ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯಿಂದ ಜುಲೈ 3ರಂದು ದೇಶವ್ಯಾಪಿ ಪ್ರತಿಭಟನೆ
ಮಂಗಳೂರು: ಸರಕಾರದ ಈ ಧೋರಣೆಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ಜುಲೈ 3ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲಿವೆ
ಕೋವಿಡ್ 19 ಮಹಾಮಾರಿಯಿಂದಾಗಿ ಜಗತ್ತೆಲ್ಲಾ ತಲ್ಲಣಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಬಡಜನ, ಕಾರ್ಮಿಕರು ಒಟ್ಟಾರೆಯಾಗಿ ಬಳಲಿದ್ದಾರೆ. ಅಂತಹ ಸಂದರ್ಭದಲ್ಲಿ ಜನರ ಬವಣೆಗಳಿಗೆ ಸ್ಪಂದಿಸುವ ಬದಲಾಗಿ ಆಳುವ ಜನ ಈ ಸಂದರ್ಭವನ್ನು ತಮ್ಮ ಗುಪ್ತ ಕಾರ್ಯಸಾಧನೆಗಳ ಅನುಷ್ಠಾನಕ್ಕಾಗಿ ಉಪಯೋಗಿಸಲು ಮುಂದಾಗಿದ್ದಾರೆ.
ನೂರಾರು ವರ್ಷಗಳ ಹೋರಾಟದಿಂದ ಗಳಿಸಿಕೊಂಡ ಕಾರ್ಮಿಕ ಕಾನೂನುಗಳನ್ನು ನಿಷ್ಕ್ರಿಯಗೊಳಿಸಲು ಸರಕಾರಗಳು ಈ ಸಂದರ್ಭವನ್ನು ಉಪಯೋಗಿಸುತ್ತಿವೆ. ಲಾಕ್ಡೌನ್ ಸಮಯದಲ್ಲಿ ಕಾರ್ಮಿಕರರಿಗೆ ಸಂಬಳ ಸಿಗದೆ ಅವರು ಮತ್ತು ಅವರ ಕುಟುಂಬ ಉಪವಾಸ ಬೀಳುವಂತಾಗಿದೆ. ಕೆಲವು ಸರಕಾರಗಳು ಕೆಲವೊಂದು ಪರಿಹಾರ ಘೋಷಿಸಿರೂ ಒಟ್ಟಾರೆಯಾಗಿ ಜನಸ್ತೋಮಕ್ಕೆ ಅದು ತಲುಪುತ್ತಿಲ್ಲ. ಬಡಜನರು, ಕಾರ್ಮಿಕರು ಈ ವಿಷಮ ಸ್ಥಿತಿಯಲ್ಲಿ ಬದುಕುಳಿಯಲು ಸಾಧ್ಯವಾಗುವಂತೆ ಕೆಲವು ಬೇಡಿಕೆಗಳನ್ನು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಸರಕಾರದ ಮುಂದಿರಿಸಿತ್ತು. ಆದರೆ ಸರಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಮನ್ನಿಸದೆ, ಬಂಡವಾಳಿಗರಿಗೆ, ಕಾರ್ಪರೇಟ್ಗಳಿಗೆ ಹಾಗೂ ವಿದೇಶಿ ಹೂಡಿಕೆದಾರರಿಗೆ ಸಹಾಯಹಸ್ತ ಚಾಚುವುದರ ಹೆಸರಲ್ಲಿ ಬಡಜನ ಮತ್ತು ಕಾರ್ಮಿಕರನ್ನು ತುಳಿಯಲು ಈ ಸಂದರ್ಭವನ್ನು ಬಳಸಿಕೊಳ್ಳುತ್ತಿದೆ.
ಸರಕಾರದ ಈ ಧೋರಣೆಗಳ ವಿರುದ್ಧ ಕಾರ್ಮಿಕ ವರ್ಗ ಹೋರಾಟಕ್ಕಿಳಿಯುವುದು ಅನಿವಾರ್ಯವಾಗಿದೆ. 2020ರ ಮಾರ್ಚ 22ರಂದು ಮೊದಲ ಹಂತದ ಪ್ರತಿಭಟನೆ ಯಶಸ್ವಿಯಾಗಿ ನಡೆದರೂ ಸರಕಾರ ಅದಕ್ಕೆ ಸ್ಪಂದಿಸಿಲ್ಲ. ಅದ್ದರಿಂದ ಮುಂದಿನ ಹಂತದ ಹೋರಾಟವಾಗಿ 2020ರ ಜುಲೈ 3ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ಕಾರ್ಮಿಕ ವರ್ಗ ನಿರ್ಧರಿಸಿದೆ. ಅಂದು ದೇಶಾಧ್ಯಂತ ದೇಶ, ರಾಜ್ಯ, ಜಿಲ್ಲೆ, ತಾಲೂಕು, ಹಾಗೂ ಗ್ರಾಮಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಲಿದ್ದೇವೆ. ನಮ್ಮ ಜಿಲ್ಲೆಯಲ್ಲೂ ವಿವಿಧ ಕೇಂದ್ರಗಳಲ್ಲಿ ಈ ಪ್ರತಿಭಟನೆಗಳು ನಡೆಯಲಿವೆ.
ಮುಖ್ಯ ಬೇಡಿಕೆಗಳು.
-ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮೂಲಕ ದುರ್ಭಲಗೊಳಿಸುವುದನ್ನು ಕೂಡಲೇ ನಿಲ್ಲಿಸಿ.
-ಲಾಕ್ಡೌನ್ ಸಂದರ್ಭದ ವೇತವನ್ನು ಪಾವತಿಸಿ, ಕೆಲಸ ಕೊಡಿ.
– ಕೊರೋನಾ ವಾರಿಯರ್ಸರನ್ನು ಖಾಯಂಗೊಳಿಸಿ, ರಕ್ಷಿಸಿ
– ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವವರಿಗೆ 6 ತಿಂಗಳು ಮಾಸಿಕ ರೂ7500 ಪರಿಹಾರ ಕೊಡಿ.
– ಎಲ್ಲಾ ಕಾರ್ಮಿಕರಿಗೆ 6 ತಿಂಗಳ ವರೆಗೆ ಪಡಿತರ ಒದಗಿಸಿ.
– ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಗಳಿಗೆ ನಗರವಾಸಿಗಳಿಗೂ ವಿಸ್ತರಿಸಿ.
– ವಲಸೆ ಕಾರ್ಮಿಕರಿಗೆ ಊರಿಗೆ ಹೋಗಲು ಅನುವು ಮಾಡಿಕೊಡಿ. ಅವರಿಗೂ ಉದ್ಯೋಗ ಖಾತ್ರಿ ಯೋಜನೆ ಜಾರಿಮಾಡಿ.
– ಖಾಸಗೀಕರಣ ನಡೆಯನ್ನು ಕೈಬಿಡಿ.
– ನೌಕರರ ತುಟ್ಟಿಬತ್ತೆ ಸ್ಥಗಿತೀಕರಣ ಕೈಬಿಡಿ.
– ಯೋಜನಾ ನೌಕರರಿಗೆ ಕೊರೋನಾ ಕೆಲಸದ ಪ್ರೋತ್ಸಾಹಧನ ಕೊಡಿ.
– ಅನೇಕ ಅಸಂಘಟಿತ ಕಾರ್ಮಿಕರಿಗೆ ಸಹಾಯಧನ ಘೋಷಣೆಯಾಗಿದ್ದರೂ ಅದು ಎಲ್ಲರಿಗೂ ಸರಿಯಾಗಿ ತಲುಪಿಲ್ಲ. ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ.
– ಬೀಡಿ, ಟೈಲರ್ಸ್, ಹೊಟೀಲ್ ಸಾರಿಗೆ, ಬೀದಿಬದಿ, ಹಮಾಲಿ ಮುಂತಾದ ಅಸಂಘಟಿತ ಕಾರ್ಮಿಕರಿಗೆ ಇದುವರೆಗೂ ಯಾವುದೇ ಸಹಾಯಧನ ಘೋಷಣೆಯಾಗಿಲ್ಲ. ಅವರಿಗೆ ಕನಿಷ್ಠ 10000/- ಸಹಾಯಧನ ಕೂಡಲೇ ಘೋಷಿಸಿ.
= ಸಣ್ಣ ಉದ್ದಿಮೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಲಾಕ್ಡೌನ್ ಅವಧಿಯ ಸಂಬಳವನ್ನು ಸರಕಾರ ಭರಿಸಲಿ.
-ಬಂಡವಾಳ ಹಿಂತೆಗೆತ, ಖಾಸಗೀಕರಣ, ದೇಶದ ಪ್ರಮುಖ ಸಂಸ್ಥೆಗಳಲ್ಲಿ ವಿದೇಶಿ ಹೂಡಿಕೆಗೆ ಅನುವು ಮಾಡಿ ಕೊಡುವುದು ಮುಂತಾದುವುಗಳನ್ನು ಕೂಡಲೇ ನಿಲ್ಲಿಸಿ.