Home Mangalorean News Kannada News ಕೆಆರ್‍ಐಡಿಎಲ್ ವಿರುದ್ಧ ಕ್ರಿಮಿನಲ್ ಕೇಸ್: ಡಿಸಿ ಸಸಿಕಾಂತ್ ಸೆಂಥಿಲ್ ಎಚ್ಚರಿಕೆ

ಕೆಆರ್‍ಐಡಿಎಲ್ ವಿರುದ್ಧ ಕ್ರಿಮಿನಲ್ ಕೇಸ್: ಡಿಸಿ ಸಸಿಕಾಂತ್ ಸೆಂಥಿಲ್ ಎಚ್ಚರಿಕೆ

Spread the love

ಕೆಆರ್‍ಐಡಿಎಲ್ ವಿರುದ್ಧ ಕ್ರಿಮಿನಲ್ ಕೇಸ್: ಡಿಸಿ ಸಸಿಕಾಂತ್ ಸೆಂಥಿಲ್ ಎಚ್ಚರಿಕೆ

ಮಂಗಳೂರು: ಜಿಲ್ಲೆಯಲ್ಲಿ ಹಲವಾರು ಪ್ರವಾಸೋದ್ಯಮ ಯೋಜನೆಗಳ ಕಾಮಗಾರಿ ಅನುಷ್ಠಾನಕ್ಕೆ ಕೆಆರ್‍ಐಡಿಎಲ್ ಸಂಸ್ಥೆಗೆ ವಹಿಸಲಾಗಿದ್ದರೂ, ಸಂಸ್ಥೆಯ ಅಧಿಕಾರಿಗಳ ವಿಳಂಭದಿಂದ ಕಾಮಗಾರಿಗಳು ನೆನಗುದಿಗೆ ಬಿದ್ದಿದೆ. ಈ ನಿಟ್ಟಿನಲ್ಲಿ ಕೆಆರ್‍ಐಡಿಎಲ್ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಚಿಂತಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಚ್ಚರಿಸಿದ್ದಾರೆ.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ. ರಾಮು ಅವರ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರವಾಸೋದ್ಯಮ ಯೋಜನೆ ಮತ್ತು ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಪ್ರವಾಸೋದ್ಯಮ ಯೋಜನೆಗಳು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹಲವು ಕಾಮಗಾರಿಗಳನ್ನು ಕೆಆರ್‍ಐಡಿಎಲ್ ಸಂಸ್ಥೆಗೆ ವಹಿಸಲಾಗಿದೆ. ಆದರೆ, ಹಲವು ಯೋಜನೆಗಳು ದೀರ್ಘಕಾಲದಿಂದ ಇನ್ನೂ ನೆನಗುದಿಗೆ ಬಿದ್ದಿದೆ. ಹಲವು ಬಾರಿ ಈ ಬಗ್ಗೆ ಪರಿಶೀಲಿಸಲಾಗಿದ್ದರೂ, ಯಾವುದೆ ಪ್ರಗತಿ ಆಗಿಲ್ಲ. ಈ ನಿಟ್ಟಿನಲ್ಲಿ ಕೇಸು ದಾಖಲಿಸುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ. ರಾಮು ಅವರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸುಮಾರು 1978 ಲಕ್ಷ ರೂಪಾಯಿಗಳ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಕೆಆರ್‍ಐಡಿಎಲ್ ಸಂಸ್ತೆಗೆ ರೂ. 1414 ಲಕ್ಷ, ನಿರ್ಮಿತಿ ಕೇಂದ್ರಕ್ಕೆ ರೂ. 202 ಲಕ್ಷ ಹಾಗೂ ಲೋಕೋಪಯೋಗಿ ಇಲಾಖೆಗೆ ರೂ. 361 ಲಕ್ಷಗಳ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಅನುಷ್ಠಾನ ಏಜನ್ಸಿಗಳಿಗೆ ಈ ಪೈಕಿ ರೂ. 843 ಲಕ್ಷ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅನುದಾನ ಇದ್ದರೂ, ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಭವಾಗಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ದ.ಕ. ಜಿಲ್ಲೆಯಲ್ಲಿ ವಿವಿಧ ಧಾರ್ಮಿಕ ಕೇಂದ್ರಗಳ ಪರಿಸರದಲ್ಲಿ ಯಾತ್ರಿ ನಿವಾಸ ನಿರ್ಮಾಣ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಯೋಜನಾ ಮಂಜೂರಾತಿ ನೀಡಲಾಗಿದೆ. ಈ ಎಲ್ಲಾ ಯೋಜನಾ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಡೆಸಿ ಪೂರ್ಣಗೊಳಿಸಲು ನಿರ್ದೇಶಕರು ಸೂಚಿಸಿದರು. ಯಾತ್ರಿ ನಿವಾಸ ನಿರ್ಮಾಣಕ್ಕೆ ಸಂಬಂಧಿಸಿದ ಸಂಸ್ಥೆಗಳು ನಿವೇಶನ ಹಸ್ತಾಂತರಿಸದಿದ್ದರೆ, ಅಂತಹ ಯೋಜನೆಗಳನ್ನು ರದ್ದುಪಡಿಸುವುದು ಸೂಕ್ತ ಎಂದು ಅವರು ಹೇಳಿದರು.

ಮಂಗಳೂರಿನ ಸುಲ್ತಾನ್ ಬತ್ತೇರಿ ಕೋಟೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಯನ್ನು ರೂ. 125 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಲೋಕೋಪಯೋಗಿ ಇಲಾಖೆಯು ಅಂದಾಜುಪಟ್ಟಿ ಸಲ್ಲಿಸಿದೆ ಎಂದು ಎಚ್. ರಾಮು ತಿಳಿಸಿದರು. ಕರಾವಳಿಯಲ್ಲಿ ಬೀಚ್ ಪ್ರವಾಸೋದ್ಯಮವನ್ನು ಇನ್ನಷ್ಟು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಯೋಜನೆ ಹಾಕಿಕೊಳ್ಳಲಿದೆ ಎಂದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಉದಯ ಕುಮಾರ್ ಶೆಟ್ಟಿ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version