ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ 4ನೇ ಬಾಲಶಲ್ಯ ಕ್ರಿಯಾ ಅಭಿಯಾನ
ಮಂಗಳೂರು: ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಸ್ಪತ್ರೆ ಅತ್ತಾವರ ಇದರ ಸಾಮಾಜಿಕ ಕಳಕಳಿಯ ಅಂಗವಾಗಿ 4ನೇ ವರ್ಷದ ಬಾಲಶಲ್ಯ ಕ್ರಿಯಾ ಅಭಿಯಾನ ಯೋಜನೆಯನ್ನು ಹಮ್ಮಿಕೊಂಡಿದೆ. ಬಾಲಶಲ್ಯ ಕ್ರಿಯಾ ಅಭಿಯಾನ ಯೋಜನೆಯು ಅಮೇರಿಕಾದ ಹ್ಯೂಸ್ಟನ್ ನಗರದ ಪೀದ್ ಪರಾಯಿ ಇಂಟರ್ನ್ಯಾಶನಲ್ ಮತ್ತು ಬಂಟ್ವಾಳದ ಅನಂತ್ ಮಲ್ಯ ಚಾರಿಟೇಬಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಉಚಿತವಾಗಿ ನಡೆಸಲ್ಪಡುವ ಅತ್ಯಾಧುನಿಕ ಮಕ್ಕಳ ಶಸ್ತ್ರಕ್ರಿಯಾ ಯೋಜನೆಯಾಗಿದ್ದು ಈ ಯೋಜನೆಯಡಿಯಲ್ಲಿ 16 ವರ್ಷದ ಕೆಳಗಿನ ಸಂಕೀರ್ಣವಾದ ಹಾಗೂ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸಾ ಪರಿಸ್ಥಿತಿಯಿಂದ ಬಳಲುತ್ತಿರುವ ಮಕ್ಕಳಿಗೆ ನುರಿತ ಮಕ್ಕಳ ಶಸ್ತ್ರಚಿಕಿತ್ಸಾ ಹಾಗೂ ನುರಿತ ಎಲುಬು ತಜ್ಞರಿಂದ ಉಚಿತವಾಗಿ ತಪಾಸಣೆಯನ್ನು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ನಡೆಸಲಾಗುತ್ತಿದೆ.
ಮಂಗಳೂರಿನಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರಿನ ವೈದ್ಯಕೀಯ ಅಧೀಕ್ಷಕರಾಗಿರುವ ಡಾ. ಜಾನ್ ರಾಮಪುರಮ್ ಮಾತನಾಡಿ ತಪಾಸಣೆಗೆ ಒಳಪಟ್ಟು ಶಸ್ತ್ರಚಿಕಿತ್ಸೆಗೆ ಗುರುತಿಸಲ್ಪಟ್ಟ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಅಮೇರಿಕಾದ ಹ್ಯೂಸ್ಟನ್ನ ಟೆಕ್ಸಾಸ್ ಮಕ್ಕಳ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಾ ತಜÐರು ಹಾಗೂ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ನುರಿತ ಮಕ್ಕಳ ಶಸ್ತ್ರಚಿಕಿತ್ಸಕರು ಹಾಗೂ ಎಲುಬು ತಜ್ಞರು ನಡೆಸಿಕೊಡಲಿದ್ದಾರೆ. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ)ಯು ರೋಗ ನಿರ್ಣಯ (ಡಯಾಗ್ನೋಸ್ಟಿಕ್) ಮತ್ತು ಶಸ್ತ್ರಚಿಕಿತ್ಸೆಗೆ ಬೇಕಾದ ಸೌಲಭ್ಯಗಳು ಮತ್ತು ಉಪಕರಣಗಳನ್ನು ಪ್ರಾಯೋಜಿಸುತ್ತಿದ್ದು, ಬಂಟ್ವಾಳ ಅನಂತ ಮಲ್ಯ ಚಾರಿಟೇಬಲ್ ಟ್ರಸ್ಟ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮಕ್ಕಳಿಗೆ ಅವಶ್ಯಕವಿರುವ ಔಷಧಗಳು, ಆಹಾರ ಮತ್ತು ಪೋಷಣಾ ವೆಚ್ಚವನ್ನು ಭರಿಸಲಿದೆ.
ಕರ್ನಾಟಕದಲ್ಲಿ 4ನೇ ಬಾರಿಗೆ ಯಶಸ್ವಿಯಾಗಿ ನಡೆಯುತ್ತಿರುವ ಬಾಲಶಲ್ಯ ಕ್ರಿಯಾ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಪ್ರಾಧಿಕಾರದಿಂದ ಶಿಫಾರಸು ಮತ್ತು ಅನುಮತಿಯನ್ನು ಈಗಾಗಲೇ ಪಡೆಯಲಾಗಿದ್ದು ಮಾಹಿತಿಗಾಗಿ, ಆರೋಗ್ಯ ಸಚಿವರಿಗೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರದಾನ ಕಾರ್ಯದರ್ಶಿಯವರಿಗೆ ಕಳುಹಿಸಿಕೊಡಲಾಗಿದೆ.
ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಸದಾಶಿವ ರಾವ್ ಮಾತನಾಡಿ ಹಣಕಾಸಿನ ತೊಂದರೆಯಿಂದಾಗಿ ಹಲವಾರು ಪೋಷಕರು ತಮ್ಮ ಮಕ್ಕಳಿಗೆ ಆಧುನಿಕ ಚಿಕಿತ್ಸೆಯನ್ನು ಕೊಡಿಸಲಾಗದೆ ಹಾಗೂ ಮಕ್ಕಳ ನ್ಯೂನತೆಯಿಂದ ಪೋಷಕರು ತುಂಬಾ ನೋವನ್ನು ಅನುಭವಿಸುತ್ತಿದ್ದಾರೆ. ಈ ಉದಾತ್ತ ಸೇವೆಯಿಂದಾಗಿ ಪುಟ್ಟ ಮಕ್ಕಳು ಅನುಭವಿಸುವ ಮಲದ್ವಾರದ ವಿಕಲತೆ, ಅನ್ನನಾಳದ ತೊಂದರೆ, ತಲೆ ಹಾಗೂ ಕುತ್ತಿಗೆಯ ತೊಂದರೆ, ಮೂತ್ರ ಕೋಶದ ತೊಂದರೆ ಮುಂತಾದ ರೋಗ ಲಕ್ಷಣಗಳಿಂದ ಬಳಲುತ್ತಿರುವ ಮಕ್ಕಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಬಹುದು.
ಎಲುಬು ಮತ್ತು ಮೂಳೆ ವಿಭಾಗದ ಮುಖ್ಯಸ್ಥರಾದ ಡಾ. ಸುರೇಂದ್ರ ಕಾಮತ್ರವರು ಮಕ್ಕಳಲ್ಲಿ ಕಂಡು ಬರುವ ಎಲುಬು ಮತ್ತು ಮೂಳೆ ರೋಗದ ಯಾವಯಾವ ಲಕ್ಷಣಗಳು ಈ ಯೋಜನೆಯಡಿಯಲ್ಲಿ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಿದರು. ದೂರ ದೂರದ ಊರುಗಳಾದ ಶಿವಮೊಗ್ಗ, ಕೊಡಗು, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಿಂದ ಶಸ್ತ್ರಚಿಕಿತ್ಸೆಗೆ ಒಳಪಡುವ ಮಕ್ಕಳನ್ನು ಪರಿಶೀಲಿಸಲಾಗಿದೆ ಎಂದು ಹೇಳಿದರು
ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಜಯತೀರ್ಥ ಜೋಶಿಯವರು ಮಾತನಾಡಿ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರವು ಮಕ್ಕಳ ಚಿಕಿತ್ಸೆಗಾಗಿ ಸುಸಜ್ಜಿತವಾದ ವೈದ್ಯಕೀಯ, ಶಸ್ತ್ರಚಿಕಿತ್ಸಾ ಮತ್ತು ಆಂಕಾಲಜಿ ಸೇವೆಗಳ ಸಮಗ್ರ ಆರೈಕೆ ಕೆಂದ್ರವಾಗಿದೆ. ಆಸ್ಪತ್ರೆಯು ವಿನೂತನ ಮತ್ತು ಸುಸಜ್ಜಿತವಾದ ಶಿಶು ತೀವ್ರ ನಿಗಾ ಘಟಕವನ್ನು ಹೊಂದಿದೆ ಎಂದು ತಿಳಿಸಿದರು.
ಬಂಟ್ವಾಳ ಅನಂತ ಮಲ್ಯ ಚಾರಿಟೇಬಲ್ ಟ್ರಸ್ಟ್ ಇದರ ಟ್ರಸ್ಟಿಯವರಾದ ಶ್ರೀ ಜೀತೇಂದ್ರ ನಾಯಕ್ ಇವರು ಮಾತನಾಡಿ ಈ ವರ್ಷ ನಡೆಯಲಿರುವ ಯೋಜನೆಗೆ ಮಾಧ್ಯಮ ಮಿತ್ರರ ಬೆಂಬಲವನ್ನು ಕೋರುತ್ತಾ ಸೋಮವಾರದಿಂದ ಶುಕ್ರವಾರದವರೆಗೆ ದಿನನಿತ್ಯ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಜನವರಿ 21 ರ ವರೆಗೆ ಉಚಿತ ಶಸ್ತ್ರಚಿಕಿತ್ಸಾ ಸಮಾಲೋಚನೆ ನಡೆಯುತ್ತಿದ್ದು ಈ ಮೇಲೆ ತಿಳಿಸಲ್ಪಟ್ಟ ರೋಗಲಕ್ಷಣಗಳುಳ್ಳ ಮಕ್ಕಳನ್ನು ಪರಿಶೀಲನೆಗಾಗಿ ಪೋಷಕರು ಕರೆತರಬಹುದಾಗಿ ಈ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ಕಳೆದ ವರ್ಷ ಬಾಲಶಲ್ಯ ಕ್ರಿಯಾ ಅಭಿಯಾನ ಯೋಜನೆಯಡಿಯಲ್ಲಿ ಯಶಸ್ವಿಯಾಗಿ ಚಿಕಿತ್ಸೆಗೆ ಒಳಗಾದ ಮಕ್ಕಳ ಪೋಷಕರು ಮಾತನಾಡಿ ತಮ್ಮ ಅನುಭವಗಳನ್ನು ಕೂಡ ಹಂಚಿಕೊಂಡರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9108529022 / 7022078002