ಕೇರಳ ಸಮುದ್ರದಲ್ಲಿ ಒತ್ತಡ: ಮೀನುಗಾರರಿಗೆ ದ.ಕ. ಜಿಲ್ಲಾಡಳಿತ ಸೂಚನೆ
ಮಂಗಳೂರು: ಕನ್ಯಾಕುಮಾರಿಯಿಂದ ಕಲ್ಲಿಕೋಟೆಯವರೆಗಿನ ಕರಾವಳಿ ತೀರದಲ್ಲಿ ಸಮುದ್ರದಲ್ಲಿ ನಿಮ್ನ ಒತ್ತಡ ಉಂಟಾಗಿ ಸಮುದ್ರ ಅಲೆಗಳ ಎತ್ತರ ಏರಿಕೆಯಾಗುವ ಸಾಧ್ಯತೆ ಇದ್ದು, ಮೀನುಗಾರಿಕೆಗೆ ತೆರಳದಂತೆ ದಕ ಜಿಲ್ಲಾಡಳಿತ ಸೂಚನೆ ನೀಡಿದೆ.
ಪ್ರಸಕ್ತ ಈ ಸಮುದ್ರ ಒತ್ತಡ ದಕ್ಷಿಣ ಶ್ರೀಲಂಕಾದಿಂದ ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮುಂದಿನ 3 ದಿನಗಳಲ್ಲಿ ಕೇರಳ ಕರಾವಳಿ ತೀರದಲ್ಲಿ 2.5 ರಿಂದ 3.2 ಮೀಟರ್ ವರೆಗೆ ಸಮುದ್ರ ಅಲೆಗಳು ಏರಿಕೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಕೇರಳದಲ್ಲಿ ಮುಂದಿನ 48 ಗಂಟೆಗಳಲ್ಲಿ ಸಮುದ್ರದಲ್ಲಿ ಗಂಟೆಗೆ 60 ಕಿ.ಮೀ. ವೇಗದ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರದಲ್ಲಿ ಯಾವುದೇ ರೀತಿಯ ಬೋಟುಗಳು ಮೀನುಗಾರಿಕೆಗೆ ತೆರಳದಂತೆ ದ.ಕ. ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ. ಅದೇ ರೀತಿ ಈಗಾಗಲೇ ಮೀನುಗಾರಿಕೆಗೆ ತೆರಳಿರುವ ಬೋಟುಗಳು ಸಮುದ್ರದಲ್ಲಿ ಬಲೆಗಳನ್ನು ಹಾಕದಂತೆ ಹಾಗೂ ಬಲೆಗಳನ್ನು ಅಥವಾ ಅಧಿಕ ಭಾರದ ವಸ್ತುಗಳನ್ನು ಬೋಟಿನ ಡೆಕ್ ಮೇಲೆ ಇಡದಂತೆ ಸೂಚಿಸಲಾಗಿದೆ.
ಸಮುದ್ರದಲ್ಲಿ ಬೋಟುಗಳು ಒಬ್ಬಂಟಿಯಾಗಿ ಮೀನುಗಾರಿಕೆಯಲ್ಲಿ ತೊಡಗುವ ಬದಲು ಹಲವು ಬೋಟುಗಳು ಆಸುಪಾಸಿನಲ್ಲಿ ಮೀನುಗಾರಿಕೆಯಲ್ಲಿ ತೊಡಗಿದರೆ ಅಪಾಯದ ತುರ್ತು ಸಂದರ್ಭದಲ್ಲಿ ನೆರವು ನೀಡಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಈಗಾಗಲೇ ಮೀನುಗಾರಿಕಾ ಸಂಘಟನೆಗಳಿಗೆ ಈ ಸಂಬಂಧ ಜಿಲ್ಲಾಡಳಿತ ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.