ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಸಾಮೂಹಿಕ ಸ್ವಸ್ಥ ಹಾಗೂ ನಿರ್ಮಲ ಪರಿಸರ ಅಭಿಯಾನ
ಉಡುಪಿ: ಗಾಂಧಿ ಜಯಂತಿಯ ಪ್ರಯುಕ್ತ ಕೆಥೊಲಿಕ್ ಸಭಾ ಉಡುಪಿ ಧರ್ಮಪ್ರಾಂತ್ಯದ ಎಲ್ಲಾ 54 ಚರ್ಚುಗಳಲ್ಲಿ ಬುಧವಾರ ಸಾಮೂಹಿಕ ಸ್ವಸ್ಥ ಹಾಗೂ ನಿರ್ಮಲ ಪರಿಸರ ಅಭಿಯಾನ ಜರುಗಿತು.
ಕೆಥೊಲಿಕ್ ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಪರಿಸರ ಸಂಬಂಧಿ ನೀಡಿದ ವಿಶ್ವಪತ್ರ ಲಾವ್ದಾತೊ ಸಿ ಅನ್ವಯ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪರಿಸರ ಸಂರಕ್ಷಣೆಗೆ ಸ್ವಚ್ಚತಾ ಹಿ ಸೇವಾ ಅಭಿಯಾನದನ್ವಯ ಧರ್ಮಪ್ರಾಂತ್ಯದ ಎಲ್ಲಾ ಕೆಥೊಲಿಕ್ ಸಭಾ ಘಟಕಗಳ ನೇತೃತ್ವದಲ್ಲಿ ವಿವಿಧ ಸ್ಥಳೀಯ ಸಂಘಟನೆಗಳ ಸಹಕಾರದಲ್ಲಿ ಸ್ವಚ್ಚತಾ ಅಭಿಯಾನ ಜರುಗಿತು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರು ಆಲ್ವಿನ್ ಕ್ವಾಡ್ರಸ್ ಕಲ್ಯಾಣಪುರ ವಲಯ ಸಮಿತಿ ಹಾಗೂ ಮಿಲಾಗ್ರಿಸ್ ಮತ್ತು ಮೌಂಟ್ ರೋಸರಿ ಘಟಕಗಳ ಜಂಟಿ ಆಶ್ರಯದಲ್ಲಿ ಕಲ್ಯಾಣಪುರ ಗೊರೆಟ್ಟಿ ಆಸ್ಪತ್ರೆಯ ಎದುರು ಸಾಮೂಹಿಕ ಸ್ವಸ್ಥ ಹಾಗೂ ನಿರ್ಮಲ ಪರಿಸರ ಅಭಿಯಾನಕ್ಕೆ ಚಾಲನೆ ನೀಡಿದರು.
ಆರೋಗ್ಯದ ರಕ್ಷಣೆಗೆ ಉತ್ತಮ ಪರಿಸರ ಅವಶ್ಯಕ. ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದು ದೇಶದ ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯವಾಗಬೇಕು. ನಮ್ಮ ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ರಸ್ತೆ, ಚರಂಡಿ ಎಲ್ಲೆಂದರಲ್ಲಿ ಬಿಸಾಡದೇ ಅದಕ್ಕಾಗಿ ಇರಿಸಿದ ಕಸದ ತೊಟ್ಟಿಯಲ್ಲಿ ಹಾಕಬೇಕು. ಇದರಿಂದ ರಸ್ತೆಗಳಲ್ಲಿ ಕಸ ಮುಕ್ತ ಪರಿಸರ ನಿರ್ಮಾಣಕ್ಕೆ ಅವಕಾಶ ಮಾಡಿದಂತಾಗುತ್ತದೆ.
ನಮ್ಮ ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆ ಸಾಕಷ್ಟು ರೀತಿಯ ಮಾಲಿನ್ಯಕ್ಕೆ ಅವಕಾಶವಾಗುತ್ತಿದೆ. ಜಿಲ್ಲೆಯಲ್ಲಿ ಅಕ್ಟೋಬರ್ 2 ರಿಂದ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಬರಲಿದ್ದು ಅದನ್ನು ಪ್ರತಿಯೊಬ್ಬರು ಪಾಲಿಸಬೇಕಾಗಿದೆ. ಉಡುಪಿ ಧರ್ಮಪ್ರಾಂತ್ಯ ಈ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದು ಆರೋಗ್ಯವೆ ಭಾಗ್ಯ ಎಂಬಂತೆ ನಮ್ಮ ಆರೋಗ್ಯ ಸುತ್ತಲಿನ ಸ್ವಚ್ಛ ಪರಿಸರ ಅವಲಂಬಿಸಿದೆ. ಆದ್ದರಿಂದ ನಮ್ಮ ಪರಿಸರದ ಬಗ್ಗೆ ನಾವು ತುಂಬಾ ಕಾಳಜಿ ವಹಿಸುವುದು ಮುಖ್ಯ. ಎಲ್ಲಸಂಪತ್ತಿಗಿಂತ ಆರೋಗ್ಯ ಸಂಪತ್ತೆ ನಮಗೆ ಅವಶ್ಯವಾಗಿದೆ. ಸ್ವಚ್ಚತೆ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ ನಿರಂತರವಾಗಿ ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಆಧ್ಯಾತ್ಮಿಕ ನಿರ್ದೇಶಕ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೊ, ಕಾರ್ಯಕ್ರಮದ ಸಂಚಾಲಕ ಫ್ಲೈವನ್ ಡಿಸೋಜಾ, ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ವಾಲ್ಟರ್ ಸಿರಿಲ್ ಪಿಂಟೊ, ಡಾ|ಜೆರಾಲ್ಡ್ ಪಿಂಟೊ, ವಲಯ ಕಾರ್ಯದರ್ಶಿ ರೋಸಿ ಕ್ವಾಡ್ರಸ್, ಮಿಲಾಗ್ರಿಸ್ ಘಟಕದ ಅಧ್ಯಕ್ಷೆ ಮರಿನಾ ಲೂವಿಸ್, ಕಾರ್ಯದರ್ಶಿ ಮೇಬಲ್ ಡಿಸೋಜಾ, ಮೌಂಟ್ ರೋಸರಿ ಘಟಕದ ಅಧ್ಯಕ್ಷ ಎಲಿಯಾಸ್ ಡಿಸೋಜಾ, ಕಾರ್ಯದರ್ಶಿ ವಿಲ್ಮಾ ರೇಗೊ ಹಾಗೂ ವಲಯ, ಘಟಕಗಳ ಪದಾಧಿಕಾರಿಗಳಿ, ಇತರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಧರ್ಮಪ್ರಾಂತ್ಯದ ವಿವಿಧ ಘಟಕಗಳಲ್ಲಿ ನಡೆದ ಸಾಮೂಹಿಕ ಸ್ವಸ್ಥ ಹಾಗೂ ನಿರ್ಮಲ ಪರಿಸರ ಅಭಿಯಾನಲ್ಲಿ ಕೆಥೊಲಿಕ್ ಸಭಾ ಜೊತೆಗೆ ಮಹಿಳಾ ಸಂಘಟನೆ, ಯುವ ಸಂಘಟನೆ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಸ್ವಸಹಾಯ ಸಂಘಗಳು, ಸ್ಥಳೀಯ ಯುವಕ ಮಂಡಳಗಳು ಹಾಗೂ ಇತರ ಸಂಘಟನೆಗಳು ಸಹಕಾರ ನೀಡಿದವು.
ಅಭಿಯಾನದ ಪ್ರಯುಕ್ತ ರೈಲ್ವೆ ನಿಲ್ದಾಣಗಳಲ್ಲಿ ಶುಚಿತ್ವ, ಸಾರ್ವಜನಿಕ ರಸ್ತೆಗಳು , ಸಾರ್ವಜನಿಕ ಆಸ್ಪತ್ರೆಗಳ ಪರಿಸರದಲ್ಲಿನ ಕಸವನ್ನು ಹೆಕ್ಕಿ ಶುಚಿಗೊಳಿಸಲಾಯಿತು.