ಕೆಥೊಲಿಕ್ ಸಭಾ ತನ್ನ ಸೇವೆಯಿಂದ ಉಡುಪಿ ಧರ್ಮಪ್ರಾಂತ್ಯದ ಪ್ರಭಾವಿ ಸಂಘಟನೆಯಾಗಿದೆ – ಬಿಷಪ್ ಜೆರಾಲ್ಡ್ ಲೋಬೊ
ಉಡುಪಿ: ಸಂಘಟನೆಗಳು ಸಮಾಜಮುಖಿಯಾಗಿ, ಸರ್ವ ಸಮುದಾಯದೊಂದಿಗೆ ಕೂಡಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಅದು ತನ್ನ ನಿಜವಾದ ಅಸ್ತಿತ್ವವನ್ನು ತೋರ್ಪಡಿಸಲು ಶಕ್ತವಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಅವರು ಹೇಳಿದರು.
ಅವರು ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಟ್ರೈಸೆಂಟಿನರಿ ಸಭಾಂಗಣದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವಾರ್ಷಿಕ ಮಹಾಸಭೆ ಮತ್ತು ಸಹಮಿಲನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಶ್ರೀಸಾಮಾನ್ಯರು ನಡೆಸುವ ಸಂಘಟನೆಗಳು ಪವಿತ್ರ ಧರ್ಮಸಭೆಯ ಮುಖವಾಣಿಯಾಗಿದ್ದು, ಉಡುಪಿ ಧರ್ಮಪ್ರಾಂತ್ಯದಲ್ಲಿ ಶ್ರೀಸಾಮಾನ್ಯದರಿಂದ ನಡೆಸಲ್ಪಡುವು ಕೆಥೊಲಿಕ್ ಸಭಾ ಸಂಘಟನೆ ಒಂದು ಪ್ರಭಾವಿ ಸಂಘಟನೆಯಾಗಿ ರೂಪುಗೊಂಡಿದೆ. ಇಡೀ ಧರ್ಮಪ್ರಾಂತ್ಯ 15 ಸಾವಿರದಷ್ಟು ಕೆಥೊಲಿಕ್ ಕುಟುಂಬಗಳನ್ನು ಹೊಂದಿದ್ದು ಅದರಲ್ಲಿ 13 ಸಾವಿರ ಮಂದಿ ಕೆಥೊಲಿಕ್ ಸಭಾ ಸಂಘಟನೆಯ ಸದಸ್ಯತ್ವ ಹೊಂದಿರುವುದು ಸಂಘಟನೆ ಮಾಡುವ ಕಾರ್ಯವೈಖರಿಯನ್ನು ತೋರಿಸುತ್ತದೆ. ಸದಸ್ಯರು ಇದ್ದಲ್ಲಿ ಅಂತಹ ಸಂಘಟನೆ ಬಲಿಷ್ಟಗೊಳ್ಳುವುದರೊಂದಿಗೆ ಆ ಸಮಾಜದ ದನಿಯಾಗಿ ಮೂಡಿಬರಲು ಸಾಧ್ಯವಾಗುತ್ತದೆ.
ಕೆಥೊಲಿಕ್ ಸಭಾ ಸಂಘಟನೆ ತನ್ನ ಸೇವೆಯನ್ನು ಕೇವಲ ಚರ್ಚಿನ ವಠಾರಕ್ಕೆ ಸೀಮಿತವಾಗಿರಿಸದೆ ಇತರ ಸಂಘಟನೆಗಳು ಹಾಗೂ ಸಮುದಾಯಗಳೊಂದಿಗೆ ಹೆಚ್ಚು ಬೆರೆತು ಕಾರ್ಯನಿರ್ವಹಿಸುವ ಅಗತ್ಯತೆ ಇಂದಿನ ದಿನಗಳಲ್ಲಿ ಹೆಚ್ಚಾಗಿದೆ. ಸಂಘಟನೆಯು ಸಮುದಾಯದಲ್ಲಿ ಯಶಸ್ವಿ ಉದ್ಯಮಿಗಳು, ರಾಜಕೀಯ ನಾಯಕರನ್ನು ಬೆಳೆಸುವಲ್ಲಿ, ಶ್ರೀಸಾಮಾನ್ಯರಿಂದಲೇ ನಡೆಸುವ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವತ್ತ ಗಮನ ಹರಿಸುವ ಕೆಲಸ ನಡೆಸಬೇಕು. ಎಂದರು
ಉಡುಪಿ ಧರ್ಮಪ್ರಾಂತ್ಯದ ವಿದ್ಯಾರ್ಥಿಗಳು ಮುಂದಿನ 10 ವರ್ಷಗಳಲ್ಲಿ ಕನಿಷ್ಟ 25 ಮಂದಿಯಾದರೂ ಕೂಡ ಸರ್ಕಾರದ ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಪ್ರಯತ್ನ ಮಾಡಲು ನಿರ್ಧರಿಸಿಲಾಗಿತ್ತಾದರೂ ನೀರಿಕ್ಷಿತ ಮಟ್ಟದ ಪ್ರತಿಫಲ ಸಾಧಿಸಲು ವಿಫಲರಾಗಿದ್ದೇವೆ. ಕೆಥೊಲಿಕ್ ಸಭಾ ಸಂಘಟನೆ ಇದರ ಅಗತ್ಯತೆಯನ್ನು ಮನಗಂಡು ನಮ್ಮ ಸಮುದಾಯದ ಮಕ್ಕಳನ್ನು ಈ ನಿಟ್ಟಿನಲ್ಲಿ ಉತ್ತೇಜಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡುವುದು ಅಗತ್ಯವಾಗಿದೆ. ಅನೀತಿ, ಅನ್ಯಾಯ, ಭ್ರಷ್ಠಾಚಾರದ ಸಮಾಜದಲ್ಲಿ ಕ್ರೈಸ್ತ ಸಮುದಾಯ ಮತ್ತು ಕೆಥೊಲಿಕ್ ಸಭಾ ಸಂಘಟನೆ ಆಕಾಶದಲ್ಲಿನ ನಕ್ಷತ್ರದಂತೆ ಮಿನುಗುವತ್ತ ಕಾರ್ಯಕರ್ತರು ಪ್ರಯತ್ನಿಸುವಂತೆ ಕರೆ ನೀಡಿದರು.
ಮುಖ್ಯ ಭಾಷಣಾಕಾರರಾಗಿ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ಕಾರ್ಮಿಕ ಆಯೋಗದ ನಿರ್ದೇಶಕ ಎಲ್ ರೋಯ್ ಕಿರಣ್ ಕ್ರಾಸ್ತಾ ಮಾತನಾಡಿ ಸಮಾಜಮುಖಿ ಸಂಘಟನೆಯಾಗಿ ಮುಂದಿನ ದಿನಗಳಲ್ಲಿ ಕೆಥೊಲಿಕ್ ಸಭಾ ಯಾವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಮತ್ತು ಆಧುನಿಕ ಮಾಧ್ಯಮಗಳನ್ನು ಬಳಸಿಕೊಳ್ಳುವತ್ತ ಯಾವ ರೀತಿಯಲ್ಲಿ ಕಾರ್ಯಕರ್ತರು ಸಜ್ಜಾಗಬೇಕು ಎನ್ನುವ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಿಮಾಚಲ ಪ್ರದೇಶ ಸರಕಾರದಿಂದ ಅಂಚೆ ಚೀಟಿ ಗೌರವಕ್ಕೆ ಪಾತ್ರರಾದ ಸಿಸ್ಟರ್ ಜಸಿಂತಾ ನೊರೊನ್ಹಾ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಮರ್ವಿನ್ ಆರಾನ್ಹಾ, ಸಂದೇಶ ಪ್ರಶಸ್ತಿ ಪುರಸ್ಕ್ರತ ವಿಲ್ಸನ್ ಒಲಿವೇರಾ, ರಾಷ್ಟ್ರಪ್ರಶಸ್ತಿ ವಿಜೇತ ಅಂಗನವಾಡಿ ಕಾರ್ಯಕರ್ತೇ ಡೆಲ್ಫಿನ್ ಡಿಸೋಜಾ ಇವರುಗಳನ್ನು ಗುರುತಿಸಿ ಗೌರವಿಸಲಾಯಿತು.
ನಿವೃತ ಶಿಕ್ಷಕ, ಕವಿ ಅಲ್ಫೋನ್ಸ್ ಡಿ’ಸೋಜಾ ಬ್ರಹ್ಮಾವರ ಇವರಿಗೆ ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ಡೆನಿಸ್ ಡಿ’ಸಿಲ್ವಾ ಸ್ಮಾರಕ ಲೇಕನ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭಾದ ನೂತನ ವೆಬ್ ಸೈಟ್ ಮತ್ತು ಟೆಲಿಫೋನ್ ಡೈರಕ್ಟರಿಯನ್ನು ಕೂಡ ಅನಾವರಣಗೊಳಿಸಲಾಯಿತು. ಇದೇ ವೇಳೆ ಡಾ|ಜೆರಾಲ್ಡ್ ಪಿಂಟೊ ಅವರ ನೂತನ ಸಣ್ಣ ಕಥೆಗಳ ಪುಸ್ತಕವನ್ನು ಕೂಡ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ನೆಹರು ಯುವಕೇಂದ್ರ ಇದರ ಜಿಲ್ಲಾ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜ, ಎಐಸಿಯು ರಾಷ್ಟ್ರೀಯ ಅಧ್ಯಕ್ಷ ಲ್ಯಾನ್ಸಿ ಡಿಕುನ್ಹಾ, ರಾಜ್ಯಾಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ನಿರ್ಗಮನ ಅಧ್ಯಕ್ಷ ಅನಿಲ್ ಲೋಬೊ, ಕೆಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಾತ್ಮಿಕ ನಿರ್ದೇಶಕ ವಂ ಫರ್ಡಿನಾಂಡ್ ಗೊನ್ಸಾಲ್ವಿಸ್, ಕಲ್ಯಾಣಪುರ ವಲಯ ನಿರ್ದೇಶಕ ವಂ.ಡಾ. ಲೊರೇನ್ಸ್ ಡಿಸೋಜಾ, ಮಂಗಳೂರು ಕೆಥೊಲಿಕ್ ಸಭಾ ಅಧ್ಯಕ್ಷ ರೋಲ್ಫಿ ಡಿಕೊಸ್ತಾ, ಕಾರ್ಯದರ್ಶಿ ಸೆಲೆಸ್ತಿನ್ ಡಿಸೋಜಾ, ಉಡುಪಿ ಕೆಥೊಲಿಕ್ ಸಭಾ ನಿರ್ಗಮನ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ಕಾರ್ಯದರ್ಶಿ ಜಸಿಂತಾ ಕುಲಾಸೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ನೂತನ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕಾರ್ಯದರ್ಶಿ ಮ್ಯಾಕ್ಸಿಮ್ ಡಿಸೋಜಾ, ಕೋಶಾಧಿಕಾರಿ ಸೊಲಮನ್ ಅಲ್ವಾರಿಸ್, ಕಲ್ಯಾಣಪುರ ವಲಯ ಅಧ್ಯಕ್ಷ ಸಂತೋಷ್ ಕರ್ನೆಲಿಯೊ ಉಪಸ್ಥಿತರಿದ್ದರು.