Home Mangalorean News Kannada News ಕೇಂದ್ರ ಸರಕಾರದ ಬ್ಯಾಂಕ್‌ ವಿಲೀನ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ

ಕೇಂದ್ರ ಸರಕಾರದ ಬ್ಯಾಂಕ್‌ ವಿಲೀನ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ

Spread the love

ಕೇಂದ್ರ ಸರಕಾರದ ಬ್ಯಾಂಕ್‌ ವಿಲೀನ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ

ಉಡುಪಿ: ಕೇಂದ್ರ ಸರಕಾರದ ಬ್ಯಾಂಕ್‌ ವಿಲೀನಿಕರಣ ಧೋರಣೆ ವಿರೋಧಿಸಿ ಜಿಲ್ಲಾ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆ ಹಾಗೂ ಕಾರ್ಪೊರೇಶನ್‌ ಬ್ಯಾಂಕ್‌ ಅಧಿಕಾರಿಗಳು ಸಂಘಟನೆ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಬ್ಯಾಂಕ್‌ ನೌಕರರ ಸಂಘದ ಅಧ್ಯಕ್ಷ ರಾಮ್‌ಮೋಹನ್‌, ಅಧಿಕಾರಿಗಳ ಸಂಘಟನೆಯ ಮುಖಂಡರಾದ ಅಶೋಕ್ ಕೋಟ್ಯಾನ್‌  ಮಾತನಾಡಿ, ಕೇಂದ್ರ ಸರಕಾರ ನೋಟು ರದ್ದುಗೊಳಿಸಿದಾಗ ಸಾರ್ವಜನಿಕರಿಗೆ ಸಮಸ್ಯೆಯಾಗ ಬಾರದು ಎನ್ನುವ ನಿಟ್ಟಿನಲ್ಲಿ ಬ್ಯಾಂಕ್‌ ಸಿಬಂದಿಗಳು ಹಗಲಿರಳು ಕೆಲಸ ಮಾಡಿದ್ದಾರೆ. ಆದರೂ ಕೇಂದ್ರ ಸರಕಾರ ಕಳೆದ 2 ವರ್ಷದಿಂದ ಸಿಬಂದಿಗಳ ವೇತನ ಪರಿಷ್ಕರಣೆ ಮುಂದಾಗಿಲ್ಲ. ಬ್ಯಾಂಕ್‌ ವಿಲೀನಿಕರಣ ಕೈಬಿಟ್ಟು ನೌಕರರಿಗೆ ಪೂರಕವಾಗುವಂತ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಎಸ್‌ಬಿಐ ಜತೆ ಸಹವರ್ತಿ ಬ್ಯಾಂಕ್‌ಗಳನ್ನು ಹಾಗೂ ವಿಜಯಾ ಬ್ಯಾಂಕ್‌, ದೇನಾ ಬ್ಯಾಂಕ್‌ಗಳನ್ನು ಬ್ಯಾಂಕ್‌ ಆಫ್‌ ಬರೋಡಾದೊಂದಿಗೆ ವಿಲೀನಗೊಳಿಸಲಾಗಿದೆ. ಈಗ 10 ಬ್ಯಾಂಕ್‌ಗಳ ವಿಲೀನದೊಂದಿಗೆ 6 ಬ್ಯಾಂಕ್‌ಗಳು ಅಸ್ತಿತ್ವ ಕಳೆದುಕೊಳ್ಳಲಿವೆ. ಬ್ಯಾಂಕ್‌ಗಳ ವಿಲೀನದಿಂದ ಆರ್ಥಿಕತೆ ಬಲಗೊಳ್ಳುವುದಿಲ್ಲ. ಬದಲಾಗಿ ಅನುತ್ಪಾದಕ ಆಸ್ತಿಯ (ಎನ್‌ಪಿಎ) ಪ್ರಮಾಣ ಹೆಚ್ಚಾಗುತ್ತದೆ ಎಂದು ಟೀಕಿಸಿದರು.

ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಕೈಗಾರಿಕಾ ಕ್ಷೇತ್ರ ನಿರಾಶಾದಾಯಕವಾಗಿದೆ. ಇಂತಹ ಸ್ಥಿತಿಯಲ್ಲಿ ಆರ್ಥಿಕತೆಗೆ ಚೇತರಿಕೆ ನೀಡುವುದರ ಬದಲು ಬ್ಯಾಂಕ್‌ಗಳ ವಿಲೀನೀಕರಣದ ಅಗತ್ಯ ಇರಲಿಲ್ಲ. ಇದರಿಂದ ಆರ್ಥಿಕತೆ ಮತ್ತಷ್ಟು ಕುಸಿಯಲಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಲಿದೆ. ದೇಶಕ್ಕೆ ದೊಡ್ಡ ಬ್ಯಾಂಕ್‌ಗಳ ಅವಶ್ಯಕತೆ ಇಲ್ಲ; ಬದಲಾಗಿ ಸಶಕ್ತ ಬ್ಯಾಂಕ್‌ಗಳ ಅಗತ್ಯ ಇದೆ ಎಂದರು.

ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಬ್ಯಾಂಕ್‌ ನೌಕರರ    ಸಂಘಟನೆಯ ಪದಾಧಿಕಾರಿಗಳಾದ ಮನೋಜ್‌ ಕುಮಾರ್, ವಂಶಿಕೃಷ್ಣ, ಜಯನ್ ಮಲ್ಪೆ, ರಮೇಶ್, ಜಿಲ್ಲಾ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ ಸಂಚಾಲಕ ಹೆರಾಲ್ಡ್‌ ಡಿಸೋಜ ಇದ್ದರು.


Spread the love

Exit mobile version