Home Mangalorean News Kannada News ಕೇಬಲ್ ಸಂಪರ್ಕ: ಗ್ರಾಮೀಣ ಪ್ರದೇಶಗಳಿಗೂ ಸೆಟ್‍ಟಾಪ್ ಬಾಕ್ಸ್ ಕಡ್ಡಾಯ

ಕೇಬಲ್ ಸಂಪರ್ಕ: ಗ್ರಾಮೀಣ ಪ್ರದೇಶಗಳಿಗೂ ಸೆಟ್‍ಟಾಪ್ ಬಾಕ್ಸ್ ಕಡ್ಡಾಯ

Spread the love

ಕೇಬಲ್ ಸಂಪರ್ಕ: ಗ್ರಾಮೀಣ ಪ್ರದೇಶಗಳಿಗೂ ಸೆಟ್‍ಟಾಪ್ ಬಾಕ್ಸ್ ಕಡ್ಡಾಯ

ಮಂಗಳೂರು:  ಜಿಲ್ಲೆಯಲ್ಲಿ ಕೇಬಲ್ ಸಂಪರ್ಕ ಸಂಪೂರ್ಣ ಡಿಜಿಟಲೀಕರಣ ಮಾಡುವ ಕುರಿತು ಎಲ್ಲಾ ಕೇಬಲ್ ಎಂಎಸ್‍ಓಗಳೊಂದಿಗೆ ಗುರುವಾರ  ಜಿಲ್ಲಾಧಿಕಾರಿ ಕಛೇರಿಯಲ್ಲಿ ಸಭೆ ನಡೆಯಿತು.

ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ನೋಡೆಲ್ ಅಧಿಕಾರಿ (ಡಿಜಿಟೈಸೇಷನ್ ಆಫ್ ಕೇಬಲ್ ಟಿವಿ ನೆಟ್‍ವರ್ಕ್) ಕುಮಾರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅಪರ ಜಿಲ್ಲಾಧಿಕಾರಿಗಳು ಮಾತನಾಡಿ,  ಭಾರತ ಸರಕಾರವು ದೇಶದೆಲ್ಲೆಡೆ ಕೇಬಲ್ ಟಿವಿ ಡಿಜಿಟೈಸೇಷನ್ ಕಡ್ಡಾಯಗೊಳಿಸಿದ್ದು, ಈಗಾಗಲೇ ಹಂತ 1, ಹಂತ 2 ಮತ್ತು ಹಂತ 3 ಸಂಪೂರ್ಣಗೊಂಡಿರುತ್ತದೆ. ಈಗ ಹಂತ 4ರಡಿಯಲ್ಲಿ  ದೇಶದ ಗ್ರಾಮೀಣ ಪ್ರದೇಶಗಳ ಮನೆಗಳಲ್ಲಿರುವ ಕೇಬಲ್ ಸಂಪರ್ಕವನ್ನು ಡಿಜಿಟಲೀಕರಣಗೊಳಿಸುವ ಕಾರ್ಯವು ಚಾಲ್ತಿಯಲ್ಲಿರುತ್ತದೆ ಎಂದರು.

3ನೇ ಹಂತದ ಡಿಜಿಟೈಸೇಷನ್ ಕಾರ್ಯವು ನಗರ ಪ್ರದೇಶವನ್ನು ಒಳಗೊಂಡಿದ್ದು, ಇದು ಮುಕ್ತಾಯದ ಹಂತಕ್ಕೆ ಬಂದಿರುತ್ತದೆ. 3ನೇ ಹಂತದ ಡಿಜಿಟೈಸೇಷನ್ ಕಾರ್ಯ ಪೂರ್ಣಗೊಳಿಸಲು ಭಾರತ ಸರಕಾರವು 2016ರ ಡಿಸೆಂಬರ್ 31ನ್ನು ಅಂತಿಮ ದಿನವನ್ನಾಗಿ ನಿಗಧಿಪಡಿಸಿದೆ.  ಜನವರಿ ಅಂತ್ಯದ ನಂತರ ಹಿಂದಿನ  ಕೇಬಲ್ ಸಂಪರ್ಕದ ಅನಲಾಗ್  ಸಿಗ್ನಲ್ ಸ್ಥಗಿತಗೊಳ್ಳಲಿದೆ. 4ನೇ ಹಂತದಲ್ಲಿ  ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟೈಸೇಷನ್ ಕಾರ್ಯವನ್ನು ಕೈಗೆತ್ತಿಗೊಳ್ಳಲಾಗಿದ್ದು, ಈ ಕಾರ್ಯವನ್ನು 2017ರ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕು.  ಮಾರ್ಚ್ ತಿಂಗಳಿನಿಂದ ಅನಲಾಗ್ ಸಿಗ್ನಲ್  ಸ್ಥಗಿತ ಗೊಳಿಸಲಾಗುವುದಾಗಿ ಕೇಬಲ್ ನಿರ್ವಾಹಕ ಸಂಸ್ಥೆಗಳಿಗೆ ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.

ಕೇಬಲ್ ಟಿ.ವಿ ಒಪರೇಟರ್‍ಗಳು  ಒಂದು ಸಂಪರ್ಕದ ಹೆಸರಿನಲ್ಲಿ ಐದಾರು ಮನೆಗಳಿಗೆ ಸಂಪರ್ಕ ನೀಡುವುದು, ಆ ಮೂಲಕ ಸರ್ಕಾರಕ್ಕೆ ತೆರಿಗೆ ಪಾವತಿಸಲು ತಪ್ಪಿಸುವುದನ್ನು ತಡೆಯುವುದು ಹಾಗೂ ಗುಣಮಟ್ಟದ ಟಿ.ವಿ ಕಾರ್ಯಕ್ರಮ ಲಭಿಸುವಂತೆ ನೋಡಿಕೊಳ್ಳುವುದು ಸೆಟ್‍ಟಾಪ್ ಬಾಕ್ಸ್ ಅಳವಡಿಕೆಯ ಮುಖ್ಯ ಉದ್ದೇಶವಾಗಿದೆ.  ಕೇಬಲ್ ಟಿ.ವಿ ಅಪರೇಟರ್‍ಗಳು ತಾವು ಹೊಂದಿರುವ ಅನಲಾಗ್  ಸಿಗ್ನಲನ್ನು  ಡಿಜಿಟಲೀಕರಣಗೊಳಿಸಿ, ಗ್ರಾಹಕರಿಗೂ ಈ ಬಗ್ಗೆ ಮಾಹಿತಿ ಒದಗಿಸಿ  ಸೆಟ್ ಟಾಪ್ ಬೋಕ್ಸ್ ಕಡ್ಡಾಯವಾಗಿ ಅಳವಡಿಸುವಂತೆ  ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.


Spread the love

Exit mobile version