ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ -15 ಸಮಾರೋಪ…!
ಕೆರೆಮನೆ ಶಂಭು ಹೆಗಡೆ ಯಕ್ಷಗಾನ ಕಲಾ ಸೌರಭವನ್ನು ಜಗದಗಲಕ್ಕೆ ಪಸರಿಸಿದ ಮಹಾನ್ ಕಲಾವಿದ : ಡಾ.ತಲ್ಲೂರು
ಉಡುಪಿ : ಯಕ್ಷಗಾನ ಕಲಾ ಸೌರಭವನ್ನು ಜಗದಗಲಕ್ಕೆ ಪಸರಿಸಿ ಈ ಮೂಲಕ ತನ್ನ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಕೆರೆಮನೆ ಶಂಭು ಹೆಗಡೆ ಪ್ರಾತ: ಸ್ಮರಣೀಯರು. ಅವರ ಸಾಧನೆಯ ಹಾದಿಯನ್ನೇ ಅನುಸರಿಸಿಕೊಂಡು ಯಕ್ಷಗಾನ ಕಲೆಯ ಉಳಿವು ಬೆಳವಣಿಗೆಗೆ ತನ್ನದೇ ಕೊಡುಗೆಯನ್ನು ಮಂಡಳಿಗೆ ವಿಶ್ವ ಮಾನ್ಯತೆಯನ್ನು ತಂದಿರುವ ಕೆರೆಮನೆ ಶಿವಾನಂದ ಹೆಗಡೆ ಹಾಗೂ ಅವರ ಕುಟುಂಬ ಅಭಿನಂದನಾರ್ಹರು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಭಾನುವಾರ ಹೊನ್ನಾವರ ಗುಣವಂತೆಯ ಯಕ್ಷಾಂಗಣದಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇದರ 90ನೇ ವರ್ಷದ ಸಂಭ್ರಮೋತ್ಸವ ಹಾಗೂ 9 ದಿನಗಳ ಕಾಲ ನಡೆದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪದಲ್ಲಿ ಮಾತನಾಡಿದರು.
ಭಾರತೀಯ ಕಲಾಪ್ರಕಾರಗಳಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿರುವ ಯಕ್ಷಗಾನಕ್ಕೆ ಸುಧೋರಣೆಯನ್ನು ನೀಡುವುದರಲ್ಲಿ ಮಂಡಳಿ ಅಗ್ರ ಪಂಕ್ತಿಯಲ್ಲಿದೆ. 90 ವರ್ಷಗಳ ಹಿಂದೆ ಕೆರೆಮನೆ ಶಿವರಾಮ ಹೆಗಡೆ ಅವರಿಂದ ಪ್ರಾರಂಭಿಸಲ್ಪಟ್ಟ ಈ ಮಂಡಳಿ, ಮುಂದೆ ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆ ಅವರಿಂದ ವಿಸ್ತಾರಗೊಂಡು, ಇದೀಗ ಐದನೇ ತಲೆಮಾರಿನಲ್ಲಿ ಕೆರೆಮನೆ ಶಿವಾನಂದ ಹೆಗಡೆ ಅವರ ನಿರ್ದೇಶನದಲ್ಲಿ ಸಾಂಪ್ರಾದಾಯಿಕಶೈಲಿ ಹಾಗೂ ಪರಂಪರೆಯ ಚೌಕಟ್ಟನ್ನು ಉಳಿಸಿಕೊಂಡು ಹೊಸ ಆವಿಷ್ಕಾರದೊಂದಿಗೆ ಮುನ್ನಡೆಯುತ್ತಿರುವುದು ಕಲಾಭಿಮಾನಿಗಳಿಗೆ ಅತೀವ ಸಂಭ್ರಮ ತಂದಿದೆ. ಈ ಮಂಡಳಿಗೆ 90 ತುಂಬುತ್ತಿರುವ ಸುಸಂದರ್ಭದಲ್ಲಿ ಯೂನೆಸ್ಕೋ ಮನ್ನಣೆಗೆ ಪ್ರಾಪ್ತವಾಗಿರುವುದು ಯಕ್ಷಲೋಕಕ್ಕೆ ಸಂದ ಗೌರವ ಎಂದು ಅವರು ಅಭಿಪ್ರಾಯ ಪಟ್ಟರು.
ಯಕ್ಷಗಾನದಲ್ಲಿ ಸುಧಾರಣೆ ತರಬೇಕು ಎನ್ನುವ ಕೂಗು ಕೇಳುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಯಕ್ಷಗಾನ ಪ್ರಸಂಗಗಳು ಆಧುನಿಕ ಪ್ರಸಂಗಗಳನ್ನು ಆಡಿತೋರಿಸಿದ್ದಾರೆ. ಸಂದರ್ಭಕ್ಕನುಗುಣವಾಗಿ ಈ ಪ್ರಯೋಗಗಳ ಬಗ್ಗೆ ಪರವಿರೋಧ ಅಭಿಪ್ರಾಯಗಳು ಕೂಡಾ ಕೇಳಿ ಬಂದಿವೆ. ಯಕ್ಷಗಾನ ತನ್ನ ಪರಂಪರoಪರೆಯ ಚೌಕಟ್ಟನ್ನು ಮೀರಿ ಬೆಳೆಯುತ್ತಿದೆ ಎಂಬ ಆರೋಪವೂ ಬಂದಿದೆ. ಹಾಗಾಗಿ ಈ ಸಂಕ್ರಮಣದ ಸಂದರ್ಭದಲ್ಲಿ ಯಕ್ಷಗಾನದಲ್ಲಿನ ಬೆಳವಣಿಗೆಗಳು ಕಲೆಯ ಉಳಿವಿಗೆ ಪೂರಕವಾಗಿದೆಯೇ ಎಂಬ ಚಿಂತನೆ ಹಿರಿಯ ಕಿರಿಯ ಕಲಾವಿದರಲ್ಲಿ ನಡೆಯಬೇಕು. ಕಿರಿಯ ಕಲಾವಿದರಿಗೆ ಸೂಕ್ತ ಮಾರ್ಗದರ್ಶನವೂ ಈ ಮೂಲಕ ಸಿಗಬೇಕು ಎಂದು ನನ್ನ ವಿಚಾರವಾಗಿದೆ ಎಂದು ಅವರು ತಿಳಿಸಿದರು.
ಯಕ್ಷ ಪರಂಪರೆಯಲ್ಲಿಯೇ ಕೆರೆಮನೆ ಕುಟುಂಬ ಅಭೂತಪೂರ್ವ ಕೊಡುಗೆ ನೀಡಿದೆ. ಕೆರೆಮನೆ ಶಂಭು ಹೆಗಡೆ ಅವರಂತೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೆ ಮುಂದಾಗಿರುವ ಶಿವಾನಂದ ಹೆಗಡೆ ಅವರು ಈ ರಾಷ್ಟ್ರೀಯ ನಾಟ್ಯೋತ್ಸವದಂತಹ ಕಾರ್ಯಕ್ರಮವನ್ನು ಸಂಘಟಿಸಿ, ದೇಶಾದ್ಯಂತದ ಕಲಾವಿದರನ್ನು ಬರಮಾಡಿಕೊಂಡು ಅವರಿಂದ ಪ್ರದರ್ಶನಗಳನ್ನು ಏರ್ಪಡಿಸುವುದು ಸುಲಭದ ಮಾತಲ್ಲ. ಇದಕ್ಕೆ ಉತ್ತಮ ಸಂಘಟನೆ ಹಾಗೂ ಧನಬಲದ ಬೆಂಬಲ ಬೇಕು. ಸಮಾಜ ತನುಮನಧನದ ಬೆಂಬಲ ನೀಡಿದರೆ ಶಿವಾನಂದ ಹೆಗಡೆ ಅವರು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವುದಲ್ಲದೆ ಕೀರ್ತಿ ಪತಾಕೆಯನ್ನು ಮತ್ತೆ ವಿಶ್ವದಗಲಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಡಾ.ತಲ್ಲೂರು ಹೇಳಿದರು.
ಯಕ್ಷಗಾನವನ್ನು ಮಕ್ಕಳಿಗೆ ದಾಟಿಸಬೇಕು. ಅವರಿಗೆ ಯಕ್ಷಗಾನ ತರಬೇತಿ ನೀಡಿ ಭವಿಷ್ಯದ ಕಲಾವಿದರು, ಪ್ರೇಕ್ಷಕರನ್ನು ಸೃಷ್ಟಿಸಬೇಕು ಎಂಬುದು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷನಾಗಿ ನನ್ನ ಚಿಂತನೆಯಾಗಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಕಲಿಸುವ ಸಂಘಸoಸ್ಥೆಗಳಿಗೆ ಅಕಾಡೆಮಿಯ ನೆರವನ್ನು ನೀಡಲಾಗುತ್ತಿದೆ. ಸರಕಾರ ನೀಡುವ ಅನುದಾನವನ್ನು ಇಂತಹ ಸಂಘಸoಸ್ಥೆಗಳಿಗೆ ಮುಟ್ಟಿಸುವುದಲ್ಲದೆ, ಯಕ್ಷಗಾನಕ್ಕೆ ಅಪೂರ್ವ ಕೊಡುಗೆಯನ್ನು ನೀಡಿ ವಿಶ್ರಾಂತ ಜೀವನ ನಡೆಸುತ್ತಿರುವ ಹಿರಿಯ ಕಲಾವಿದರನ್ನು ಗುರುತಿಸಿ, ಪ್ರಶಸ್ತಿ ನೀಡುವ ಮೂಲಕ ಅವರನ್ನು ಗೌರವಿಸಬೇಕು ಎಂದೇ ಅಕಾಡೆಮಿಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಯಕ್ಷಗಾನವನ್ನು ಕಲಿತ ಮಕ್ಕಳು ಸಮಾಜ ಕಂಟಕರಾಗಿ ಬೆಳೆಯಲಾರರು. ನಮ್ಮ ಪುರಾಣಗಳ ನೀತಿ ಕಥೆಗಳನ್ನು ಮನನ ಮಾಡಿಕೊಂಡು ಅವರು ಸುಂಸ್ಕೃತರಾಗಿ ಬೆಳೆಯ ಬಲ್ಲರು. ಯಕ್ಷಗಾನ ಕಲೆ ಅವರಿಗೆ ನೈತಿಕ ಮೌಲ್ಯಗಳನ್ನು ದಯ ಪಾಲಿಸುತ್ತದೆ. ನಾನು ಲಯನ್ಸ್ ಗವರ್ನರ್ ಆಗಿದ್ದ ಸಂದರ್ಭದಲ್ಲ ವೃದ್ಧಾಶ್ರಮಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಲ್ಲಿದ್ದ ಹಿರಿಯ ಜೀವಗಳು ತಮ್ಮ ಮಕ್ಕಳಿಗಾಗಿ, ಅವರ ಪ್ರೀತಿಗಾಗಿ ಹಪಹಪಿಸುತ್ತಿರುವುದನ್ನು ಕಂಡು ದು:ಖಿತನಾಗಿದ್ದೆ. ಅವರೆಲ್ಲಾ ಬಡವರಲ್ಲ, ಆದರೆ ಅವರ ಮಕ್ಕಳು ಸಂಸ್ಕಾರ ಪಡೆಯುವುದರಲ್ಲಿ ಬಡವರಾದರು. ಪರಿಣಾಮವಾಗಿ ಜನ್ಮಕೊಟ್ಟ ತಂದೆತಾಯಿಯರನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳುವುದನ್ನು ಬಿಟ್ಟು ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಈ ಬೆಳವಣಿಗೆ ಸುಸಂಸ್ಕೃತ ಸಮಾಜಕ್ಕೆ ಭೂಷಣವಲ್ಲ. ಯಕ್ಷಗಾನ ಕಲೆ ಈ ಕಳಂಕವನ್ನು ತೊಡೆದು ಹಾಕಬಲ್ಲದು. ಯಕ್ಷಗಾನ ಕಲಿತ ಮಕ್ಕಳು ತಮ್ಮ ತಂದೆತಾಯಿ, ಗುರುಹಿರಿಯನ್ನು ಗೌರವಿಸುವುದನ್ನು ಕಲಿಯುತ್ತಾರೆ. ಇದು ಇಂದಿನ ಅಗತ್ಯವಾಗಿದೆ ಎಂದು ಡಾ.ತಲ್ಲೂರು ಶಿವರಾಮ ಶೆಟ್ಟಿ ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕರ್ಕಿ ಸತ್ಯನಾರಾಯಣ ಹಾಸ್ಯಗಾರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕ ಸುನೀಲ್ ನಾಯ್ಕ, ಹಿರಿಯ ಯಕ್ಷಗಾನ ಕಲಾವಿದ ಕರ್ಕಿ ಸತ್ಯನಾರಾಯಣ ಹಾಸ್ಯಗಾರ, ನರಸಿಂಹ ಹೆಗಡೆ, ಮೊದಲಾದವರು ಉಪಸ್ಥಿತರಿದ್ದರು. ಯಕ್ಷಗಾನ ವಿಮರ್ಶಕ ನಾರಾಯಣ ಯಾಜಿ ಸಾಲೇಬೈಲು ಕಾರ್ಯಕ್ರಮದ ಸಮಗ್ರ ಅವಲೋಕ ನೀಡಿದರು.
ಕಾರ್ಯಕ್ರಮದ ರೂವಾರಿ ಕೆರೆಮನೆ ಶಿವಾನಂದ ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.