ಕೃಷಿ ಸಂಸ್ಕøತಿಯ ಮರೆವಿನಿಂದ ಹಬ್ಬಹರಿದಿನಗಳು ಮಹತ್ವ ಕಳೆದುಕೊಳ್ಳುತ್ತಿವೆ : ಮುದ್ದು ಮೂಡುಬೆಳ್ಳೆ
ಮಂಗಳೂರು: ಕೃಷಿ ಸಂಸ್ಕøತಿಯ ಮರೆವಿನಿಂದಾಗಿ ನಮ್ಮ ಹಬ್ಬಹರಿದಿನಗಳು ಮತ್ತು ಅನೇಕ ಇತರ ಆಚರಣೆಗಳು ಮಹತ್ವ ಕಳೆದುಕೊಳ್ಳುತ್ತಿವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಶ್ರೀ ಮುದ್ದು ಮೂಡುಬೆಳ್ಳೆ ಅಭಿಪ್ರಾಯಪಟ್ಟರು.
ಮಂಗಳೂರು ಆಕಾಶವಾಣಿ ಕೇಂದ್ರದ ಮನೋರಂಜನಾ ಸಂಘದ ಆಶ್ರಯದಲ್ಲಿ ಆಗಸ್ಟ್ 1 ರಂದು ನಡೆದ `ಆಟಿದ ನೆಂಪು’ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ತಮ್ಮ ಉಪನ್ಯಾಸದಲ್ಲಿ ಆಟಿಯ ಸಂದರ್ಭ ಒಂದು ಆಚರಣೆಯೇ ಹೊರತು ಒಂದು ಹಬ್ಬವಲ್ಲ; ಮಳೆಗಾಲದ ಬದುಕನ್ನು ಬಿಂಬಿಸುವ ಮತ್ತು ಪ್ರಕೃತಿ ಜೊತೆಗಿನ ಸಂಬಂಧ ಬೆಸೆಯುವ ಆಚರಣೆಯೇ `ಆಟಿಯ ನೆಂಪು’ ಎಂದರಲ್ಲದೆ, ಆಹಾರ, ಸಂಪ್ರದಾಯಗಳನ್ನು ಮತ್ತೆ ನೆನಪಿಸುವ ಇಂತಹ ಪ್ರಯತ್ನ ಶ್ಲಾಘನೀಯ ಎಂದರು.
ಪ್ರಕೃತಿ ಜತೆಗೆ ಸಂಬಂಧ ಬೆಳೆಸಿ ಪರಿಶುದ್ಧ ಬದುಕನ್ನು ನಡೆಯಿಸುವ ಆಚರಣೆ ಇದಾಗಿದ್ದು ನಮ್ಮೊಳಗಿನ ಸಂಕುಚಿತ ಮನೋಭಾವದ ಗೋಡೆ ಕೆಡವಿ ಮುಕ್ತವಾಗಿ ತೆರೆದುಕೊಳ್ಳಲು ಅವಕಾಶವಾಗಿದೆ ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಶ್ರೀಮತಿ ಎಸ್. ಉಷಾಲತಾ ಹೇಳಿದರು. ಸಭೆಯ ಅಧ್ಯಕ್ಷತೆವಹಿಸಿದ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಜಿ. ರಮೇಶ್ಚಂದ್ರನ್ ಅವರು ತುಳುವಿನಲ್ಲಿ ಮಾತನಾಡಿ ಆಟಿ ತಿಂಗಳ ವಿಶೇಷವನ್ನು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಸದಾನಂದ ಪೆರ್ಲ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಆಟಿ ತಿಂಗಳು ಪರಂಪರೆ, ಸಂಸ್ಕøತಿಯ ಪುನರ್ ಚಿಂತನೆಗೆ ಹಾದಿ ಮಾಡಿ ಮುಂದಿನ ಜನಾಂಗಕ್ಕೆ ತಿಳಿಸುವಂತಾಗಬೇಕೆಂದರು. ಜತೆ-ಕಾರ್ಯದರ್ಶಿ ಶ್ರೀ ಸೂರ್ಯನಾರಾಯಣ ಭಟ್ ಪಿ. ಎಸ್., ಧನ್ಯವಾದ ಸಮರ್ಪಣೆ ಮಾಡಿದರು. ನಿಲಯ ಕಲಾವಿದ ಶ್ರೀ ಮೌನೇಶಕುಮಾರ ಛಾವಣಿ ಪ್ರಾರ್ಥನಾಗೀತೆ ಹಾಡಿದರು. ನಂತರ ಕಣಿಲೆ ಉಪ್ಪಿನಕಾಯಿ, ತಿಮರೆ ಚಟ್ನಿ, ಉಪ್ಪಡಚ್ಚಿಲ್, ಹಲಸಿನ ಹಪ್ಪಳ, ಹುರುಳಿ ಸಾರು, ತೊಜಂಕ್ ವಡೆ, ಪತ್ರೊಡೆ, ಹಲಸಿನ ಪಾಯಸದ ಭೋಜನದೊಂದಿಗೆ ಪರಂಪರೆಯ ಆಟಿಯ ಊಟವನ್ನು ನೆನಪಿಸಿಕೊಳ್ಳಲಾಯಿತು.