ಕೆಂಗೇರಿ ಚರ್ಚ್ ಮೇಲೆ ದುಷ್ಕರ್ಮಿಗಳಿಂದ ದಾಳಿ

Spread the love

ಕೆಂಗೇರಿ ಚರ್ಚ್ ಮೇಲೆ ದುಷ್ಕರ್ಮಿಗಳಿಂದ ದಾಳಿ

ಬೆಂಗಳೂರು: ದುಷ್ಕರ್ಮಿಗಳು ಕೆಂಗೇರಿ ಸ್ಯಾಟ್‌ಲೈಟ್ ಬಳಿ “ಸೇಂಟ್ ಫ್ರಾನ್ಸಿಸ್ ಅಸ್ಸಿಸ್ ಚರ್ಚ್” ಮೇಲೆ ದಾಳಿ ನಡೆಸಿ ವಿಕೃತ ಮೆರೆದಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ಸೋಮವಾರ ತಡರಾತ್ರಿ ಹಿಂಬಾಗಿಲನ್ನು ಒಡೆದು ಚರ್ಚ್ ಪ್ರವೇಶಿಸಿದ ದುಷ್ಕರ್ಮಿಗಳು ಚರ್ಚ್‌ನಲ್ಲಿದ್ದ ಪೂಜಾ ಸಾಮಾಗ್ರಿಗಳು, ಏಸು ಕ್ರಿಸ್ತನ ಮೂರ್ತಿಗಳು, ಹಾಗೂ ಗೌಪ್ಯತಾ ನಿವೇದನಾ ಸ್ಥಳ ಧ್ವಂಸ ಮಾಡಿದ್ದಾರೆ. ಚರ್ಚ್ ಒಳಗಿನ ಕಿಟಕಿ, ಬಾಗಿಲು, ಚೇರುಗಳು, ಮೈಕ್, ಅಲಂಕಾರಿಕ ವಸ್ತುಗಳನ್ನು ಸೇರಿದಂತೆ ಬಹುತೇಕ ವಸ್ತುಗಳು ಒಡೆದು ಧ್ವಂಸ ಮಾಡಿದ್ದಾರೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಮಂಗಳವಾರ ಬೆಳಿಗ್ಗೆ ಉಪದೇಶಕರು ಚರ್ಚ್‌ಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕೆಂಗೇರಿ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಯುಎನ್ಐ ಕನ್ನಡ ಸುದ್ದಿ ಸಂಸ್ಥೆ ಜೊತೆ ಚರ್ಚ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಕಾಂತ್‌ರಾಜ್ ಮಾತನಾಡಿ, ಘಟನೆ ಖಂಡನೀಯ. ನಮ್ಮ ಭಾವನೆಗಳನ್ನು ಕೆರಳಿಸಲು ದುಷ್ಕರ್ಮಿಗಳು ನಡೆಸಿರುವ ಕೃತ್ಯವೆಸಗಿದ್ದಾರೆ. ಕಮ್ಯುನೀಯನ್ ಅನ್ನು ಧ್ವಂಸಗೊಳಿಸಿರುವುದು ಸಹಿಸಲು ಅಸಾಧ್ಯ. ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.


Spread the love