ಕೊಡಗಿನ ವಿರಾಜಪೇಟೆ ಹೋಂಸ್ಟೇನಲ್ಲಿ ರೇವ್ ಪಾರ್ಟಿ: ಹೋಂಸ್ಟೇ ಮಾಲೀಕ ಸೇರಿ ಮೂವರ ಬಂಧನ
ಮಡಿಕೇರಿ: ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಲ್ಲೂರಿನ ಹೋಂಸ್ಟೇ ಮೇಲೆ ದಾಳಿ ನಡೆಸಿರುವ ಪೊಲೀಸರು ರೇವ್ ಪಾರ್ಟಿಯಲ್ಲಿ ತೊಡಗಿದ್ದ ಇಬ್ಬರು ಯುವಕರು ಸೇರಿ ಮೂವರನ್ನು ಬಂಧಿಸಿದ್ದಾರೆ.
ಹೋಂಸ್ಟೇ ಮಾಲೀಕ ವಿವೇಕ್ (45), ಹೈದರಾಬಾದ್ ಮೂಲದ ಎಲ್. ನಿತೀಶ್ (23) ಮತ್ತು ಬಿ. ಭರತ್ (22) ಬಂಧಿತರು. ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ನ ಯುವಕ ಮತ್ತು ಯುವತಿಯರ ತಂಡದೊಂದಿಗೆ ಹೋಂಸ್ಟೇಗೆ ಆಗಮಿಸಿ ಇವರೆಲ್ಲರೂ ರೇವ್ ಪಾರ್ಟಿಯಲ್ಲಿ ತೊಡಗಿದ್ದರು ಎನ್ನಲಾಗಿದೆ.
ಹೋಂಸ್ಟೇನಲ್ಲಿ ರೇವ್ ಪಾರ್ಟಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದರು. ರೇವ್ ಪಾರ್ಟಿ ಮಾಡುತ್ತಿದ್ದವರ ಬಳಿಯಿಂದ 65 ಗ್ರಾಂ ಗಾಂಜಾ, ರೇವ್ ಪಾರ್ಟಿಯ ಪ್ರವೇಶ ಶುಲ್ಕವಾಗಿ ಸಂಗ್ರಹಿಸಲಾಗಿದ್ದ 85 ಸಾವಿರ ರೂ. ನಗದು, 21 ಮದ್ಯದ ಬಾಟಲಿಗಳು, ಸೌಂಡ್ ಸಿಸ್ಟಂ ಅನ್ನು ವಶಪಡಿಸಿಕೊಂಡರು. ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್ ಮೂಲಕ ಗ್ರೂಪ್ ರಚಿಸಿಕೊಂಡು ರೇವ್ ಪಾರ್ಟಿ ಕುರಿತು ಪ್ರಚಾರ ಮಾಡಲಾಗುತ್ತಿತ್ತು ಎನ್ನಲಾಗಿದೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.