ಕೇಂದ್ರ ಬಜೆಟ್ : ಸರ್ವೇ ಜನ ಸುಖಿನೋ ಭವಂತು – ವೇದವ್ಯಾಸ ಕಾಮತ್

Spread the love

ಕೇಂದ್ರ ಬಜೆಟ್ : ಸರ್ವೇ ಜನ ಸುಖಿನೋ ಭವಂತು – ವೇದವ್ಯಾಸ ಕಾಮತ್

ಮಂಗಳೂರು : ರೈತರ, ಮಧ್ಯಮ ವರ್ಗದವರ, ಯುವ ಜನಾಂಗದ ಮತ್ತು ಮಹಿಳೆಯರ ಹಿತವನ್ನು ಗಮನಿಸಿ ಭವಿಷ್ಯದ ಸದೃಢ ಭಾರತವನ್ನು ಕಟ್ಟುವ ಬಜೆಟ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ವಿತ್ತಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ರೈತರಿಗೆ ಹತ್ತು ಲಕ್ಷ ಕೋಟಿ ಸಾಲ, ರೈತರ ಸಾಲದ ಮೇಲೆ ಬಡ್ಡಿ ವಿನಾಯ್ತಿ, 600 ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳು, 100 ಜಿಲ್ಲೆಗಳಲ್ಲಿ ಅಂತರಾಷ್ಟ್ರೀಯ ಕೌಶಲ್ಯ ಕೇಂದ್ರ, ನರೇಗಾ ಯೋಜನೆಗೆ 48 ಸಾವಿರ ಕೋಟಿ, ನಿರಾಶ್ರಿತರಿಗೆ 1 ಕೋಟಿ ಮನೆ ನಿರ್ಮಾಣ, ರೈಲ್ವೆ ಸುರಕ್ಷತೆಗೆ 1ಲಕ್ಷ ಕೋಟಿ, 2019ರೊಳಗೆ ಪ್ರತಿ ಮನೆಗೆ ಶೌಚಾಲಯ, ಸಾರಿಗೆ ವಲಯಕ್ಕೆ 2.41 ಲಕ್ಷ ಕೋಟಿ, ಪ್ರತಿ ಮನೆಗೆ ವಿದ್ಯುತ್, ಕಾರ್ಮಿಕ ಕಾನೂನು ಸರಳಿಕರಣ, ಔಷಧಗಳ ಕಾನೂನು ಬದಲಾವಣೆಯಿಂದ ದರ ಸಾಕಷ್ಟು ಇಳಿಕೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 52393 ಕೋಟಿ, 184 ಕೋಟಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಮೀಸಲು, ರೂಪಾಯಿ ಹಿಂತೆಗೆತದಿಂದ 17% ತೆರಿಗೆ ಸಂಗ್ರಹದಲ್ಲಿ ಸುಧಾರಣೆ, ಮಧ್ಯಮ ವರ್ಗದವರಿಗೆ ಆದಾಯ ತೆರಿಗೆಯಲ್ಲಿ 3 ಲಕ್ಷದ ತನಕ ವಿನಾಯಿತಿ ನಂತರ 5 ಲಕ್ಷದ ತನಕ ಕೇವಲ 5% ತೆರಿಗೆ, ಮಧ್ಯಮ ಮತ್ತು ಕಿರು ಕೈಗಾರಿಕೆಗಳಿಗೆ ಬಡ್ಡಿದರದಲ್ಲಿ ಇಳಿಕೆ, ಅಂಚೆ ಕಚೇರಿಗಳಲ್ಲಿಯೇ ಪಾಸ್ ಪೋರ್ಟ ಲಭ್ಯ ಸಹಿತ ಅನೇಕ ಯೋಜನೆಗಳನ್ನು ಈ ಬಾರಿಯ ಬಜೆಟ್ ಹೊಂದಿದೆ.
ಮುಂದಿನ ದಿನಗಳಲ್ಲಿ ಜಿಎಸ್‍ಟಿ ಜಾರಿಗೆ ಬಂದ ಬಳಿಕ ರಾಜ್ಯ ಮತ್ತು ರಾಷ್ಟ್ರ ಸಮೃದ್ಧವಾಗಿ ಅಭಿವೃದ್ಧಿ ಹೊಂದಲಿವೆ. ಗೃಹಸಾಲದಲ್ಲಿ ಬಡ್ಡಿದರ ಇಳಿಕೆ ಮತ್ತು ಎಲ್ಲ ಸಾಲದ ಮೇಲಿನ ಬಡ್ಡಿದರಗಳು ಇಳಿಕೆ, 14 ಲಕ್ಷ ಅಂಗನವಾಡಿಗಳ ಸ್ಥಾಪನೆ, ಗರ್ಭೀಣಿಯರಿಗೆ 6 ಸಾವಿರ ನೆರವು ಸಹಿತ ಈ ಬಾರಿಯ ಬಜೆಟ್ ಅಭಿವೃದ್ಧಿಯ ಶಕೆಯಲ್ಲಿ ಹೊಸದಾಪುಗಾಲು ಇಟ್ಟಿದೆ ಎಂದು ವೇದವ್ಯಾಸ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬದಲಾವಣೆಯತ್ತ ಭಾರತ, ಅತ್ಯುತ್ತಮ ಬಜೆಟ್ – ದಕ ಬಿಜೆಪಿ ಅಭಿನಂದನೆ

ಬದಲಾವಣೆಯತ್ತ ಭಾರತ, ಅತ್ಯುತ್ತಮ ಬಜೆಟ್ ಮಂಡನೆಗಾಗಿ ಕೇಂದ್ರದ ವಿತ್ತ ಸಚಿವರಾದ ಶ್ರೀ ಅರುಣ್ ಜೇಟ್ಲಿ ಹಾಗೂ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ದಕ್ಷಿಣ ಕನ್ನಡ ಬಿಜೆಪಿ ಅಭಿನಂದಿಸುತ್ತದೆ.

ಅಭಿವೃದ್ಧಿಯ ಮಂತ್ರವನ್ನು ಜಪಿಸುತ್ತಾ ಬಡವರ ಪರವಾಗಿ ಮಾತನಾಡುತ್ತಾ ದೇಶದ ಪ್ರಗತಿಯನ್ನು ಕೇವಲ ಪುಸ್ತಕಕ್ಕೆ ಸೀಮಿತವಾಗಿಸುತ್ತಾ ಕಾಂಗ್ರೆಸ್‍ನ ಹತ್ತು ವರ್ಷಗಳ ದುರಾಡಳಿತ ಭಾರತ ವಿಶ್ವದಲ್ಲಿ ಹಿಂದೆ ಬೀಳುವಂತೆ ಮಾಡಿತ್ತು. ಆದರೆ ಸದ್ದಿಲ್ಲದೆ, ಟೀಕೆ-ಟಿಪ್ಪಣಿಗಳನ್ನು ಮಾಡದೆ ಕೇಂದ್ರದ ಮೋದಿಜಿ ನೇತೃತ್ವದ ಸರ್ಕಾರ ಭಾರತವನ್ನು ಪ್ರಗತಿಪಥದಲ್ಲಿ ಮುನ್ನಡೆಸುತ್ತಿದೆ ಎಂಬುದಕ್ಕೆ 2017-18ರ ಬಜೆಟ್ ಜೀವಂತ ನಿದರ್ಶನವಾಗಿ ನಮ್ಮ ಮುಂದಿದೆ.

ಭಾರತದ ಬೆನ್ನುಲುಬಾಗಿ ನಿಂತಿರುವ ಗ್ರಾಮೀಣ ಪ್ರದೇಶಗಳಿಗೆ ಮೀಸಲಾಗಿಸುವ ಹಣದ ವ್ಯವಸ್ಥೆಯಲ್ಲಿ ಶೇ.20ರಷ್ಟು ಏರಿಸುವ ಮೂಲಕ ಗ್ರಾಮೀಣಾಭಿವೃದ್ಧಿ ತನ್ನ ಬದ್ಧತೆಯನ್ನು ಎತ್ತಿ ತೋರಿಸಿರುವುದು ಮಾತ್ರವಲ್ಲದೆ ರೈತ ಸ್ನೇಹಿ ಎಂಬುದನ್ನು ಸಾಬೀತು ಪಡಿಸಿದೆ. ಸುಮಾರು ಹತ್ತು ಲಕ್ಷ ಕೋಟಿಗಳಷ್ಟು ಹಣವನ್ನು ಕೃಷಿಗೆ ಮೀಸಲಿಟ್ಟಿರುವುದು ರೈತರ ಪರ ಸರ್ಕಾರಕ್ಕಿರುವ ಕಾಳಜಿಗೆ ಇರುವ ಕೈಗನ್ನಡಿಯಾಗಿದೆ. ಸುಮಾರು ಹತ್ತು ಸಾವಿರ ಕೋಟಿಗಳಷ್ಟು ಹಣವನ್ನು ನರೇಗಾ ಯೋಜನೆ ಮೀಸಲಾತಿಗೆ, ಒಟ್ಟು ಗ್ರಾಮೀಣಾಭಿವೃದ್ಧಿಗೆ ಕಳೆದ ವರ್ಷಕ್ಕಿಂತ ಶೇ. 24ರಷ್ಟು ಹೆಚ್ಚಾಗಿರುವುದು ಟೀಕಾಕಾರರನ್ನು ಅವಿತುಕೊಳ್ಳುವಂತೆ ಮಾಡಿದೆ. ದೇಶದ ಇನ್ಪ್ರಾಸ್ಟ್ರಕ್ಚರ್ ವ್ಯವಸ್ಥೆಗಳಿಗೆ ಸುಮಾರು 4 ಲಕ್ಷ ಕೋಟಿ, ರಕ್ಷಣಾ ವ್ಯವಸ್ಥೆಗೆ 2.74 ಲಕ್ಷ ಕೋಟಿಗಳನ್ನು ಮೀಸಲಿಟ್ಟಿರುವುದು ಇತಿಹಾಸದಲ್ಲಿ ಇದೇ ಪ್ರಥಮ ಹಾಗೂ ಇಟ್ಟಿರುವ ದಿಟ್ಟ ಹೆಜ್ಜೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಗಳ ಮೇಲೆ ಹೇರಲಾಗುವ ಕಾರ್ಪೋರೇಟ್ ತೆರಿಗೆಯನ್ನು ಶೇ. 5 ರಷ್ಟು ಇಳಿಮುಖಗೊಳಿಸಿರುವುದು ಬರುವಂತಹ ದಿನಗಳಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಲಾಗಿದೆ ಮಾತ್ರವಲ್ಲದೆ ಔದ್ಯೋಗಿಕ ರಂಗದಲ್ಲಿ ಹೊಸ ಕ್ರಾಂತಿಯೊಂದು ಸೃಷ್ಟಿಸಲಿದೆ. ಇಷ್ಟು ಮಾತ್ರವಲ್ಲದೆ 2.5 ಲಕ್ಷ- 5 ಲಕ್ಷದವರೆಗಿನ ವೈಯುಕ್ತಿಕ ಆದಾಯದ ತೆರಿಗೆಯನ್ನು ಶೇ. 50ರಷ್ಟು ಇಳಿಸಿರುವ ಅತ್ಯಂತ ಕ್ರಾಂತಿಕಾರಿ ಮಾತ್ರವಲ್ಲದೆ ಮಧ್ಯಮ ವರ್ಗಾ ಹಾಗೂ ವೇತನಾಧಾರಿತ ಕುಟುಂಬಗಳ ಶ್ರೇಯಸ್ಸಿಗೆ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ.

ಒಟ್ಟಾರೆ ಅತ್ಯದ್ಭುತವಾದ ಬಜೆಟ್ ಘೋಷಿಸಿದ ಶ್ರೀ ಅರುಣ್ ಜೇಟ್ಲಿ ಹಾಗೂ ಶ್ರೀ ನರೇಂದ್ರ ಮೋದಿಯವರು ಹೃತ್ಪೂರ್ವಕ ಅಭಿನಂದನೆಗಳನ್ನು ದಕ್ಷಿಣ ಕನ್ನಡ ಜಿಲ್ಲಾ ವಕ್ತಾರ ವಿಕಾಸ್ ಪುತ್ತೂರು ಅರ್ಪಿಸಿದ್ದಾರೆ.


Spread the love