಸ್ ಸೆಕ್ಷನ್ 3(5) ಅನ್ನು ಹಾಕದೆಯೇ ಈ ಸೆಕ್ಷನ್ ಗಳಡಿಯಲ್ಲಿ ವಿಚಾರಣೆ ಮಾಡಲು ಸಾದ್ಯವೇ ? ಜನ ಗುಂಪು ಸೇರಿ ಶಾಂತಿಯುತ ಪ್ರತಿಭಟನೆ ಮಾಡಿರುವುದಕ್ಕೆ ಎಫ್ಐಆರ್ ಮಾಡುವ ಅಗತ್ಯ ಏನಿದೆ ? ಎಂದು ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಸಾರ್ವಜನಿಕ ರಸ್ತೆ ದುರಸ್ಥಿಗೆ ಆಗ್ರಹಿಸಿದವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಇದು ನಾಗರಿಕರ ಮೂಲಭೂತ ಕರ್ತವ್ಯಗಳ ಉಲ್ಲಂಘನೆಯಾಗಿದೆ. ಭಾರತದ ಸಂವಿಧಾನದ ಪರಿಚ್ಛೇದ 51ಎ ನಲ್ಲಿ ನಾಗರಿಕರ ಮೂಲಭೂತ ಕರ್ತವ್ಯಗಳನ್ನು ವಿವರಿಸಲಾಗಿದೆ. ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತಪ್ಪಿಸುವುದು ನಾಗರಿಕರಿಗೆ ಸಂವಿಧಾನ ಕೊಡಮಾಡಿದ ಮೂಲಭೂತ ಕರ್ತವ್ಯವಾಗಿದೆ’ ಎಂದು ಹೋರಾಟಗಾರರ ಪರ ವಕೀಲ ಎಸ್ ಬಾಲನ್ ವಾದ ಮಂಡಿಸಿದರು.

‘ಸಾರ್ವಜನಿಕ ಹಿತಾಸಕ್ತಿಗಾಗಿ ನಡೆದ ಪ್ರತಿಭಟನೆಯಲ್ಲಿ ಯಾವುದೇ ಲೌಡ್ ಸ್ಪೀಕರ್ ಬಳಕೆ ಮಾಡಿಲ್ಲ ಮತ್ತು ಸಾರ್ವಜನಿಕರಿಗೆ ಅಥವಾ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿಲ್ಲ. ಪ್ರತಿಭಟನೆಯ ಭದ್ರತೆಗಾಗಿ ಪೊಲೀಸರು ನಿಯೋಜಿಸಲ್ಪಟ್ಟಿದ್ದರು. ಪ್ರತಿಭಟನೆ ವೇಳೆ ಅವರು ಯಾರನ್ನೂ ತಡೆಗಟ್ಟಲಿಲ್ಲ ಅಥವಾ ಬಂಧಿಸಲಿಲ್ಲ. ಪ್ರತಿಭಟನಾಕಾರರು ಮನೆಗೆ ಹಿಂತಿರುಗಿದ ನಂತರ ಮಾತ್ರ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಎಸ್ ಬಾಲನ್ ವಿವರಿಸಿದರು.

‘ಎಫ್ಐಆರ್ ನಲ್ಲಿ ಹೆಸರಿಸಲ್ಪಟ್ಟ ಹೋರಾಟಗಾರರು ಮಂಗಳೂರಿನ ಹೆಸರಾಂತ ಹೋರಾಟಗಾರರಾಗಿದ್ದಾರೆ. ಎಫ್‌ಐಆರ್ ದಾಖಲಾದ ಬಳಿಕವೂ ಸಾರ್ವಜನಿಕ ಹಿತಾಸಕ್ತಿಗಾಗಿ ಹಲವು ಪ್ರತಿಭಟನೆಗಳು ನಡೆಸಲಾಗಿದೆ. ಇದಾದರೂ ಸಹ ಅವರ ವಿರುದ್ಧ ಉದ್ದೇಶಪೂರ್ವಕವಾಗಿ “ಪರಾರಿ ಆರೋಪ ಪಟ್ಟಿ” (Absconding Charge Sheet) ದಾಖಲಿಸಲಾಗಿದೆ.

ಹೋರಾಟಗಾರರಿಗೆ ಪೊಲೀಸರು ಬಿಎನ್ಎಸ್ಎಸ್ ಸೆಕ್ಷನ್ 35 ಅಡಿಯಲ್ಲಿ ನೋಟೀಸ್ ನೀಡದೇ ಚಾರ್ಜ್ ಶೀಟ್ ದಾಖಲಿಸಿರುವುದು ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಮತ್ತು ಕಾನೂನಿನ ದುರ್ಬಳಕೆಯಾಗಿದೆ’ ಎಂದು ಬಾಲನ್ ವಾದ ಮಂಡಿಸಿದರು.

‘ಮಂಗಳೂರಿನ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿಯೇ ಮಟ್ಕ ಜೂಜು, ಅನಧಿಕೃತ ಮರಳು ಗಣಿಗಾರಿಕೆ ಮತ್ತು ಅನುಮತಿ ಇಲ್ಲದ ಮಾಸಾಜ್ ಪಾರ್ಲರ್‌ಗಳು ನಡೆಯುತ್ತಿವೆ. ಇದನ್ನು ತಿಳಿದಿದ್ದರೂ ಪೊಲೀಸ್ ಹಿರಿಯ ಅಧಿಕಾರಿಗಳು ಮೌನವಾಗಿದ್ದಾರೆ. ಈ ಬಗ್ಗೆ ಹೋರಾಟಗಾರರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ರಸ್ತೆ ಪ್ರತಿಭಟನೆಯ ನೆಪದಲ್ಲಿ ಎಫ್‌ಐಆರ್ ಮತ್ತು ಚಾರ್ಜ್ ಶೀಟ್ ದಾಖಲಿಸಲಾಗಿದೆ’ ಎಂದು ಎಸ್ ಬಾಲನ್ ಅವರು ಹೈಕೋರ್ಟ್ ನ ಗಮನ ಸೆಳೆದರು.

ವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್, ಎಫ್ಐಆರ್ ಗೆ ತಡೆಯಾಜ್ಞೆ ನೀಡಿ, ಮಂಗಳೂರು ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೂ ತಡೆಯಾಜ್ಞೆ ನೀಡಿದ್ದಾರೆ. ಕಾವೂರು ಪೊಲೀಸರಿಗೆ ತುರ್ತು ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್ ಟೋಲ್ ವಿರೋಧಿ ಹೋರಾಟಗಾರರಿಗೆ ರಿಲೀಫ್ ನೀಡಿದೆ.

ವಕೀಲರಾದ ರಕ್ಷಿತಾ ಸಿಂಗ್ ಅವರು ಸಹಕರಿಸಿದರು.


Spread the love
Subscribe
Notify of

0 Comments
Inline Feedbacks
View all comments