Home Mangalorean News Kannada News ಕೆಲಸ ನೋಡಿ ಮತ ನೀಡಿ: ಕೆ. ಜಯಪ್ರಕಾಶ್ ಹೆಗ್ಡೆ

ಕೆಲಸ ನೋಡಿ ಮತ ನೀಡಿ: ಕೆ. ಜಯಪ್ರಕಾಶ್ ಹೆಗ್ಡೆ

Spread the love

ಕೆಲಸ ನೋಡಿ ಮತ ನೀಡಿ: ಕೆ. ಜಯಪ್ರಕಾಶ್ ಹೆಗ್ಡೆ

ಹೆಬ್ರಿ/ಬೆಳ್ವೆ: ಮತ ನೀಡುವಾಗ ಅಭ್ಯರ್ಥಿಗಳು ಈ ಹಿಂದೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ ನೀಡಿ. ಅಭಿವೃದ್ಧಿ ಕಾರ್ಯಗಳಿಂದ ದೇಶದ ಅಭಿವೃದ್ಧಿ ಸಾಧ್ಯ ಹೊರತು ಬರೇ ಭಾಷಣಗಳಿಂದಲ್ಲ ಎಂದು ಮಾಜಿ ಸಚಿವ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.

ಅವರು ಹೆಬ್ರಿ ಸಮೀಪದದ ಮಡಾಮಕ್ಕಿ ಗ್ರಾಮದ ಅರಸಮ್ಮಕಾನು ಸತೀಶ್ ಶೆಟ್ಟಿ ಅವರ ನಿವಾಸದ ಬಳಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕ್ಷೇತ್ರದ ಜನರಲ್ಲಿಗೆ ಮತಯಾಚಿಸಲು ಹೋದಾಗ ಅವರು ಹಿಂದೆ ಮಾಡಿದ ಕಾರ್ಯಗಳನ್ನು ಸ್ಮರಿಸುತ್ತಿದ್ದಾರೆ. ಹೊಸ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇದು ಒಬ್ಬ ಜನಪ್ರತಿನಿಧಿಗೆ ಸಿಗುವಂಥ ದೊಡ್ಡ ಉಡುಗೊರೆ. ರಾಜ್ಯ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದುಕೊಂಡಿದೆ. ಆಶ್ವಾಸನೆ ನೀಡಿರುವ ಐದು ಗ್ಯಾರೆಂಟಿಗಳನ್ನು ನೀಡಿ ಜನರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದೆ. ಆದ್ದರಿಂದ ಸರಕಾರ ನೀಡಿರುವ ಕೊಡುಗೆಗಳು ಹಾಗೂ ಅಭ್ಯರ್ಥಿಯು ತನ್ನ ಕ್ಷೇತ್ರಕ್ಕೆ ಮಾಡಿರುವ ಕಾರ್ಯಗಳನ್ನು ನೀಡಿ ಮತ ಚಲಾಯಿಸಿ ಎಂದು ಮತದಾರರನ್ನು ವಿನಂತಿಸಿಕೊಂಡರು.

ಉಡುಪಿ ಜಿಲ್ಲೆ ನಿರ್ಮಾಣವಾದುದರ ಪರಿಣಾಮ ಎಲ್ಲಡೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು. ನಾವು ಹಿಂದೆ ಮಾಡಿರುವ ಚಿಕ್ಕ ಪುಟ್ಟ ಸೇತುವೆಗಳು ಮತ್ತು ಡ್ಯಾಮ್ಗಳಿಂದ ಅದರ ಪಕ್ಕದಲ್ಲಿದ್ದ ಭೂಮಿಯ ಬೆಲೆ ಉತ್ತಮಗೊಂಡಿದೆ, ಅಲ್ಲಿ ಉತ್ತಮ ಕೃಷಿ ನಡೆಯುತ್ತಿದೆ. ಕೃಷಿ ಅಭಿವೃದ್ಧಿಯಾದಲ್ಲಿ ಆ ಊರಿನ ಅಭಿವೃದ್ಧಿಯಾಗುತ್ತದೆ, ಜೊತೆಯಲ್ಲಿ ದೇಶದ ಅಭಿವೃದ್ಧಿಯಾಗುತ್ತದದೆ ಎಂದು ಹೇಳಿದರು.

ರಾಜ್ಯ ಸರಕಾರ ನೀಡಿರುವ ಉಚಿತ ಕೊಡುಗೆಗಳಿಂದ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಉದ್ಭವವಾಗಿದೆ ವಿರೋಧ ಪಕ್ಷಗಳು ಆರಂಭದಲ್ಲಿ ಧ್ವನಿ ಎತ್ತಿ ಈಗ ಮೌನಕ್ಕೆ ಶರಣಾಗಿವೆ. ಕಾರಣ ಉಚಿತ ಯೋಜನೆಗಳು ಯಶಸ್ಸು ಕಂಡಿವೆ. ಬಡವರಿಗೆ ಉಚಿತ ಕೊಡುಗೆ ನೀಡಿದರೆ ದಿವಾಳಿಯಾಗುತ್ತದೆ ಎಂದು ಕೂಗುವ ಬಿಜೆಪಿ ಪಕ್ಷಕ್ಕೆ ಶ್ರೀಮಂತರ 11 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿರುವುದಕ್ಕೆ ಧ್ವನಿ ಎತ್ತುವವರಿಲ್ಲ. ನಿಜವಾಗಿಯೂ ದಿವಾಳಿಯಾಗುವುದು ಈ ರೀತಿಯ ಬೃಹತ್ ಮೊತ್ತದ ಮನ್ನಾದಿಂದ. ಆದ್ದರಿಂದ ಪ್ರಜ್ಞಾವಂಥ ಜನರು ಮತ ಚಲಾಯಿಸುವಾಗ ಈ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮಪಂಚಾಯಿತಿಯಲ್ಲಿ ಕೆಲಸಗಳು ಸುಲಲಿತವಾಗಿ ಮತ್ತು ಸೂಕ್ತ ಸಮಯಕ್ಕೆ ನಡೆಯಬೇಕಾದರೆ ಅಲ್ಲಿ ಕಂಪ್ಯೂಟರ್ ಅಳವಡಿಗೆ ಅಗತ್ಯ ಎಂಬುದನ್ನು ಗಮನಿಸಿ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಕಂಪ್ಯೂಟರ್ ಒದಗಿಸಿದ್ದರಿಂದ ಇಂದು ಗ್ರಾಮದ ಜನತೆ ತಮ್ಮ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗಿದೆ ಎಂದರು.

ದೇವರನ್ನು ರಾಜಕಾರಣಕ್ಕೆ ತರುವುದು ಬೇಡ:
ಧರ್ಮ ಮತ್ತು ರಾಜಕೀಯವನ್ನು ಒಂದುಗೂಡಿಸುವುದು ಸೂಕ್ತವಲ್ಲ. ಈ ದೇಶದ ಪ್ರತಿಯೊಬ್ಬ ಪ್ರಜೆಯಲ್ಲೂ ದೇಶಭಕ್ತಿ ಮತ್ತು ದೇಶಾಭಿಮಾನ ಇದ್ದೇ ಇರುತ್ತದೆ. ರಾಮ ಮಂದಿರಕ್ಕೆ ನಾನೂ ಕೊಡುಗೆ ನೀಡಿರುವೆ. ನನ್ನಲ್ಲಿಯೂ ದೇವರ ಬಗ್ಗೆ ಭಕ್ತಿ ಇದೆ. ಅದನ್ನು ಸಾರ್ವಜನಿಕವಾಗಿ ಪ್ರಕಟಪಡಿಸುವ ಅಗತ್ಯ ಇರುವುದಿಲ್ಲ. ರಾಜಕೀಯಕ್ಕೆ ದೇವರನ್ನು ತರುವುದು ನಾವು ದೇವರಿಗೆ ಮಾಡುತ್ತಿರುವ ಅನ್ಯಾಯ. ನಾವು ಮಾಡುವ ಕೆಲಸದಲ್ಲಿ ದೇವರನ್ನು ಕಾಣಬೇಕು ಎಂದು  ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಅವರು ಮಾತನಾಡಿ, “ಜನರು ಬದಲಾವಣೆ ಬಯಸುತ್ತಿದ್ದಾರೆ. ಬಿಜೆಪಿಗೆ ಕೆಲವು ವ್ಯಕ್ತಿಗಳು ವಲಸೆ ಹೋಗುತ್ತಿರುವುದನ್ನು ಕಂಡು ಕಾಂಗ್ರೆಸ್ನಲ್ಲಿರುವ ಕಾರ್ಯಕರ್ತರಿಗೆ ಅಚ್ಚರಿಯಾಗುತ್ತಿದೆ. ಆದರೆ ಅದೆಲ್ಲ ಹಣದ ವಲಸೆ. ತಪ್ಪಿನ ವಲಸೆ. ರಾಜ್ಯ ಕಾಂಗ್ರೆಸ್ ನೀಡಿರುವ ಪಂಚ ಗ್ಯಾರೆಂಟಿಯ ಬಗ್ಗೆ ಜನರಿಗೆ ತೃಪ್ತಿ ನೀಡಿದೆ. ಜನರ ಬಳಿಗೆ ಹೋದಾಗ ಅವರು ಸ್ಪಂದಿಸುತ್ತಿರುವ ರೀತಿ ನೋಡಿದಾಗ ಸ್ಪಷ್ಟವಾಗುತ್ತಿದೆ. ಕಾರ್ಯಕರ್ತರೇ ಪಕ್ಷದ ಆಸ್ತಿ ಅವರ ಶ್ರಮ ಹಾಗೂ ಅಭ್ಯರ್ಥಿಗಳ ಸಾಧನೆಯಿಂದ ಜಯಪ್ರಕಾಶ್ ಹೆಗ್ಡೆ ಈ ಬಾರಿ ಬೃಹತ್ ಮುನ್ನಡೆ ಕಂಡು ಜಯ ಗಳಿಸುತ್ತಾರೆ,” ಎಂದು ಹೇಳಿದರು.

ಗುರುವಾರ ಜಯಪ್ರಕಾಶ್ ಹೆಗ್ಡೆಯವರು ಉಡುಪಿಯಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್, ಆಭರಣ ಜುವೆಲರ್ಸ್, ಸಾಯಿರಾಧಾ ಮೋಟರ್ಸ್, ಆದರ್ಶ ಆಸ್ಪತ್ರೆ ಇನ್ನಿತರ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಮಿಕರನ್ನು ಭೇಟಿಯಾಗಿ ಮತಯಾಚನೆ ಮಾಡಿದರು.


Spread the love

Exit mobile version