ಕೆಎಸ್ ಈಶ್ವರಪ್ಪ ಪುತ್ರನಿಗೂ ಅಶ್ಲೀಲ ಸಿಡಿ ಭೀತಿ, ಕೋರ್ಟ್ನಿಂದ ಸ್ಟೇ ತಂದ ಕಾಂತೇಶ್
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು, ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಇದೀಗ ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ಗೂ ಸಹ ಅಶ್ಲೀಲ ಸಿಡಿ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕಾಂತೇಶ್, ಮಾಧ್ಯಮಗಳಿಗೆ ನಿರ್ಬಂಧ ಕೋರಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದು, ಯಾವುದೇ ಮಾನಹಾನಿಕರ ದೃಶ್ಯ ಪ್ರಸಾರ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಮಧ್ಯಂತರ ನಿರ್ಬಂಧಕಾಜ್ಞೆ ಹೊರಡಿಸಿದೆ.
ಲೋಕಸಭೆ ಚುನಾವಣೆ ವೇಳೆ ತಮ್ಮ ಹೆಸರಿಗೆ ಮಸಿ ಬಳಿಯುವ ಯತ್ನ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತವಾಗಿ ಕಾಂತೇಶ್ ಅವರು ಮಾಧ್ಯಮಗಳಲ್ಲಿ ಮಾನಹಾನಿಕರ ದೃಶ್ಯ ಪ್ರಸಾರಕ್ಕೆ ನಿರ್ಬಂಧ ಕೋರಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ಕೋರ್ಟ್, ಯಾವುದೇ ಮಾನಹಾನಿಕರ ದೃಶ್ಯ ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ಹೊರಡಿಸಿದೆ.
ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಅವರು ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಹೈಕಮಾಂಡ್ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಆಕ್ರೋಶಗೊಂಡಿರುವ ಕೆಎಸ್ ಈಶ್ವರಪ್ಪ ಯಡಿಯೂರಪ್ಪ ಹಾಗೂ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೇ ಕುಟುಂಬ ರಾಜಕಾರಣವನ್ನು ಕೊನೆಗಾಣಿಸಬೇಕೆಂದು ಶಿವಮೊಗ್ಗದಲ್ಲಿ ಬಿಎಸ್ವೈ ಪುತ್ರ ರಾಘವೇಂದ್ರ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರಿಂದ ಈಶ್ವರಪ್ಪ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿದೆ. ಇದೀಗ ಪಕ್ಷೇತರವಾಗಿ ಕಣಕ್ಕಿಳಿದಿರುವ ಈಶ್ವರಪ್ಪ ರಾಘವೇಂದ್ರ ಅವರನ್ನು ಸೋಲಿಸಬೇಕೆಂದು ಪಣತೊಟ್ಟಿದ್ದಾರೆ.