ಕೇಂದ್ರದ ಯೋಜನೆಗೆ ರಾಜ್ಯ ಸರಕಾರ ತಡೆ: ಮಾಳವಿಕಾ ಅವಿನಾಶ್ ಅರೋಪ
ಉಡುಪಿ: ಕೇಂದ್ರ ಸರಕಾರ ಯೋಜನೆಗಳು ರಾಜ್ಯ ಸಮರ್ಪಕವಾಗಿ ಅನುಷ್ಠಾನವಾಗದಂತೆ ರಾಜ್ಯ ಸರಕಾರ ತಡೆಯೊಡ್ಡುತ್ತಿದೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರೆ ಮಾಳವಿಕಾ ಅವಿನಾಶ್ ಅರೋಪಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಹಾಗೂ ಕೇಂದ್ರ ಸರಕಾರದ ಸಾಧನೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ 224 ಕ್ಷೇತ್ರಗಳಲ್ಲಿ ಪರಿವರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಜ. 28ರಂದು ಮೈಸೂರಿನಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ಯಾತ್ರೆ ಸಂಪನ್ನಗೊಳ್ಳಿಲಿದೆ. ಮಡಿಕೇರಿಯಲ್ಲಿ ಯಾತ್ರೆಗೆ ವಿನಾ ಕಾರಣ ತಡೆಯೊಡ್ಡಲಾಗಿದೆ. ಇದು ರಾಜ್ಯ ಸರಕಾರದ ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಅವರು ತಿಳಿಸಿದರು.
ಕೆನರಾ ಕ್ರೈಸ್ತರು , ಮಂಡ್ಯಂ ಅಯ್ಯಂಗಾರ್, ಕೊಡವರ ಸಹಿತ ಲಕ್ಷಾಂತರ ಜನರ ಹತ್ಯೆ ಮಾಡಿದ ಟಿಪ್ಪು ಜಯಂತಿಯನ್ನು ಪಕ್ಷ ವಿರೋಧಿಸುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹ ವಕ್ತಾರೆ ಸುಲೋಚನಾ ಡಿ.ಕೆ. ಭಟ್, ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಹಿಳಾ ಮೋರ್ಚಾ ಅಧ್ಯಕ್ಷ ನಯನಾ ಗಣೇಶ್, ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ನಗರಸಭಾ ಸದಸ್ಯ ಯಶ್ಪಾಲ್ ಸುವರ್ಣ, ಕುಯಿಲಾಡಿ ಸುರೇಶ್ ನಾಯಕ್, ಕಟಪಾಡಿ ಶಂಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.