ಕೆಥೊಲಿಕ್ ಸಭಾ ಉದ್ಯಾವರ ಘಟಕದಿಂದ ಹಿರಿಯರ ದಿನಾಚರಣೆ, ಪ್ರತಿಭಾ ಪುರಸ್ಕಾರ

Spread the love

ಕೆಥೊಲಿಕ್ ಸಭಾ ಉದ್ಯಾವರ ಘಟಕದಿಂದ ಹಿರಿಯರ ದಿನಾಚರಣೆ, ಪ್ರತಿಭಾ ಪುರಸ್ಕಾರ

ಉಡುಪಿ: ಎಲ್ಲರೊಂದಿಗೆ ಸಂತೋಷದಿಂದ ಬೆರೆಯುವುದರೊಂದಿಗೆ ವೃದ್ಯಾಪ್ಯವನ್ನು ಅನಂದವಾಗಿ ಕಳೆಯಲು ಸಾಧ್ಯವಿದೆ. ನಗುವೊಂದೇ ಎಲ್ಲ ರೀತಿಯ ನೋವಿಗೆ ಪರಿಹಾರ ಎಂದು ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ಹಾಗೂ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ|ಸ್ಟ್ಯಾನಿ ಬಿ ಲೋಬೊ ಅಭಿಪ್ರಾಯಪಟ್ಟರು.

ಅವರು ಭಾನುವಾರ ಕೆಥೊಲಿಕ್ ಸಭಾ ಉದ್ಯಾವರ ಘಟಕ, ಚರ್ಚಿನ ಕುಟುಂಬ ಆಯೋಗ ಹಾಗೂ ಉದ್ಯಾವರೈಟ್ಸ್ ದುಬಾಯಿ ಸಂಘಟನೆ ಜಂಟಿಯಾಗಿ ಆಯೋಜಿಸಿದ ಹಿರಿಯರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ವೃದ್ಯಾಪ್ಯ ಎನ್ನುವುದು ಜೀವನದ ಒಂದು ಅಂಗವಾಗಿದ್ದು ಅದನ್ನು ಸಮಾಧಾನಚಿತ್ತರಾಗಿ ಸಂತೋಷದಿಂದ ಅನುಭವಿಸಿದಾಗ ಯಶಸ್ವಿ ಜೀವನ ಸಾಧ್ಯ ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ ಟ್ರಿನಿಟಿ ಐಟಿಐ ಇದರ ಜೋನ್ ಎಮ್ ಡಿಸೋಜಾ ಮಾತನಾಡಿ ಹಿರಿಯರು ಸಮಾಜದ ಕೀರ್ತಿಯಾಗಿ ಅವರು ತಮ್ಮ ಜೀವಿತಾವಧಿಯಲ್ಲಿ ತೋರಿದ ಸಾಧನೆಗೆ ಗೌರವ ತೋರಿಸುವುದು ಅಗತ್ಯವಾಗಿದೆ.

ವಿದ್ಯಾರ್ಥಿಗಳು ಸಾಧನೆ ತೋರಿರುವುದು ಅಬಿನಂದನಾರ್ಹವಾಗಿದೆ ಆದರೆ ಆ ಸಾಧನೆ ಕೇವಲ ಇಲ್ಲಿಗೆ ಸೀಮಿತವಾಗದೆ ಮುಂದುವರೆಸಿಕೊಂಡು ಹೋಗಿ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ದೇಶಕ್ಕೆ ಕೀರ್ತಿ ತರುವ ಕೆಲಸ ಪ್ರತಿಭಾವಂತ ವಿದ್ಯಾರ್ಥಿಗಳು ನಡೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉದ್ಯಾವರೈಟ್ಸ್ ದುಬಾಯಿ ಸಂಘಟನೆ ಪ್ರಾಯೋಜಕತ್ವದಲ್ಲಿ ಪ್ರತಿಭಾ ಪುರಸ್ಕಾರ ನಡೆಸಲಾಯಿತು.

ಇದೇ ವೇಳೆ ಯೋಗದಲ್ಲಿ ಗಿನ್ನೆಸ್ ಸಾಧನೆ ಬರೆದ ವಿದ್ಯಾರ್ಥಿನಿ ತನುಶ್ರೀ ಪಿತ್ರೋಡಿಯವರಿಗೆ ಚರ್ಚಿನ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಚರ್ಚಿನ ಸಹಾಯಕ ಧರ್ಮಗುರು ವಂ|ರೊಲ್ವೀನ್ ಆರಾನ್ಹಾ, ಅತಿಥಿ ಧರ್ಮಗುರು ವಂ|ಡೆನಿಸ್ ಡಿ’ಸೋಜಾ, ಚಾರಿಟಿ ಕಾನ್ವೆಂಟ್ ಉದ್ಯಾವರ ಇದರ ಸುಪಿರೀಯರ್ ಸಿಸ್ಟರ್ ಗ್ರೇಸಿಯಾ, ಪಾಲೊಟ್ಟಾಯ್ನ್ ಕಾನ್ವೆಂಟ್ ಇದರ ಸಿಸ್ಟರ್ ಡಯಾನಾ, ಉದ್ಯಾವರ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ, 18 ಆಯೋಗಗಳ ಸಂಚಾಲಕ ಗೋಡ್ ಫ್ರೀ ಡಿಸೋಜಾ, ಉಡುಪಿ ವಲಯ ಅಧ್ಯಕ್ಷ ರೊನಾಲ್ಡ್ ಆಲ್ಮೇಡಾ, ಉದ್ಯಾವರೈಟ್ಸ್ ದುಬಾಯ್ ಇದರ ಸ್ಥಾಪಕ ಅಧ್ಯಕ್ಷ ಜೆರಾಲ್ಡ್ ಪಿರೇರಾ, ಕುಟುಂಬ ಆಯೋಗದ ಸಂಚಾಲಕ ವಿಲ್ಫ್ರೇಡ್ ಕ್ರಾಸ್ತಾ ಉಪಸ್ಥಿತರಿದ್ದರು.

ಕೆಥೊಲಿಕ್ ಸಭಾ ಉದ್ಯಾವರ ಘಟಕದ ಅಧ್ಯಕ್ಷ ಲೊರೇನ್ಸ್ ಡೆಸಾ ಸ್ವಾಗತಿಸಿ, ಕುಟುಂಬ ಆಯೋಗದ ಸಂಚಾಲಕ ವಿಲ್ಫ್ರೇಡ್ ಕ್ರಾಸ್ತಾ ವಂದಿಸಿದರು. ಮೇರಿ ಡಿಸೋಜಾ ಮತ್ತು ಉರ್ಬಾನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.


Spread the love