ಕೆವಿಕೆಯಿಂದ ಲಿಂಗತ್ವ ಅಲ್ಪಸಂಖ್ಯಾತರಿಗೆ ಕೋಳಿ ಸಾಕಣೆ ಕುರಿತು ತರಬೇತಿ
ಮಂಗಳೂರು: ಕೋಳಿ ಸಾಕಣೆ ಕುರಿತ ಒಂದು ದಿನದ ತರಬೇತಿ ಕಾರ್ಯಗಾರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಉದ್ಘಾಟನೆಗೊಂಡಿತು.
ಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಆರಂಭಗೊಂಡಿದ್ದು, ಡಾ|ರಶ್ಮಿ ಅವರು ಸ್ವಾಗತಿಸಿ, ಜಿಲ್ಲಾಪಂಚಾಯತ್ ಯೋಜನಾ ನಿರ್ದೇಶಕರಾದ ಯೋಗೀಶ್ ಟಿ ಎಸ್ ಅವರು ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಯೋಗಿಶ್ ಅವರು ಜೂನ್ 6ರಂದು ಲಿಂಗತ್ವ ಅಲ್ಪಸಂಖ್ಯಾತರಿಗೆ ಲಾಭತರುವ ಯೋಜನೆಗಳ ಕುರಿತು ಸರಕಾರಿ ಮಟ್ಟದಲ್ಲಿ ಕಾರ್ಯಕ್ರಮವವನ್ನು ಆಯೋಜಿಸಲಾಗಿತ್ತು. ಅದಂತೆ ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ ಶಿವಕುಮಾರ್ ಮಗದ ಅವರು ಕೋಳಿ ಸಾಕಣೆ ಕುರಿತು ತರಬೇತಿಯನ್ನು ಆಯೋಜಿಸಲು ಮುಂದೆಬಂದಿದ್ದು, ಇದಕ್ಕೆ ಲಿಂಗತ್ವ ಅಲ್ಪಸಂಖ್ಯಾತ ಸದಸ್ಯರನ್ನು ಆಹ್ವಾನಿಸಿದ್ದರು. ಇವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿರುವ ವಾಯ್ಲೆಟ್ ಪಿರೇರಾ ಅವರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ ಎಂದರು.
ಕೃಷಿ ವಿಜ್ಞಾನ ಕೇಂದ್ರದಿಂದ ಸೂಕ್ತ ತರಬೇತಿ ಮತ್ತು ಸಹಕಾರವನ್ನು ನೀಡಲಾಗುತ್ತಿದ್ದು, ಇಂತಹ ತರಬೇತಿಗಳಲ್ಲಿ ಭಾಗವಹಿಸಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ನಮ್ಮ ಅಪೇಕ್ಷೆಯಾಗಿದೆ. ಇಲ್ಲಿಂದ ತರಬೇತಿಯನ್ನು ಪಡೆದು ವಾಪಾಸು ಹೋದ ಮೇಲೆ ಇತರರಿಗೆ ಇದರ ಮಾಹಿತಿ ನೀಡುವ ಕೆಲಸ ಆಗಬೇಕು. ತರಬೇತಿಯನ್ನು ಪಡೆದ ಬಳಿಕ ಕೆವಿಕೆ ಸರಕಾರದ ಸಹಾಯದಿಂದ ಸಾಲವನ್ನು ನೀಡಲಾಗುತ್ತದೆ. ಇದರಿಂದ ತಮ್ಮದೆ ಸ್ವಂತ ಉದ್ಯಮವನ್ನು ಸ್ಥಾಪಿಸಲು ಇದು ಸಹಕಾರಿಯಾಗುತ್ತದೆ. ಇಂದು ಲಿಂಗತ್ವ ಅಲ್ಪಸಂಖ್ಯಾತರಿಗೆ ವಿಶೇಷವಾಗಿ ತರಬೇತಿಯನ್ನು ಆಯೋಜಿಸಲಾಗಿದ್ದು ಇದರ ಸೂಕ್ತ ಪ್ರಯೋಜನವನ್ನು ಪಡೆಯುವಂತೆ ಸೂಚಿಸಿದರು.
ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಇದರ ಸಂಸ್ಥಾಪಕರಾದ ವಾಯ್ಲೆಟ್ ಪಿರೇರಾ ಅವರು ಮಾತನಾಡಿ ಇಂದು ಕೋಳಿ ಸಾಕಣೆ ಕುರಿತು ಲಿಂಗತ್ವ ಅಲ್ಪಸಂಖ್ಯಾತರಿಗೆ ಅವಕಾಶವನ್ನು ನೀಡಿದ್ದು ಅದರಂತೆ ಕೆಲವೊಂದು ಮಂದಿಗೆ ಇದರ ಅವಕಾಶವನ್ನು ನೀಡಲಾಗಿತ್ತು. ಆದರೆ ಕೆಲವೊಂದು ಮಂದಿ ನಾನಾ ಕಾರಣಗಳನ್ನು ನೀಡಿ ಇದರಲ್ಲಿ ಭಾಗವಹಿಸಿಲ್ಲ ಎನ್ನುವುದು ಬೇಸರದ ವಿಚಾರವಾಗಿದೆ. ಕಳೆದು ಒಂದುವರೆ ವರ್ಷದಿಂದ ಲಿಂಗತ್ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಲಾಗುತ್ತಿದ್ದು ಅವರುಗಳಿಗೆ ಸರಕಾರದ ಯೋಜನೆಗಳ ಮೂಲಕ ಮನೆಯನ್ನು ಕಟ್ಟಿಕೊಡುವ ಪ್ರಯತ್ನ ನಡೆಸಲಾಗುತ್ತದೆ. ಅವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸ್ವಾವಲಂಭಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ಟ್ರಸ್ಟಿನ ಅಪೇಕ್ಷೆಯಾಗಿದೆ. ಇಂದು 6 ಮಂದಿಗೆ ಅವಕಾಶ ನೀಡಲಾಗಿತ್ತು ಆದರೆ ಇಬ್ಬರು ಮಾತ್ರ ಭಾಗವಹಿಸಿದ್ದು ಅವರಿಗೆ ಜೀವನದಲ್ಲಿ ಬದಲಾವಣೆ ಕಾಣಬೇಕು ಎಂಬ ನಿಜವಾದ ಆಸೆ ಇಟ್ಟುಕೊಂಡು ಬಂದಿರುತ್ತಾರೆ ಅಂತಹವರಿಗೆ ಟ್ರಸ್ಟ್ ಸದಾ ಬೆನ್ನೆಲುಬಾಗಿ ನಿಂತಿರುತ್ತದೆ ಎಂದರು.
ಡಾ|ವಸಂತ್ ಕುಮಾರ್ ಶೆ್ಟ್ಟಿ ಮಾತನಾಡಿ ಕೋಳಿ ಉದ್ಯಮ ದೇಶದಲ್ಲಿ ಬೇಳೆಯುತ್ತಿರುವ ಉದ್ಯಮವಾಗಿದೆ, ಸರ್ವೆಗಳ ಪ್ರಕಾರ ಈ ಉದ್ಯಮದಲ್ಲಿ ಕೋಟ್ಯಾಂತರ ವ್ಯವಹಾರ ನಡೆಯುತ್ತಿದ್ದು ದೇಶದಲ್ಲಿ ವರ್ಷಕ್ಕೆ ಒರ್ವ ವ್ಯಕ್ತಿ 2 ರಿಂದ 3 ಕೆಜಿ ಮಾಂಸವನ್ನು ಸೇವಿಸುತ್ತಾನೆ. ಮುಂದುವರಿದ ರಾಷ್ಟ್ರಗಳ್ಲಲಿ ಪ್ರತಿಯೊಬ್ಬ ವ್ಯಕ್ತಿ 48-52 ಕೆಜಿ ಮಾಂಸವನ್ನು ಸೇವಿಸುತ್ತಾನೆ. ಕೇರಳದಲ್ಲಿ ಒರ್ವ ವ್ಯಕ್ತಿ ವರ್ಷಕ್ಕೆ ಸುಮಾರು 7-8 ಕೆಜಿ ಮಾಂಸವನ್ನು ಸೇವಿಸುತ್ತಾನೆ. ಕೋಳಿ ಮಾಂಸ ಪ್ರೋಟಿನ್ ಭರಿತವಾಗಿದ್ದು ಅತಿ ಕಡಿಮೆಯಲ್ಲಿ ಸಿಗುತ್ತದೆ ಎಂದರು. ಕರ್ನಾಟಕದಲ್ಲಿ ರಾಜಕಾರಣಿಗಳು ಸಹ ಪೌಲ್ಟ್ರಿ ಉದ್ಯಮದಲ್ಲಿ ತೊಡಗಿದ್ದು ಒಂದು ಲಾಭದಾಯಕ ಉದ್ಯಮ ಇದಾಗಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಡಾ ಶಿವಕುಮಾರ್ ಮದಗ ಮಾತನಾಡಿ ಈ ವರ್ಷದ ಅಧಿಕೃತ ಕಾರ್ಯಕ್ರಮ ಇದಾಗಿದ್ದು, ವಿಶೇಷತೆಯಿಂದ ಕೂಡಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ತರಬೇತಿ ನೀಡುವುದರ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸುವುದು ನಮ್ಮ ಉದ್ದೆಶ. ಇದಕ್ಕೆ ಹಲವರು ಟೀಕೆ ಕೂಡ ಮಾಡಿದ್ದು ಪ್ರಚಾರಕ್ಕಾಗಿ ಮಾಡಲಾಗುತ್ತಿದೆ ಎಂಬ ರೀತಿಯಲ್ಲಿ ಮಾತನಾಡುತ್ತಾರೆ ಆದರೆ ಇದು ಪ್ರಚಾರ ನೀಡುತ್ತಿರುವುದು ಕೇವಲ ಒಳ್ಳೆಯ ಉದ್ದೇಶಕ್ಕಾಗಿ ಎಂದರು.
ಜಿಪಂನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಲಿಂಗತ್ವ ಅಲ್ಪಸಂಖ್ಯಾತರಿಗೆ ಸಹಕಾರ ನೀಡಬೇಕು ಎಂದು ಆಲೋಚಿಸಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾನು 6 ಮಂದಿಗೆ ಇದರಲ್ಲಿ ಭಾಗವಹಿಸಲು ಕೇಳಿಕೊಂಡಿದ್ದು ಬೇಸರದ ಸಂಗತಿ ಎಂದರೆ ಕೇವಲ 2 ಮಂದಿ ಮಾತ್ರ ಭಾಗವಹಿಸಿದ್ದಾರೆ. ಆದರೆ ಅವರನ್ನು ಕೂಡ ಮುಂದಿನ ದಿನಗಳಲ್ಲಿ ಸೇರಿಸಿಕೊಂಡು ತರಬೇತಿ ನೀಡಲಾಗುವುದು ಎಂದರು.
ದಕ ಜಿಲ್ಲೆಯಲ್ಲಿ ಪೌಲ್ಟ್ರಿ ಉದ್ಯಮಕ್ಕೆ ಉತ್ತಮ ಬೇಡಿಕೆ ಇದ್ದು, ಇಲ್ಲಿ ಯಾವ ರೀತಿಯಲ್ಲಿ ಉದ್ಯಮ ನಡೆಸಬೇಕು ಎಂಬ ಕುರಿತು ತರಬೇತಿ ನೀಡಲಾಗುತ್ತದೆ ಅಲ್ಲದೆ ಸರಕಾರದ ಯೋಜನೆಗಳು ಯಾವ ರೀತಿಯಲ್ಲಿ ಸಹಕಾರಿಯಾಗುತ್ತದೆ ಎಂಬುದರ ಕುರಿತು ಕೂಡ ಹೇಳಲಾಗುತ್ತದೆ. ಜೀವನದಲ್ಲಿ ಯಶಸ್ಸು ಕಾಣಲು ಹಲವಾರು ರೀತಿಯ ದಾರಿಗಳಿದ್ದು, ಕೋಳಿ ಸಾಕಣೆ, ಹಂದಿ ಸಾಕಣೆ, ಅಣಬೆ ಕೃಷಿ, ಮೆಣಸು ಅಥವಾ ಕೃಷಿ ಕೆಲಸದಿಂದ ಕೂಡ ಯಶಸ್ವಿ ಕಾಣಲು ಸಾಧ್ಯವಿದೆ ಎಂದರು.
ತರಬೇತಿಯಲ್ಲಿ ಭಾಗವಹಿಸಿದ ಸದಾಶಿವ ಎನ್ನುವವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ತಾನು ಕಳೆದ ವರ್ಷ ತರಬೇತಿಯಲ್ಲಿ ಭಾಗವಹಿಸಿದ್ದು, ಪ್ರಸ್ತುತ 3000 ಕೋಳಿಗಳು ತನ್ನಲ್ಲಿದ್ದು ಇದರಿಂದ ಉತ್ತಮ ಲಾಭವನ್ನು ಪಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿಸುವ ಇರಾದೆಯನ್ನು ಹೊಂದಿದ್ದೇನೆ ಎಂದರು.
ಹರೀಶ್ ಶೆಟ್ಟಿ ಧನ್ಯವಾದವಿತ್ತರು.