ಕೇದಿಗೆ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಉಡುಪಿ ಮಾಧ್ಯಮ ಮಿತ್ರರಿಂದ ಯಕ್ಷರೂಪಕ ಪ್ರದರ್ಶನ
ಉಡುಪಿ : ದಿನಾಲೂ ಸುದ್ದಿಗಳನ್ನು ಬೆನ್ನಟ್ಟಿ ಸುದ್ದಿಗಳನ್ನು ಮಾಡುತಿದ್ದ ಪತ್ರಕರ್ತರು ಶನಿವಾರ ವೇಷ ತೊಟ್ಟು ಬರವಣಿಗೆಯೊಂದಿಗೆ, ಯಕ್ಷರೂಪಕ ಅಭಿನಯಿಸಿ ಎಲ್ಲರನ್ನು ರಂಜಿಸಿದರು.
ಹೌದು ಮಂಗಳೂರಿನ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಶನಿವಾರ ಸಂಜೆ ಕೇದಿಗೆ ಪ್ರತಿಷ್ಠಾನದಿಂದ ಏಳನೇ ವರ್ಷದ ಭಾಸ್ಕರ್ ಸಂಸ್ಕರಣ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಡುಪಿ ಪ್ರೆಸ್ ಕ್ಲಬ್ಬಿನ ಮಾಧ್ಯಮ ಮಿತ್ರರ ತಂಡ ವೀರ ಅಭಿಮನ್ಯು ಯಕ್ಷರೂಪಕ ಪ್ರದರ್ಶನ ನೀಡಿ ಎಲ್ಲರನ್ನು ರಂಜಿಸಿದರು.
ಹೆಸರಾಂತ ಯಕ್ಷಗುರು ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ಯಕ್ಷರೂಪಕ ಉತ್ತಮವಾಗಿ ಪ್ರದರ್ಶಿತಗೊಂಡಿತು.
ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ ಕರ್ನಲ್ ಪ್ರೇಮ್ಕುಮಾರ್ ಶೆಟ್ಟಿ ಅವರಿಗೆ ‘ಲಕ್ಷ್ಮೀ ಭಾಸ್ಕರ ರಾಷ್ಟ್ರ ಸೇವಾ ನಿಷ್ಠ’ ಪ್ರಶಸ್ತಿ, ಜಾದೂಗಾರ ಕುದ್ರೋಳಿ ಗಣೇಶ್ ಅವರಿಗೆ ‘ಲಕ್ಷ್ಮೀ ಭಾಸ್ಕರ ವಿಸ್ಮಯ ಕಲಾ ನಿಷ್ಠ’ ಪ್ರಶಸ್ತಿ, ಯಕ್ಷಗಾನ ಭಾಗವತ ಸತ್ಯನಾರಾಯಣ ಪುನಿಚಿತ್ತಾಯ ಅವರಿಗೆ ‘ಲಕ್ಷ್ಮೀ ಭಾಸ್ಕರ ಯಕ್ಷಗಾನ ನಿಷ್ಠ’ ಪ್ರಶಸ್ತಿ, ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಭವನ್ ಪಿ.ಜಿ. ಅವರಿಗೆ ಲಕ್ಷ್ಮೀ ಭಾಸ್ಕರ ಚಿತ್ರಕಲಾ ನಿಷ್ಠ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾರತೀಯ ಸೀನಿಯರ್ ಚೇಂಬರ್ನ ಎಂ.ಆರ್. ಜಯೇಶ್, ಗೌರವ ಅತಿಥಿಯಾಗಿ ದ.ಕ. ಜಿಲ್ಲೆಯ ಮಾಜಿ ಯೋಧರ ಸಂಘದ ಅಧ್ಯಕ್ಷ ವಿಕ್ರಮ ದತ್ತ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಬ್ರಿಗೇಡಿಯರ್ ಐಎನ್ರೈ, ಅನಂತ ಪದ್ಮನಾಭ, ಗಣೇಶ್ ಸೋಮಯಾಜಿ, ದಿನೇಶ್ ಹೊಳ್ಳ, ಜೇಸಿಐನ ಅನಿಲ್ಕುಮಾರ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೇಘಾ ಭಟ್ ಪ್ರಾರ್ಥಿಸಿದರು. ಕೇದಿಗೆ ಅರವಿಂದ ರಾವ್ ಸ್ವಾಗತಿಸಿದರು. ಅರೆಹೊಳೆ ರಾವ್ ನಿರೂಪಿಸಿದರು. ಗಾಯತ್ರಿ ರಾವ್ ವಂದಿಸಿದರು.
ಇದೇ ಮಾಧ್ಯಮ ತಂಡ ಆಗಸ್ಟ್ 5 ರಂದು ಬ್ರಹ್ಮಾವರದಲ್ಲಿ ನಡೆಯಲಿರುವ ವಡ್ಡರ್ಸೆ ಪ್ರಶಸ್ತಿ ಪ್ರದಾನದಂದು ಇದೇ ರೂಪಕದ ಪ್ರದರ್ಶನ ನೀಡಲಿದೆ.