ಕೆಂಪೇಗೌಡ ಅವರ ತತ್ವ ಆದರ್ಶಗಳನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಿ: ಮಮತಾ ಗಟ್ಟಿ

Spread the love

ಕೆಂಪೇಗೌಡ ಅವರ ತತ್ವ ಆದರ್ಶಗಳನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಿ: ಮಮತಾ ಗಟ್ಟಿ

ಮಂಗಳೂರು:  ಬೆಂಗಳೂರು ಅಭಿವೃದ್ಧಿಯ ರೂವಾರಿ ಕೆಂಪೇಗೌಡ ಅವರ ವ್ಯಕ್ತಿತ್ವ, ಆದರ್ಶ ಅವರ ಜಾತ್ಯತೀತ ಮನೋಭಾವ ಇಂದಿನ ಸಮಾಜದಲ್ಲಿ ಯುವ ಸಮುದಾಯಕ್ಕೆ ಮಾದರಿ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಅವರು ಹೇಳಿದರು.

ಅವರು ಗುರುವಾರ ಉರ್ವಸ್ಟೋರ್‍ನ ತುಳುಭವನದಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೆಂಪೇಗೌಡ ಹಾಗೂ ಇನ್ನಿತರ ಮಹಾನ್ ವ್ಯಕ್ತಿಗಳ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿದಲ್ಲಿ ನಾವು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು. ಅವರು ಮಾಡಿರುವಂತಹ ಕೆಲಸ ಕಾರ್ಯಗಳು ನಮಗೆ ಸ್ಫೂರ್ತಿಯಾಗಬೇಕು. ನಾವು ಕೂಡ ಮುಂದಿನ ದಿನಗಳಲ್ಲಿ ಇಂತಹ ಉತ್ತಮ ಕೆಲಸ ಕಾರ್ಯಗಳನ್ನು ಮಾಡಬೇಕು ಎನ್ನುವ ಆಲೋಚನೆ ಮೂಡಬೇಕು ಈ ಉದ್ದೇಶದಿಂದಲೇ ಇಂತಹ ಮಹಾತ್ಮರ ಜಯಂತಿಯನ್ನು ಆಚರಿಸಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ .ಕೆ ಅವರು ಮಾತನಾಡಿ ಕೆಂಪೇಗೌಡ ಅವರು ಅಂದಿನ ಕಾಲದಲ್ಲಿಯೇ ಯಾವುದೇ ರೀತಿಯ ವೈಜ್ಞಾನಿಕ ತಂತ್ರಜ್ಞಾನಗಳು ಇಲ್ಲದ ಸಂದರ್ಭದಲ್ಲಿ ಬೆಂಗಳೂರನ್ನು ಎಲ್ಲ ರೀತಿಯಲ್ಲೂ ಮಹತ್ತರವಾಗಿ ಅಭಿವೃದ್ದಿ ಪಡಿಸಿದವರು. ಇಂದು ನಮ್ಮಲ್ಲಿ ಅನೇಕ ತಂತ್ರಜ್ಞಾನಗಳಿವೆ ಆದರೆ ಅಂದಿನ ಕಾಲದಲ್ಲಿ ಕೆಂಪೇಗೌಡರು ಕೈಗೊಂಡ ಅಭಿವೃದ್ಧಿ ಕಾರ್ಯವೈಖರಿಗಳು ಇಂದಿನ ಯುವ ಸಮುದಾಯಕ್ಕೆ ಪ್ರೇರಣೆಯಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು ಮಾತನಾಡಿ ಕೆಂಪೇಗೌಡ ಅವರ ಉನ್ನತ ಕಾರ್ಯ ಹಾಗೂ ಆಡಳಿತದ ಬಗ್ಗೆ ಇಂದಿಗೂ ನಾವು ಸ್ಮರಿಸುತ್ತೇವೆ. ಪ್ರತಿಯೊಂದು ಸಮಾಜದವರು ಇಂತಹ ಅನೇಕ ಮಾಹಾತ್ಮರ ಉತ್ತಮ ತತ್ವಗಳನ್ನು, ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಒಕ್ಕಲಿಗ ಸಮಾಜವನ್ನು ಸಮಾಜದ ಮುನ್ನೆಲೆಗೆ ತರುವಲ್ಲಿ ಕೆಂಪೇಗೌಡರ ಪಾತ್ರ ಮಹತ್ವದ್ದು ಎಂದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ಒಕ್ಕಲಿಗ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೆಂಪೇಗೌಡ ಅವರ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.

ಜೈನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಡಾ. ಪ್ರಭಾತ್ ಬಲ್ನಾಡ್ ಕೆಂಪೇಗೌಡರ ಬಗ್ಗೆ ಉಪನ್ಯಾಸ ನೀಡಿದರು. ಬಳಿಕ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೆÇೀಲಿಸ್ ಆಯುಕ್ತ ದಿನೇಶ್ ಕುಮಾರ್, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ತಾರಾನಾಥ್ ಗಟ್ಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಮತ್ತಿತರರು ಉಪಸ್ಥಿತರಿದ್ದರು.


Spread the love