ಕೇಂದ್ರ ಸರ್ಕಾರದ ಜನವಿರೋಧಿ ನೀತಿಗೆ ದಕ ಜಿಲ್ಲಾ ಎನ್.ಎಸ್.ಯು.ಐ. ಖಂಡನೆ
ಮಂಗಳೂರು: ಕೇಂದ್ರದ ಬಿ.ಜೆ.ಪಿ.ಸರ್ಕಾರವು ಜನರಿಗೆ ಅತ್ಯವಶ್ಯಕವಾಗಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ದಿನದಿಂದ ದಿನಕ್ಕೆ ಏರಿಸುತ್ತಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ.ಯು ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಉಪಾಧ್ಯಕ್ಷ ಶೌವಾದ್ ಗೂನಡ್ಕರವರು ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ತಾವು ಅಧಿಕಾರಕ್ಕೆ ಬಂದಲ್ಲಿ ತೈಲ ಬೆಲೆಗಳನ್ನು ಕಡಿತಗೊಳಿಸುವುದಾಗಿ ದೇಶದ ಜನರಿಗೆ ಭರವಸೆಯನ್ನು ಕೊಟ್ಟಿದ್ದಂತಹ ಬಿ.ಜೆ.ಪಿ.ಪಕ್ಷವು ಅವೆಲ್ಲವನ್ನೂ ಮರೆತು ಜನವಿರೋಧಿಯಾಗಿ ಆಡಳಿತವನ್ನು ನಡೆಸುತ್ತಿದೆ.ನರೇಂದ್ರ ಮೋದಿಯವರು ಕೇವಲ ಭಾಷಣದಲ್ಲಿ ಮಾತ್ರ ಅಚ್ಚೇ ದಿನ್ ಎಂಬ ಕನಸಿನ ಮೂಟೆಯನ್ನು ಜನರಿಗೆ ತೋರಿಸುತ್ತಿದ್ದಾರೆ.ಕೇಂದ್ರ ಸರ್ಕಾರದ ಮೇಲೆ ಜನರ ವಿಶ್ವಾಸವು ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಯು.ಪಿ.ಎ.ಸರ್ಕಾರದ ಅವಧಿಯಲ್ಲಿ 1 ರೂಪಾಯಿ ಕೂಡ ಏರಿಕೆಯಾದಲ್ಲಿ ಬೀದಿಗೆ ಬಂದು ಪ್ರತಿಭಟನೆಯನ್ನು ಮಾಡುತ್ತಿದ್ದ ಬಿ.ಜೆ.ಪಿ.ಕಾರ್ಯಕರ್ತರು ಈಗ ಯಾವ ಬಿಲದೊಳಗೆ ಹೋಗಿ ಸೇರಿದ್ದಾರೆಂದು ಶೌವಾದ್ ಗೂನಡ್ಕರವರು ಪ್ರಶ್ನಿಸಿದ್ದಾರೆ.ಭಾರತದ ಜಿ.ಡಿ.ಪಿ.ಯು ಕೂಡ ಕುಂಠಿತವಾಗುತ್ತಿದ್ದು ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ.ಕೇಂದ್ರ ಸರ್ಕಾರವು ಕೇವಲ ಕುದುರೆ ವ್ಯಾಪಾರ ಮಾಡುವುದರಲ್ಲಿ ಹಾಗೂ ಯು.ಪಿ.ಎ.ಸರ್ಕಾರದ ಯೋಜನೆಗಳನ್ನು ಉದ್ಘಾಟನೆ ಮಾಡುವುದರಲ್ಲೇ ಬ್ಯುಸಿಯಾಗಿದೆ ಅದು ಬಿಟ್ಟು ಈ ದೇಶದ ಸರ್ವತೋಮುಖ ಅಭಿವೃದ್ದಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯಾವ ಕೊಡುಗೆಯನ್ನು ನೀಡಿಲ್ಲವೆಂದು ಅವರು ಹೇಳಿದ್ದಾರೆ.