ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಪರಿಸರ ಜಾಗೃತಿಗಾಗಿ ಸಾಮೂಹಿಕ ವನಮಹೋತ್ಸವ

Spread the love

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಪರಿಸರ ಜಾಗೃತಿಗಾಗಿ ಸಾಮೂಹಿಕ ವನಮಹೋತ್ಸವ

ಉಡುಪಿ: ಪರಿಸರ ಸಂರಕ್ಷಣೆಗೆ ಸಂಘ-ಸಂಸ್ಥೆಗಳು ಪರಸ್ಪರ ಸಂಘಟಿತರಾದರೆ ಸ್ವತ್ಛ ಪರಿಸರ ನಿರ್ಮಾಣ ಮಾಡಲು ಸಾಧ್ಯವಿದೆ. ಧಾರ್ಮಿಕ ಕ್ಷೇತ್ರಗಳ ಪರಿಸರವೂ ಸಹ ಮರ, ಗಿಡಗಳ ಮೂಲಕ ಕಂಗೊಳಿಸುವಂತಾಗಬೇಕು ಎಂದು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಹೇಳಿದರು.

ಅವರು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇವರ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ 54 ಚರ್ಚುಗಳಲ್ಲಿ ಏಕಕಾಲದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಶಂಕರಪುರ ಸೈಂಟ್ ಜೋನ್ಸ್ ಚರ್ಚಿನಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ನಿತ್ಯ ಈ ಬಗ್ಗೆ ಜಾಗೃತಿ ವಹಿಸುವುದು ಅತಿ ಅವಶ್ಯವಾಗಿದೆ. ಇಲ್ಲವಾದರೆ ಪ್ರಕೃತಿಗೆ ಗಂಡಾಂತರ ತಪ್ಪಿದ್ದಲ್ಲ.

ನೂರಾರು ಗಿಡಗಳನ್ನು ನೆಟ್ಟು ಬೆಳೆಸುವುದೇ ವನಮಹೋತ್ಸವದ ಮುಖ್ಯ ಉದ್ಧೇಶವಾಗಿದೆ. ಪ್ರತಿಯೊಬ್ಬರು ಪರಿಸರ ರಕ್ಷ ಣೆಗೆ ಜಾಗೃತಿ ವಹಿಸಬೇಕು. ನಿತ್ಯ ವಾಹನಗಳು ಹೆಚ್ಚಾಗುತ್ತಿವೆ. ಗಿಡ ಮರಗಳು ನಾಶವಾಗುತ್ತಿವೆ, ಪ್ಲಾಸ್ಟಿಕ್ ಬಳಕೆ ಜಾಸ್ತಿಯಾಗುತ್ತಿದ್ದು, ಇದರಿಂದ ವಾಯು ಮಾಲಿನ್ಯ, ಉಷ್ಣಾಂಶ ಹೆಚ್ಚಾಗುತ್ತಿದೆ. ಮಳೆ ಬೆಳೆಗಳು ಕಡಿಮೆಯಾಗುತ್ತಿವೆ. ಕಾರಣ ಇದರ ಬಗ್ಗೆ ಸಮತೋಲನ ಕಾಪಾಡಲು ಪ್ರತಿಯೊಬ್ಬರು ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ. ಪ್ರತಿಯೊಬ್ಬರು ಪರಿಸರದ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಸೂಚನೆಯಂತೆ ಉಡುಪಿ ಜಿಲ್ಲೆಯ 54 ಚರ್ಚುಗಳ ಆವರಣದಲ್ಲಿ ಸುಮಾರು 600ಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದಲ್ಲದೆ ಸಾರ್ವಜನಿಕರಿಗೆ 10000ಕ್ಕೂ ಹೆಚ್ಚು ಗಿಡಗಳನ್ನು ವಿತರಿಸಲಾಯಿತು. ಕಲ್ಯಾಣಪುರ ವಲಯದ 9 ಘಟಕಗಳಲ್ಲಿ 2000 ಗಿಡಗಳ ವಿತರಣೆಯಾದರೆ, ಶಿರ್ವ ವಲಯದ 7 ಘಟಕಗಳಲ್ಲಿ ಸುಮಾರು 1500 ಗಿಡಗಳನ್ನು ವಿತರಿಸಲಾಗಿದೆ. ಕುಂದಾಪುರ ವಲಯದ 12 ಘಟಕಗಳಲ್ಲಿ 2000 ಗಿಡಗಳನ್ನು ವಿತರಿಸಲಾಗಿದ್ದು, ಕಾರ್ಕಳ ವಲಯದಲ್ಲಿ ಸುಮಾರು 1000 ಗಿಡಗಳ ವಿತರಣೆ ಮಾಡಿದ್ದು ಉಡುಪಿ ವಲಯದಲ್ಲಿ 1500 ಗಿಡಗಳನ್ನು ವಿತರಿಸಲಾಗಿದೆ.

ಸಾರ್ವಜನಿಕರು ತಮ್ಮ ಮನೆಗಳಿಗೆ ಕೊಂಡು ಹೋದ ಗಿಡವನ್ನು ಪೋಷಣೆ ಮಾಡಿ ಪ್ರತಿ ತಿಂಗಳು ಸಂಬಂಧಿತ ಘಟಕಗಳಿಗೆ ಮಾಹಿತಿ ನೀಡುವ ವಿಶಿಷ್ಠ ಯೋಜನೆಯ ಮೂಲಕ ಪ್ರಾಮಾಣಿಕವಾಗಿ ಗಿಡದ ಪೋಷಣೆ ಮಾಡಲು ಸೂಚನೆ ನೀಡಲಾಗಿದೆ.


Spread the love