Home Mangalorean News Kannada News ಕೊಂಕಣಿ ಲೋಕೋತ್ಸವ : ಸಾಂಸ್ಕøತಿಕ ಬದುಕಿನ ವಸ್ತುಗಳ ಸುಂದರ ಪ್ರದರ್ಶನ

ಕೊಂಕಣಿ ಲೋಕೋತ್ಸವ : ಸಾಂಸ್ಕøತಿಕ ಬದುಕಿನ ವಸ್ತುಗಳ ಸುಂದರ ಪ್ರದರ್ಶನ

Spread the love

ಕೊಂಕಣಿ ಲೋಕೋತ್ಸವ : ಸಾಂಸ್ಕøತಿಕ ಬದುಕಿನ ವಸ್ತುಗಳ ಸುಂದರ ಪ್ರದರ್ಶನ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಹಮ್ಮಿ ಕೊಂಡಿರುವ ಮೂರು ದಿನಗಳ ಸಂಭ್ರಮದ ಕೊಂಕಣಿ ಲೋಕೋತ್ಸವ ಕಾರ್ಯಕ್ರಮದ ಅಂಗಣದಲ್ಲಿ ಹರಿದು ಬರುತ್ತಿರುವ ಜನಸಾಗರದ ನಡುವೆ ಎಲ್ಲರ ಗಮನ ಅಲ್ಲಿನ ಶಿಸ್ತು ಸುವ್ಯವಸ್ಥೆಯತ್ತ ಸೆಳೆಯಲ್ಪಡುತ್ತಿದೆ. ಪುರಭವನದ ಎದುರು ವ್ಯವಸ್ಥೆ ಮಾಡಲಾಗಿರುವ ಕೊಂಕಣಿ ಸಂತೆಯಲ್ಲಿ ಹಲವಾರು ಅಂಗಡಿ ಮುಗ್ಗಟ್ಟುಗಳಲ್ಲಿ ಕೊಂಕಣಿ ಬದುಕಿನ ಹಲವಾರು ವಸ್ತು ವಿಷಯಗಳನ್ನು ವಿಕ್ರಯ ಮಾಡಲಾಗುತ್ತಿದೆ. ಕೊಂಕಣಿ ಪಾರಂಪರಿಕ ಪಂಗಡಗಳು ಉತ್ಪಾದಿಸುವ ಕಾಡುತ್ಪತ್ತಿ ಹಾಗೂ ಇತರ ಪಾರಂಪರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಭರದಿಂದ ಸಾಗುತ್ತಿದೆ.

ಅಲ್ಲಿಯೇ ಪಕ್ಕದಲ್ಲಿ ವಿವಿಧ ಕೊಂಕಣಿ ಜನವರ್ಗದವರ ಸಾಂಸ್ಕøತಿಕ ಬದುಕಿನ ವಸ್ತುಗಳ ಸುಂದರ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ. ಹಳೆಯ ಕಾಲದಲ್ಲಿ ಕೃಷಿ, ಪಾರಂಪರಿಕ ಉದ್ದಿಮೆಗಳು, ಜೀವನಾವರ್ತನ ಸಂಸ್ಕಾರಗಳ ಸಂದರ್ಭದಲ್ಲಿ ಬಳಸಲ್ಪಡುತ್ತಿದ್ದ ಹಾಗೂ ಇಂದು ನಿತ್ಯ ಬದುಕಿನಿಂದ ದೂರಾಗಿರುವ ವಿವಿಧ ವಸ್ತುಗಳ ಸಂಗ್ರಹ ಇಲ್ಲಿ ಆಯೋಜಿಸಲಾಗಿದೆ. ಮಾಂಡ್ ಸೊಭಾಣ್, ವಿಶ್ವ ಕೊಂಕಣಿ ಕೇಂದ್ರ, ಮಾರಿಲ್ ಇಗರ್ಜಿ ಹಾಗೂ ಇನ್ನಿತರ ವಿವಿಧ ಸಂಸ್ಥೆಗಳು ಈ ಪ್ರದರ್ಶನದ ವ್ಯವಸ್ಥೆ ಮಾಡಿದ್ದು ಸರ್ವರ ಗಮನ ಸೆಳೆಯುತ್ತಿದೆ.

ನೆರೆದಿರುವ ಸಾವಿರಾರು ಮಂದಿಗೆ ಯಾವುದೇ ಗೊಂದಲವಿಲ್ಲದೆ ರುಚಿಕಟ್ಟು ಆಹಾರದ ವ್ಯವಸ್ಥೆ ಮಾಡಿರುವುದು ಈ ಮಹೋತ್ಸವದ ಇನ್ನೊಂದು ಹಿರಿಮೆ. ಬೆಳ್ಳಂಬೆಳಿಗೆ ನೆರೆದ ಎಲ್ಲರಿಗೂ ಇಡ್ಲಿ ವಡಾ ಸಾಂಬಾರ್ ಚಟ್ನಿ, ಕಾರ್ಕಳ ಕೇಕ್ ಎನ್ನುವ ಕೊಂಕಣಿ ವಿಶೇಷ ಸಿಹಿ ತಿಂಡಿ ಯೊಡನೆ ಚಹಾ ಕಾಫಿಯ ವ್ಯವಸ್ಥೆ ಮಾಡಲಾಗಿತ್ತು. ಅಪರಾಹ್ನಕ್ಕೆ ಚಪಾತಿ, ಆಲೂ ಮಟ್ಟರ್, ಹಿಂಗು ಹಾಕಿ ತಿಂಗಳವರೆ ಗಸಿ, ಬೀನ್ಸ್ ಬಟಾಟೆ ಉಪ್ಕರಿ, ಹಾಗಲಕಾಯಿ ಪೋಡಿ, ದಾಳಿ ತೋವೆ, ಕೆಂಪು ಸಾರು ಮತ್ತು ಬಟಾಟೆ ಹಪ್ಪಳ, ಮಿಕ್ಸ್ ವೆಜಿಟೆಬಲ್ ಉಪ್ಪಿನ ಕಾಯಿ, ಕಡಲೆ ಬೇಳೆ ಗೇರು ಬೀಜ ಪಾಯಸ, ಕೊಂಕಣಿ ತಾಕ್ ಸೇರಿದ ಭೂರಿ ಬೋಜನ ಎಲ್ಲರ ನಾಲಗೆ ರುಚಿಯನ್ನು ತಣಿಸುವಂತಿತ್ತು. ಬೆಳ್ತಿಗೆ ಕುಚ್ಚಲಕ್ಕಿ ಅನ್ನ ಎರಡನ್ನು ವ್ಯವಸ್ಥೆ ಮಾಡಲಾಗಿದೆ. ಈ ಊಟದಲ್ಲಿನ ವಿಶೇಷವೆಂದರೆ ಯಾವುದೇ ಆರೋಗ್ತ ಕೊರತೆಯಿದ್ದವರು ಕೂಡಾ ರುಚಿಯಿಂದ ಸೇವಿಸುವಂತಾಹ , ಸಾಂಪ್ರದಾಯಿಕತೆಯ ಮತ್ತು ಆಧುನೀಕತೆಯ ಸಂಗಮದಂತಿರುವ ಈ ಭೋಜನ ಸಾವಿರಾರು ಜನರ ಹಸಿವನ್ನು ತಣಿಸಿ ಮನ ಮುದಗೊಳಿಸಿತು. ಸಂಯೋಜಕರು ತಿಳಿಸಿರುವಂತೆ ಮೂರು ದಿನಗಳಲ್ಲಿಯೂ (ಉಪ್ಪಿನ ಕಾಯಿಯೂ ಸೇರಿದಂತೆ) ನಿತ್ಯದ ಭೋಜನ ಮತ್ತು ಚಹಾ ತಿಂಡಿ ವ್ಯವಸ್ಥೆಯಲ್ಲಿ ಯಾವುದೇ ಪುನರಾವರ್ತನೆ ಇರುವುದಿಲ್ಲ.


Spread the love

Exit mobile version