ಕೇಂದ್ರದಿಂದ ‘ಅನ್ ಲಾಕ್ 2’ ಮಾರ್ಗಸೂಚಿ ಪ್ರಕಟ: ದೇಶಾದ್ಯಂತ ಯಾವೆಲ್ಲಾ ಸೇವೆ ಲಭ್ಯ, ಏನಿರಲ್ಲ? ಇಲ್ಲಿದೆ ವಿವರ
ಹೊಸದಿಲ್ಲಿ: ಕೊರೊನಾ ವೈರಸ್ ಹಿನ್ನೆಲೆ ಮಾರ್ಚ್ 25 ರಂದು ಘೋಷಿಸಿದ್ದ ಲಾಕ್‌ಡೌನ್‌ನ್ನು ಜುಲೈ 31ರವರೆಗೆ ವಿಸ್ತರಿಸಿ ಕೇಂದ್ರ ಸರಕಾರ ಆದೇಶಿಸಿದೆ. ಈ ಅವಧಿಯ ಲಾಕ್‌ಡೌನ್‌ನ್ನು ಅನ್‌ಲಾಕ್ 2.0 ಎಂದು ಕರೆದಿರುವ ಕೇಂದ್ರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಜುಲೈ 1ರಿಂದ ಜಾರಿಯಾಗಲಿದೆ.
ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅನ್‌ಲಾಕ್ 2.0 ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದ್ದಾರೆ. ಕಂಟೈನ್ಮೆಂಟ್ ಝೋನ್‌ಗಳನ್ನು ಹೊರತುಪಡಿಸಿ ಉಳಿದ ಕಡೆ ಭಾಗಶಃ ಎಲ್ಲ ಚಟುವಟಿಕೆಗಳಿಗೆ ಕೇಂದ್ರ ಅನುವು ಮಾಡಿಕೊಟ್ಟಿದೆ. ಒಂದಿಷ್ಟು ಚಟುವಟಿಕೆಗಳ ಮೇಲೆ ಎಲ್ಲ ಕಡೆಯೂ ನಿರ್ಬಂಧ ಮುಂದುವರೆಯಲಿದೆ.
ಏನಿರುತ್ತೆ..? ಏನಿರಲ್ಲ..?
* ಶಾಲಾ, ಕಾಲೇಜು, ಶೈಕ್ಷಣಿಕ ಸಂಸ್ಥೆಗಳು ಜುಲೈ 31ರವರೆಗೂ ಸ್ಥಗಿತಗೊಳ್ಳಲಿವೆ. ಆನ್‌ಲೈನ್ ಮತ್ತು ದೂರ ಶಿಕ್ಷಣಕ್ಕೆ ಅನುಮತಿ ನೀಡಲಾಗಿದೆ.
* ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಸಂಚಾರದ ಮೇಲೆ ನಿರ್ಬಂಧ ಮುಂದುವರೆದಿದ್ದು, ಗೃಹ ಸಚಿವಾಲಯ ಅನುಮತಿ ನೀಡಿದ ವಿಮಾನಯಾನಕ್ಕೆ ಅನುಮತಿ ನೀಡಲಾಗಿದೆ.
* ಮೆಟ್ರೋ ರೈಲು ಸಂಚಾರದ ಮೇಲಿನ ನಿರ್ಬಂಧ ಮುಂದುವರೆಯಲಿದೆ.
* ಸಿನಿಮಾ ಹಾಲ್, ಜಿಮ್, ಸ್ವಿಮ್ಮಿಂಗ್ ಪೂಲ್, ಮನರಂಜನಾ ಪಾರ್ಕ್, ಥಿಯೇಟರ್, ಬಾರ್, ಆಡಿಟೋರಿಯಂ, ಅಸೆಂಬ್ಲಿ ಹಾಲ್ ಮತ್ತು ಹೆಚ್ಚು ಜನ ಸೇರುವ ಸ್ಥಳಗಳು ಬಂದ್ ಆಗಿರಲಿವೆ.
* ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಹೆಚ್ಚು ಜನ ಸೇರುವ ಕಾರ್ಯಕ್ರಮಗಳು ಮಾಡುವಂತಿಲ್ಲ.
* ದೇಶಿಯ ವಿಮಾನಯಾನ ಸಂಚಾರ ಹಾಗೂ ರೈಲು ಸಂಚಾರ ಮೊದಲಿನಂತೆ ನಿಯಮಿತವಾಗಿ ಕಾರ್ಯಾಚರಣೆಯಲ್ಲಿರುತ್ತದೆ.
* ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ದೇಶಾದ್ಯಂತ ಜನರ ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಲಾಗಿದ್ದು, ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ.
ಮುನ್ನೆಚ್ಚರಿಕಾ ಕ್ರಮಗಳು
* ಸಾರ್ವಜನಿಕ ಸ್ಥಳಗಳಲ್ಲಿ, ಕಚೇರಿಗಳಲ್ಲಿ ಹಾಗೂ ಪ್ರಯಾಣದ ಸಮಯದಲ್ಲಿ ಮಾಸ್ಕ್ ಕಡ್ಡಾಯ.
* ಕನಿಷ್ಠ 6 ಅಡಿ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದೆ.
* ಅಂಗಡಿಗಳಲ್ಲಿ ಒಂದೇ ಸಮಯಕ್ಕೆ 5 ರಿಂದ ಹೆಚ್ಚಿನ ಜನ ಇರುವಂತಿಲ್ಲ.
* ಮದುವೆ ಸಮಾರಂಭದಲ್ಲಿ 50ಕ್ಕಿಂತ ಹೆಚ್ಚಿನ ಜನ ಭಾಗವಹಿಸುವಂತಿಲ್ಲ.
* ಅಂತ್ಯಸಂಸ್ಕಾರದಲ್ಲಿ 20ಕ್ಕಿಂತ ಹೆಚ್ಚಿನ ಜನ ಭಾಗವಹಿಸುವಂತಿಲ್ಲ.
* ಸಾರ್ವಜನಿಕ ಸ್ಥಳಗಳಲ್ಲಿ ಪಾನ್, ಗುಟ್ಕಾ, ಲಿಕ್ಕರ್, ತಂಬಾಕು ಸೇವನೆ ನಿಷೇಧಿಸಲಾಗಿದೆ.