Home Mangalorean News Kannada News ಕೃಷಿ ಮಾಡುವ ಮೊದಲು ಸಂಪೂರ್ಣ ಮಾಹಿತಿ ಅಗತ್ಯ: ತಾ.ಪಂ. ಅಧ್ಯಕ್ಷೆ ನಳಿನಿ

ಕೃಷಿ ಮಾಡುವ ಮೊದಲು ಸಂಪೂರ್ಣ ಮಾಹಿತಿ ಅಗತ್ಯ: ತಾ.ಪಂ. ಅಧ್ಯಕ್ಷೆ ನಳಿನಿ

Spread the love

ಕೃಷಿ ಮಾಡುವ ಮೊದಲು ಸಂಪೂರ್ಣ ಮಾಹಿತಿ ಅಗತ್ಯ: ತಾ.ಪಂ. ಅಧ್ಯಕ್ಷೆ ನಳಿನಿ

ಉಡುಪಿ :ರೈತರು ಯಾವುದೇ ಕೃಷಿ ಮಾಡಲು ಮೊದಲು ಆ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡಾಗ ಕೃಷಿಯಲ್ಲಿ ಉತ್ತಮ ಇಳುವರಿ ಪಡೆದು ರೈತರ ಸ್ವಯಂ ಅಭಿವೃದ್ಧಿ ಜೊತೆಗೆ ದೇಶದ ಅಭಿವೃದ್ಧಿ ಸಾಧ್ಯ ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ರಾವ್ ತಿಳಿಸಿದ್ದಾರೆ.

ಅವರು ಭಾನುವಾರ ಜಿಲ್ಲಾ ಪಂಚಾಯತ್, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು, ಕೃಷಿ ಸಂಘ ಪೆರಂಪಳ್ಳಿ ಹಾಗೂ ಕೆಥೋಲಿಕ್ ಸಭಾ ಪೆರಂಪಳ್ಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ಪೆರಂಪಳ್ಳಿ ಚರ್ಚ್ ಸಭಾಭವನದಲ್ಲಿ ನಡೆದ ಉಡುಪಿ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಪ್ರತಿಯೊಂದು ಭಾಗದಲ್ಲೂ ಕೃಷಿ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳು ನಡೆದರೆ ಆಯಾ ಭಾಗದಲ್ಲಿರುವ ರೈತರಿಗೆ ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಕೃಷಿ ಇಲಾಖೆಯಿಂದ ರೈತರಿಗೆ ಕೊಡ ಮಾಡುವ ಕೃಷಿಗೆ ಪೂರಕವಾಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ರೈತರು ಕೃಷಿ ಮಾಹಿತಿ ಆಧಾರಿತ ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಜೊತೆಗೆ ಕೃಷಿ ಸಂಬಂಧಿತ ಇಲಾಖೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಕಾಣಬಹುದು. ಕೃಷಿ ಇಲ್ಲದಿದ್ದರೆ ದೇಶದಲ್ಲಿ ಏನೂ ಸಾಧ್ಯವಿಲ್ಲ ರೈತರು ಸುಖವಾಗಿದ್ದರೆ ಮಾತ್ರ ದೇಶದ ಜನತೆ ಸುಖವಾಗಿರಲು ಸಾಧ್ಯ. ಆಧುನಿಕತೆಯ ಭರಾಟೆಯಲ್ಲಿ ನಾವು ಮರಗಳನ್ನು ಕಡಿಯುತ್ತಿದ್ದು, ಅತೀ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ನೀರಿಗೆ ತಾತ್ವರ ಎದ್ದಿರುವುದು ಗಮನಿಸಿದರೆ ಬುದ್ದಿವಂತರ ಜಿಲ್ಲೆಯಲ್ಲಿರುವ ನಮ್ಮಿಂದಲೇ ಎಲ್ಲೋ ಲೋಪವಾಗಿದೆಯೇನೋ ಎಂಬ ಅನುಮಾನ ಮೂಡುತ್ತದೆ ಎಂದರು. ಪ್ರಕೃತಿಯನ್ನು ನಾವು ಸಂರಕ್ಷಿಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ ಎಂದ ಅವರು, ಸಭೆ ಸಮಾರಂಭ, ಬರ್ತ್ಡೇ ಪಾರ್ಟಿ ಹಾಗೂ ಇತ್ಯಾದಿ ಸಮಾರಂಭಗಳಲ್ಲಿ ಉಡುಗೊರೆ ನೀಡುವ ಬದಲು ಗಿಡಗಳನ್ನು ನೀಡುವ ಮೂಲಕ ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಪರಿಸರ ಕಾಳಜಿಯನ್ನು ಮೂಡಿಸಬೇಕು ಎಂದು ಸಲಹೆ ನೀಡಿದರು.

ಉಡುಪಿ ಜಿಲ್ಲಾ ಕೃಷಿ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಸಮಗ್ರ ಕೃಷಿ ಬಗ್ಗೆ ಮಾಹಿತಿ ನೀಡಿ, ರೈತರು ಕೃಷಿಯಲ್ಲಿ ಮಾಡುವ ಸಣ್ಣ ತಪ್ಪಿನಿಂದ ದೊಡ್ಡ ಪ್ರಮಾಣದ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದ್ದು, ತಾವು ಮಾಡುವ ಕೃಷಿ ಬಗ್ಗೆ ಸಹಿಯಾದ ಮಾಹಿತಿ ಪಡೆದು ಕೃಷಿ ಮಾಡಿದಾಗ ಉತ್ತಮ ಇಳುವರಿ ಪಡೆಯಲು ಸಾಧ್ಯ. ಮಾಹಿತಿ ಕೊರತೆಯಿಂದ ಹಾಗೂ ತಪ್ಪು ಮಾಹಿತಿಯಿಂದ ಕೃಷಿಯಲ್ಲಿ ಕಡಿಮೆ ಇಳುವರಿ ಪಡೆಯುವ ದುಸ್ತಿತಿ ಎದುರಾಗಿದ್ದು, ಉತ್ತಮ ಲಾಭದಾಯಕ ಕೃಷಿ ಮಾಡಬೇಕಾದರೆ ಶ್ರಮವಹಿಸಿ ಕೆಲಸ ಮಾಡಬೇಕು. ಕೃಷಿಯಲ್ಲಿನ ನಷ್ಟದ ಹೊರೆಯನ್ನು ತಪ್ಪಿಸಬೇಕಾದರೆ ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡಿ ಎಂದು ರೈತರಿಗೆ ಸಲಹೆ ನೀಡಿದ ಅವರು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕೀಟ ನಾಶಕಗಳನ್ನು ಬಳಸಬೇಕೇ ಹೊರತು ರಾಸಾಯನಿಕಗಳಿಂದ ಬೆಳೆ ಬೆಳೆಯುವಂತಿರಬಾರದು ಎಂದು ಕೃಷಿಕರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪೆರಂಪಳ್ಳಿ ಫಾತಿಮಾ ಮಾತೆ ದೇವಾಲಯದ ಧರ್ಮಗುರು ರೆ.ಫಾ. ಅನಿಲ್ ಡಿಸೋಜಾ ಆಶಿರ್ವಚನ ನೀಡಿ ಮಾತನಾಡಿ, ಕಾರ್ಯಕ್ರಮ ಯಶಸ್ಸಿಗೆ ಶುಭ ಹಾರೈಸಿದ ಅವರು, ಅನ್ನದಾತ ರೈತ ಖುಶಿಯಾಗಿದ್ದರೆ ದೇಶ ಖುಶಿಯಾಗಿರುತ್ತದೆ. ಕೃಷಿಯಿಂದಾದ ನಷ್ಟದಿಂದ ಕೆಂಗಟ್ಟು ರೈತರು ಆತ್ಮಹತ್ಯೆ ಮಾಡಿಕೊಂಡ ಬಳಿಕ ರೈತರ ಕುಟುಂಬಕ್ಕೆ ಪರಿಹಾರ ನೀಡುವ ಬದಲು ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ರೈತರಿಗೆ ಕೃಷಿ ಇಲಾಖೆಯಿಂದ ನೀಡುವ ಸೌಲಭ್ಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ರೈತರ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದರು.

ನಗರಸಭಾ ಸದಸ್ಯೆ ಸೆಲಿನ್ ಕಾರ್ಕಡಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೃಷಿ ಮಾಹಿತಿಯ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು.

ಸಮಗ್ರ ಕೃಷಿ ಬಗ್ಗೆ ಮಾಹಿತಿ ನೀಡುವ ನಾಟಕ ಪ್ರದರ್ಶನ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಉಡುಪಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ರಾಜೇಂದ್ರ ಪಿ., ಬ್ರಹ್ಮಾವರ, ಸಸ್ಯರೋಗ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಡಾ.ಸೀಮಾ ಎಂ ನಾಯ್ಕ, ಬ್ರಹ್ಮಾವರ ಸಸ್ಯರೋಗ ಶಾಸ್ತ್ರದ ಸಹ ಸಂಶೋಧಕ ಡಾ.ಸಂತೋಷ್, ಉಡುಪಿ ಸಹಾಯಕ ಕೃಷಿ ನಿರ್ದೇಶಕ ಮೋಹನ್ರಾಜ್, ಸಹಾಯಕ ತೋಟಗಾರಿಕಾ ಅಧಿಕಾರಿ ದೀಪಾ , ಜೋಸೆಫ್ ರೆಬೆಲ್ಲೋ ಮತ್ತಿತರರು ಉಪಸ್ಥಿತರಿದ್ದರು.

ಪೆರಂಪಳ್ಳಿ ಕೃಷಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶ್ರೀಯಾನ್ ಸ್ವಾಗತಿಸಿದರು, ಉಡುಪಿ ಕೃಷಿ ಇಲಾಖೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಸಂಜನಾ ಶೆಟ್ಟಿ ನಿರೂಪಿಸಿದರು, ಪೆರಂಪಳ್ಳಿ ಘಟಕದ ಕೆಥೋಲಿಕ್ ಸಭಾದ ರಫೆಲ್ ಡಿ ಸೋಜಾ ವಂದಿಸಿದರು.


Spread the love

Exit mobile version